ಶಿಕ್ಷಣ ಹಾಗೂ ಸಹಕಾರ ಕ್ಷೇತ್ರಕ್ಕೆ ಅನನ್ಯ ಅರಟಾಳ ರುದ್ರಗೌಡರ ಕೊಡುಗೆ ಅಪಾರ- ಬಸವಯಜಯ ಮೃತ್ಯುಂಜಯ ಶ್ರೀ
ಶಿಕ್ಷಣ ಹಾಗೂ ಸಹಕಾರ ಕ್ಷೇತ್ರಕ್ಕೆ ಅನನ್ಯ ಕೊಡುಗೆ
ನೀಡಿರುವ ದೂರದೃಷ್ಟಿ ವ್ಯಕ್ತಿತ್ವದ ಅರಟಾಳ ರುದ್ರಗೌಡರು ಯುವ ಸಮೂಹಕ್ಕೆ ಪ್ರೇರಣೆ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ಬಸವಜಯ ಮೃತ್ಯುಂಜಯ ಮಹಾಸ್ವಾಮೀಜಿ ಹೇಳಿದರು.
ಅರಟಾಳ ಗ್ರಾಮದಲ್ಲಿ ಮಂಗಳವಾರ ರಾವ್ ಬಹಾದ್ದೂರ ಅರಟಾಳ ರುದ್ರಗೌಡರ 171ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತ್ಯಾಗದ ಪ್ರತೀಕವಾಗಿರುವ ಅರಟಾಳ ರುದ್ರಗೌಡರ ಶ್ರಮದಿಂದ ಕೆಎಲ್ಇ, ಕೆಸಿಡಿ ಹಾಗೂ ಕೆಸಿಸಿ ಬ್ಯಾಂಕ್ ಸ್ಥಾಪನೆಯಾಗಿವೆ. ಸಪ್ತರ್ಷಿಗಳ ಜೊತೆಗೂಡಿ ಸ್ವಾಭಿಮಾನದ ಬದುಕು ರೂಪಿಸಿಕೊಳ್ಳಲು ಸ್ಫೂರ್ತಿದಾಯಕವಾಗಿರುವ ಅಕ್ಷರ ಲೋಕದ ಅನಘ್ರ್ಯ ರತ್ನ ರುದ್ರಗೌಡರ ನಿಸ್ವಾರ್ಥ ಸೇವೆಗೆ ನ್ಯಾಯ ಸಿಗಬೇಕಾದರೆ ರಾಜ್ಯದ ಯಾವುದಾದರೊಂದು ಮೆಡಿಕಲ್ ಕಾಲೇಜಿಗೆ ಅವರ ಹೆಸರಿಡಬೇಕು. ಜೊತೆಗೆ ಕೇಂದ್ರೀಯ ವಿದ್ಯಾಲಯ ಮಾದರಿಯಲ್ಲಿ ಅರಟಾಳ ರುದ್ರಗೌಡರ ಹೆಸರಿನಡಿ ವಸತಿ ಶಾಲೆ ಸ್ಥಾಪಿಸಬೇಕು. ಅಷ್ಟೇ ಅಲ್ಲದೇ ಮುಂಬರುವ ದಿನಗಳಿಂದ ಸರ್ಕಾರವೇ ಜಯಂತಿ ಕಾರ್ಯಕ್ರಮ ಆಯೋಜಿಸಬೇಕು ಎಂದು ಒತ್ತಾಯಿಸಿದರು. ಮಾಜಿ ಸಂಸದ ಮಂಜುನಾಥ ಕುನ್ನೂರ ಮಾತನಾಡಿ, ನಮ್ಮ ನೆಲದ ನಕ್ಷತ್ರವಾಗಿರುವ ಅರಟಾಳ ರುದ್ರಗೌಡರ ಕುರಿತು ಶಾಲಾ ವಿದ್ಯಾರ್ಥಿಗಳ ಪಠ್ಯ ಪುಸ್ತಕದಲ್ಲಿ ಜೀವನ ಚರಿತ್ರೆ ಅಳವಡಿಸಬೇಕು. ಜೊತೆಗೆ ಶಿಗ್ಗಾಂವಿ ಪಟ್ಟಣದಲ್ಲಿ ಸ್ಮಾರಕ ಭವನ ನಿರ್ಮಿಸಬೇಕು ಎಂದರು.
ಎಂ.ಬಿ. ಹಳೇಮನಿ, ಶಿವಾನಂದ ಬಾಗೂರ, ಮಂಜುನಾಥ ಮಣ್ಣಣ್ಣವರ ಮಾತನಾಡಿದರು.
ವಿರೇಶಗೌಡ ಪಾಟೀಲ, ಬಸವರಾಜ ಹಾಲಪ್ಪನವರ, ಸಿ.ಎಸ್. ಪಾಟೀಲ, ಚಂದ್ರಣ್ಣ ಗುದಗಿ, ಸಿದ್ದಣ್ಣ ಮೊರಬದ, ನಂದೀಶ ಯಲಿಗಾರ, ರೇವಣಗೌಡ ಪಾಟೀಲ, ಬಸಲಿಂಗಪ್ಪ ನರಗುಂದ, ಅಣ್ಣಪ್ಪ ಲಮಾಣಿ, ಮಲ್ಲೇಶಪ್ಪ ಲಮಾಣಿ ಉಪಸ್ಥಿತರಿದ್ದರು. ಈರನಗೌಡ ದೊಡ್ಡಗೌಡ್ರ ಕಾರ್ಯಕ್ರಮ ನಿರ್ವಹಿಸಿದರು.