ಕಠಿಣ ನಿಯಮ ವಿಧಿಸಿ ಸರ್ಕಾರ ಆರ್ಥಿಕತೆ ಹಾಳು ಮಾಡುತ್ತಿದೆ : ಡಿಕೆಶಿ ಆಕ್ರೋಶ
ಬೆಂಗಳೂರು,ಡಿ.8- ಇಲ್ಲದೇ ಇರುವ ಕೊರೊನಾ ಭಯದಲ್ಲಿ ಕಠಿಣ ನಿಯಾಮಾವಳಿಗಳನ್ನು ಜಾರಿಗೊಳಿಸಿ ರಾಜ್ಯ ಸರ್ಕಾರ ಆರ್ಥಿಕ ಚಟುವಟಿಕೆಗಳನ್ನು ಹಾಳು ಮಾಡುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದ ತಮ್ಮ ನಿವಾಸದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಕೊರೊನಾ ಎಲ್ಲಿದೆ ? ಎಲ್ಲಿ ಹೆಚ್ಚಾಗಿದೆ ? ಅನಗತ್ಯವಾಗಿ ಗೊಂದಲ ಸೃಷ್ಟಿಸಬೇಡಿ, ಏರ್‍ಪೋರ್ಟ್‍ನಿಂದ ಯಾರೋ ಓಡಿ ಹೋದ, ಅಲ್ಲೇನೋ ಆಗಿದೆ ! ಇಲ್ಲೇನೋ ಆಯಿತು ಎಂಬ ವದಂತಿಗಳನ್ನು ಹರಡಬೇಡಿ ಎಂದು ಹೇಳಿದರು.
ಶಾಪಿಂಗ್‍ಮಾಲ್ ಹಾಗೂ ಇತರೆ ಕಡೆಗಳಲ್ಲಿ ಕೋವಿಡ್ ಲಸಿಕೆ ಪಡೆದ ಪ್ರಮಾಣ ಪತ್ರ ಹಾಜರುಪಡಿಸಿಯೇ ಪ್ರವೇಶಿಸಬೇಕೆಂದು ಹೇಳುತ್ತಿದ್ದಾರೆ. ಯಾರು ಆ ರೀತಿ ಪ್ರಮಾಣ ಪತ್ರ ತೋರಿಸಿ ಒಳ ಹೋಗಲು ಬಯಸುತ್ತಾರೆ. ಬೆಂಗಳೂರಿನಲ್ಲಿ ಬಹುತೇಕ ಮಾಲ್‍ಗಳು, ಹೋಟೆಲ್‍ಗಳು ಹವಾನಿಯಂತ್ರಿತವಾಗಿವೆ.
ಶಾಲೆಗಳಲ್ಲೂ ಹವಾ ನಿಯಂತ್ರಣ ವ್ಯವಸ್ಥೆ ಇದೆ. ಕೋವಿಡ್ ಹರಡಲಿದೆ ಎಂಬ ಕಾರಣಕ್ಕಾಗಿ ಈ ಚಟುವಟಿಕೆಗಳ ಮೇಲೆ ಕಡಿವಾಣ ಹಾಕಿದರೆ ಆರ್ಥಿಕತೆ ಕುಸಿದು ಹೋಗಲಿದೆ ಎಂದು ಎಚ್ಚರಿಸಿದರು. ದೇಶದಲ್ಲಿ ಎಲ್ಲಿಯೂ ಇಲ್ಲದ ಕಠಿಣ ನಿಯಮಾವಳಿಗಳನ್ನು ಇಲ್ಲಿ ಮಾತ್ರ ಏಕೆ ಜಾರಿಗೊಳಿಸಬೇಕು ಎಂದು ಪ್ರಶ್ನಿಸಿದ ಅವರು, ದೇಶಾದ್ಯಂತ ಚರ್ಚೆ ನಡೆಸಿ ಒಮ್ಮತದ ನಿಯಮಾವಳಿಗಳನ್ನು ಜಾರಿಗೆ ತರಬೇಕೆಂದು ಹೇಳಿದರು.
ಟೆಲಿಫೋನ್ ಕದ್ದಾಲಿಕೆ ಪ್ರಕರಣದಲ್ಲಿ ಸಿಬಿಐ ತನಿಖೆ ನಡೆಸುವ ಮೂಲಕ ತಮ್ಮ ವಿರೋಧಿಗಳನ್ನು ಕಂಟ್ರೋಲ್ ಮಾಡಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಅವರು ಆರೋಪಿಸಿದರು. ವಿಧಾನಪರಿಷತ್ ಚುನಾವಣೆಯಲ್ಲಿ ಬಿಜೆಪಿ ದುರ್ಬಲವಾಗಿದೆ. ಅದಕ್ಕಾಗಿ ಜೆಡಿಎಸ್ ಬೆಂಬಲ ಕೇಳುತ್ತಿದೆ. ಕಾಂಗ್ರೆಸ್ ಹೆಚ್ಚು ಸ್ಥಾನ ಗೆಲ್ಲಲಿದ್ದು, ಪಕ್ಷಾತೀತವಾಗಿ ಎಲ್ಲಾ ಮತದಾರರ ಬೆಂಬಲ ಯಾಚಿಸುವುದಾಗಿ ತಿಳಿಸಿದರು.