ಭಾರತದಲ್ಲಿ 2 ಕೊವಿಡ್-19 ಲಸಿಕೆ, 1 ಔಷಧಿಗೆ ಅನುಮೋದನೆ

ನವದೆಹಲಿ, ಡಿಸೆಂಬರ್ 28: ಭಾರತದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಹೋರಾಟದ ಶಕ್ತಿ ಇಮ್ಮಡಿಯಾಗಿದೆ. ಮಂಗಳವಾರವೊಂದೇ ದಿನ ಕೊವಿಡ್-19 ಸೋಂಕಿನ ಎರಡು ಲಸಿಕೆ ಹಾಗೂ ಒಂದು ಔಷಧಿಗೆ "ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ (CDSCO) ಮತ್ತು ಕೇಂದ್ರ ಆರೋಗ್ಯ ಸಚಿವಾಲಯ ಅನುಮೋದನೆ ನೀಡಿದೆ. "ದೇಶದಲ್ಲಿ ಕೊರ್ಬೆವ್ಯಾಕ್ಸ್ ಲಸಿಕೆ, ಕೋವೊವ್ಯಾಕ್ಸ್ ಲಸಿಕೆ ಮತ್ತು ಆಂಟಿ-ವೈರಲ್ ಮೊಲ್ನುಪಿರವಿರ್ ಔಷಧಿಗೆ ಅನುಮೋದನೆ ನೀಡಲಾಗಿದೆ," ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯಾ ಟ್ವೀಟ್ ಮಾಡಿದ್ದಾರೆ. ಭಾರತದ ಮೊದಲ RBD ಪ್ರೊಟೀನ್ ಉಪ-ಘಟಕ ಲಸಿಕೆ
"ಕೊರ್ಬೆವ್ಯಾಕ್ಸ್ ಲಸಿಕೆಯು ಹೈದರಾಬಾದ್ ಮೂಲದ ಸಂಸ್ಥೆ ಬಯೋಲಾಜಿಕಲ್-ಇ ಸಂಸ್ಥೆಯು ಅಭಿವೃದ್ಧಿಪಡಿಸಿದ ಭಾರತದ ಮೊದಲ RBD ಪ್ರೊಟೀನ್ ಉಪ-ಘಟಕ ಲಸಿಕೆಯಾಗಿದೆ. ಇದು ಹ್ಯಾಟ್ರಿಕ್ ಸಾಧನೆಯಾಗಿದ್ದು, ಇದು ಈಗ ಭಾರತದಲ್ಲಿ ಅಭಿವೃದ್ಧಿಪಡಿಸಲಾದ 3ನೇ ಕೊವಿಡ್-19 ಲಸಿಕೆಯಾಗಿದೆ!," ಎಂದು ಮನ್ಸುಖ್ ಮಾಂಡವೀಯಾ ಟ್ವೀಟ್ ಮಾಡಿದ್ದಾರೆ. ಕೋವೊವ್ಯಾಕ್ಸ್ ಉತ್ಪಾದಿಸುವ ಸೀರಂ ಇನ್ಸ್ ಟಿಟ್ಯೂಟ್
ಭಾರತದಲ್ಲಿ ಕೊವಿಶೀಲ್ಡ್ ಲಸಿಕೆಯನ್ನು ಉತ್ಪಾದಿಸುತ್ತಿರುವ ಪುಣೆ ಮೂಲದ ಸೀರಂ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾದ ಸಂಸ್ಥೆಯೇ ಕೋವೊವ್ಯಾಕ್ಸ್ ಲಸಿಕೆಯನ್ನು ಉತ್ಪಾದಿಸುತ್ತಿದೆ. ಸೀರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ (SII) ಸರ್ಕಾರ ಮತ್ತು ನಿಯಂತ್ರಕ ವ್ಯವಹಾರಗಳ ನಿರ್ದೇಶಕ ಪ್ರಕಾಶ್ ಕುಮಾರ್ ಸಿಂಗ್, ಸಂಸ್ಥೆಯ ಕೋವೊವ್ಯಾಕ್ಸ್ ಲಸಿಕೆಗೆ ಅನುಮೋದನೆ ನೀಡುವಂತೆ ಕಳೆದ ಅಕ್ಟೋಬರ್‌ನಲ್ಲಿ ಭಾರತದ ಔಷಧೀಯ ನಿಯಂತ್ರಣ ಪ್ರಾಧಿಕಾರಕ್ಕೆ (DCGI) ಅರ್ಜಿ ಸಲ್ಲಿಸಿದ್ದರು. "ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ (CDSCO) ನ COVID-19 ನಲ್ಲಿ ವಿಷಯ ತಜ್ಞರ ಸಮಿತಿ (SEC) ಸೋಮವಾರ ಎರಡನೇ ಬಾರಿಗೆ ತುರ್ತು ಬಳಕೆಯ ಅಧಿಕಾರ (EUA) ಅರ್ಜಿಯನ್ನು ಪರಿಶೀಲಿಸಿದೆ. ವಿವರವಾದ ಚರ್ಚೆಯ ನಂತರ ಕೋವೊವ್ಯಾಕ್ಸ್ ಲಸಿಕೆಯ ತುರ್ತು ಬಳಕೆಗೆ ಅನುಮೋದನೆ ನೀಡುವಂತೆ ಶಿಫಾರಸ್ಸು ಮಾಡಿದೆ." ಭಾರತದ 13 ಕಂಪನಿಗಳಲ್ಲಿ ಮೊಲ್ನುಪಿರವಿರ್ ಉತ್ಪಾದನೆ
"ಆಂಟಿ-ವೈರಲ್ ಔಷಧವಾದ ಮೊಲ್ನುಪಿರವಿರ್ ಅನ್ನು ಈಗ ದೇಶದಲ್ಲಿ 13 ಕಂಪನಿಗಳು ಉತ್ಪಾದಿಸುತ್ತಿವೆ. ಕೊರೊನಾವೈರಸ್ ಸೋಂಕಿಗೆ ತುತ್ತಾಗಿರುವ ವಯಸ್ಕ ರೋಗಿಗಳ ಮೇಲೆ ತುರ್ತು ಬಳಕೆ ಹಾಗೂ ರೋಗದ ತೀವ್ರತೆಯು ಹೆಚ್ಚಾಗುವ ಸಂದರ್ಭದಲ್ಲಿ ಈ ಲಸಿಕೆಯನ್ನು ಬಳಸುವುದಕ್ಕಾಗಿ ಅನುಮೋದನೆ ನೀಡಲಾಗಿದೆ," ಎಂದು ಮನ್ಸುಖ್ ಮಾಂಡವಿಯಾ ತಿಳಿಸಿದ್ದಾರೆ. ದೇಶದಲ್ಲಿ ಯಾವ ಯಾವ ಲಸಿಕೆಗಳ ಬಳಕೆಗೆ ಅನುಮತಿ ಆಕ್ಸ್ ಫರ್ಡ್ ವಿಶ್ವವಿದ್ಯಾಲಯ ಮತ್ತು ಅಸ್ಟ್ರಾಜೆನಿಕಾ ಸಂಶೋಧಿಸಿರುವ ಪುಣೆಯ ಸೀರಂ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾ ಉತ್ಪಾದಿಸುತ್ತಿರುವ ಕೊವಿಶೀಲ್ಡ್ ಮತ್ತು ಹೈದ್ರಾಬಾದ್ ಮೂಲದ ಭಾರತ್ ಬಯೋಟೆಕ್ ಸಂಸ್ಥೆ ಉತ್ಪಾದಿಸುತ್ತಿರುವ ಕೊವ್ಯಾಕ್ಸಿನ್ ಲಸಿಕೆಯನ್ನು ಹೆಚ್ಚಾಗಿ ಬಳಕೆ ಮಾಡಲಾಗುತ್ತಿದೆ. ಇದರ ಜೊತೆಗೆ ರಷ್ಯಾದ ಸ್ಪುಟ್ನಿಕ್-ವಿ ಲಸಿಕೆಯನ್ನು ಬಳಸಲಾಗುತ್ತಿದೆ.
Congratulations India