ರಾಜ್ಯದಲ್ಲಿ ಬೇಸಿಗೆ ಆರಂಭಕ್ಕೂ ಮುನ್ನವೇ ತಾಪಮಾನ ಹೆಚ್ಚಳ : ಬಿಸಿಲಿಗೆ ಜನರು ತತ್ತರ!

ರಾಜ್ಯದಲ್ಲಿ ಬೇಸಿಗೆ ಆರಂಭಕ್ಕೂ ಮುನ್ನವೇ ತಾಪಮಾನ ಹೆಚ್ಚಳ : ಬಿಸಿಲಿಗೆ ಜನರು ತತ್ತರ!

ಬೆಂಗಳೂರು : ಭಾರೀ ಬಿಸಿಲಿನ ತಾಪಕ್ಕೆ ತತ್ತರಿಸಿರುವ ಜನತೆಗೆ ಮತ್ತೊಂದು ಶಾಕ್ ಎದುರಾಗಿದ್ದು, ಮಾರ್ಚ್ ತಿಂಗಳ ಮೂರನೇ ವಾರದಲ್ಲಿ ತಾಪಮಾನ ಅಧಿಕವಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಸದ್ಯ ಬೇಸಿಗೆಯಲ್ಲೂ ಬಿಸಿಲು ಸಾಮಾನ್ಯಕ್ಕಿಂತ ಹೆಚ್ಚಾಗಿಯೇ ಕಾಡುವ ಸಾಧ್ಯತೆಯಿದೆ.

ಏಪ್ರಿಲ್‍ನಲ್ಲಿ ಹೆಚ್ಚಾಗುತ್ತಿದ್ದ ಉಷ್ಣಾಂಶ ಮಾರ್ಚ್ 3ನೇ ವಾರದಲ್ಲಿ ಅಧಿಕವಾಗಲಿದೆ. ಸಾಮಾನ್ಯವಾಗಿ ಮಾರ್ಚ್ ಬಳಿಕ ಬಿಸಿಲ ಬೇಗೆ ಹೆಚ್ಚಾಗುತ್ತಿತ್ತು ಆದರೆ, ಫೆಬ್ರವರಿ ಮಧ್ಯಭಾಗದಲ್ಲೇ ತಾಪಮಾನ ಹೆಚ್ಚಾಗುತ್ತಿದೆ. ಏಪ್ರಿಲ್ ಅಥವಾ 3ನೇ ವಾರದಲ್ಲಿ ಹೆಚ್ಚಾಗುತ್ತಿದ್ದ ಉಷ್ಣಾಂಶ ಮಾರ್ಚ್ 3ನೇ ವಾರದಲ್ಲಿ ಅಧಿಕವಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಉತ್ತರ ಒಳನಾಡಿನ ಭಾಗದಲ್ಲಿ ಈ ಬಾರಿ ಚಳಿಯ ವಾತಾವರಣ ಹೆಚ್ಚಿತ್ತು. ಹಾಗೆಯೇ ಬೇಸಿಗೆಯ ಬಿಸಿಲಿನ ತಾಪವೂ ಹೆಚ್ಚಾಗಲಿದೆ. ಮಾರ್ಚ್ ಕೊನೆಯ ಹಾಗೂ ಏಪ್ರೀಲ್ ಆರಂಭದ ವೇಳೆಗೆ ಈ ಭಾಗದಲ್ಲಿ ಗರಿಷ್ಠ ತಾಪಮಾನ 40 ಡಿಗ್ರಿ ಸೆಲ್ಸಿಯಸ್ ವರೆಗೆ ಮುಟ್ಟುವ ಸಾಧ್ಯತೆಗಳಿವೆ.

ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 30 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 13 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಹುಬ್ಬಳ್ಳಿ, ಹಾವೇರಿ, ಕಲಬುರಗಿ, ಬಾಗಲಕೋಟೆ ನಗರಗಳಲ್ಲಿ ಗರಿಷ್ಠ ತಾಪಮಾನ 36 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ 20 ಡಿಗ್ರಿ ಸೆಲ್ಸಿಯಸ್ ಇರಲಿದೆ.

ಕಲಬುರಗಿ, ಬೀದರ್, ವಿಜಯಪುರ, ರಾಯಚೂರು, ಬಳ್ಳಾರಿ ಸೇರಿ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಸಾಮಾನ್ಯವಾಗಿ ಗರಿಷ್ಠ ತಾಪಮಾನ 40 ಡಿಗ್ರಿ ಸೆಲ್ಸಿಯಸ್ ಅಸುಪಾಸಿನಲ್ಲಿರುತ್ತದೆ. ಆದರೆ, ಈ ಬಾರಿ ಅದು 45-46 ಡಿಗ್ರಿ ಸೆಲ್ಸಿಯಸ್ ತಲುಪುವ ಸಾಧ್ಯತೆಯಿದೆ. ದಕ್ಷಿಣ ಕರ್ನಾಟಕ ಭಾಗದಲ್ಲಿ ಜಿಲ್ಲೆಗಳಲ್ಲಿ 36-38 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಸರಾಸರಿ ತಾಪಮಾನ 2-3 ಡಿಗ್ರಿ ಸೆಲ್ಸಿಯಸ್ ಏರಿಗೆಯಾಗುವ ಸಾಧ್ಯತೆ ಇದೆ.