ರಾಜ್ಯ ಆರೋಗ್ಯ ಇಲಾಖೆಯ ಗುತ್ತಿಗೆ, ಹೊರಗುತ್ತಿಗೆ ಸಿಬ್ಬಂದಿ ವೇತನ ಶೇ.15ರಷ್ಟು ಹೆಚ್ಚಳ, 2 ದಿನಗಳಲ್ಲಿ ಆದೇಶ - ಸಚಿವ ಸುಧಾಕರ್

ಬೆಂಗಳೂರು: ರಾಜ್ಯದ ಆರೋಗ್ಯ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವಂತ ರಾಷ್ಟ್ರೀಯ ಆರೋಗ್ಯ ಅಭಿಯಾನ ( ಎನ್ ಹೆಚ್‌ಎಂ) ನೌಕರರನ್ನು ಖಾಯಂ ಮಾಡುವಂತ ಪ್ರಸ್ತಾವನೆ ಸರ್ಕಾರದ ಮುಂದೆ ಇಲ್ಲ. ಅವರ ಬೇಡಿಕೆಗಳಲ್ಲಿ ಶೇ.15ರಷ್ಟು ವೇತನ ಹೆಚ್ಚಳ ಸೇರಿದಂತೆ ಕೆಲವನ್ನು ಈಡೇರಿಸಲಾಗುತ್ತಿದೆ ಎಂಬುದಾಗಿ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್ ಸ್ಪಷ್ಟ ಪಡಿಸಿದ್ದಾರೆ.
ಗುರುವಾರ ವಿಧಾನಸಭೆಯಲ್ಲಿ ಬಿಜೆಪಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಕೇಳಿದಂತ ಪ್ರಶ್ನೆಗೆ ಉತ್ತರಿಸಿದಂತ ಅವರು, ಇವತ್ತು ಎನ್ ಹೆಚ್ ಎಂ ಯೋಜನೆಯು ಕೇಂದ್ರ ಸರ್ಕಾರದ ಯೋಜನೆಯಾಗಿದೆ. ಇದು ಕಾಂಟ್ರಾಕ್ಟ್ ಯೋಜನೆಯಾಗಿದೆ. ಇದರಲ್ಲಿ 26,036 ಜನರು ಕೆಲಸ ಮಾಡುತ್ತಿದ್ದಾರೆ. ಇದರಲ್ಲಿ ನೇರವಾಗಿ ಸರ್ಕಾರದಿಂದ ಗುತ್ತಿಗೆಯಲ್ಲಿ ಕೆಲಸ ಮಾಡುತ್ತಿರುವಂತವರು 21,542 ನೌಕರರು ಆಗಿದ್ದಾರೆ. ಹೊರಗುತ್ತಿಗೆಯಲ್ಲಿ ಕೆಲಸ ಮಾಡುತ್ತಿರುವಂತವರು 3,490 ನೌಕರರು ಆಗಿದ್ದಾರೆ ಎಂದರು.
ಈಗಾಗಲೇ ಈ ನೌಕರರ ಸಂಘ-ಸಂಸ್ಥೆಗಳ ಪದಾಧಿಕಾರಿಗಳ ಜೊತೆಗೆ ಕೆಲವು ಸುತ್ತಿನ ಮಾತುಕತೆಗಳನ್ನು ಮಾಡಿದ್ದೇವೆ. ಅದರಲ್ಲಿ ಅವರ ಅನೇಕ ಬೇಡಿಕೆಗಳು ಏನಿದ್ದವು, ಅವುಗಳಲ್ಲಿ ರಾಜ್ಯ ಸರ್ಕಾರ ಅನುಷ್ಠಾನಕ್ಕೆ ಯಾವುದು ತರೋಗಕ್ಕೆ ಸಾಧ್ಯವೋ ಅವುಗಳನ್ನ ಸಾಕಷ್ಟು ಇವತ್ತು ನಾವು ಜಾರಿಗೆ ತಂದಿದ್ದೇವೆ. ಕಡ್ಡಾಯ ರಜೆ, ಮೆಟರ್ನಟಿ ಲೀವ್, ಒಂದು ಬಾರಿಗೆ ಜಿಲ್ಲೆಯಲ್ಲಿ ವರ್ಗಾವಣೆಗೂ ಅವಕಾಶ ನೀಡಿದ್ದೇವೆ. ಅಂತರ ಜಿಲ್ಲಾ ವರ್ಗಾವಣೆ ಬೇಡಿಕೆಯನ್ನು ಈಡೇರಿಸಿದ್ದೇವೆ ಎಂದು ಹೇಳಿದರು.
ಶೇ.15ರಷ್ಟು ವೇತನ ಹೆಚ್ಚಳ
ಗುತ್ತಿಗೆ ನೌಕರರು ಅಂತಿಮವಾಗಿ ಕೇಳುವಂತದ್ದು ಅವರ ವೇತನವನ್ನು ಹೆಚ್ಚಳ ಮಾಡಬೇಕು ಎಂಬುದಾಗಿದೆ. ಶೇ.15ರಷ್ಟು ವೇತನ ಹೆಚ್ಚಳಕ್ಕೆ ಬೇಡಿಕೆ ಇಟ್ಟಿದ್ದರು. ನಿನ್ನೆ ಮುಖ್ಯಮಂತ್ರಿಗಳು ಆರ್ಥಿಕ ಇಲಾಖೆಗೆ ಸೂಚನೆ ಕೊಟ್ಟಿದ್ದಾರೆ. ಬಹುಶಹ ಒಂದೆರಡು ದಿನಗಳಲ್ಲಿ ಆದೇಶ ಹೊರಬಂದು ವೇತನ ಕೂಡ ಹೆಚ್ಚಾಗಲಿದೆ ಎಂದರು.
ಎನ್ ಹೆಚ್‌ಎಂ ನೌಕರರನ್ನು ಖಾಯಂ ಪ್ರಸ್ತಾವನೆ ಸರ್ಕಾರ ಮುಂದೆ ಇಲ್ಲ
ಅವರ ಬಹುಮುಖ್ಯ ಬೇಡಿಕೆಗಳಲ್ಲಿ ಮತ್ತೊಂದು ಅಂದರೇ ಗುತ್ತಿಗೆ ನೌಕರರನ್ನು ಖಾಯಂ ನೌಕರರನ್ನಾಗಿ ಮಾಡಬೇಕು ಎಂಬುದಾಗಿದೆ. ಇದು ಕೇವಲ ಆರೋಗ್ಯ ಇಲಾಖೆಯಲ್ಲಿ ಮಾತ್ರ ಕೆಲಸ ಮಾಡುತ್ತಿಲ್ಲ. ಎಲ್ಲಾ ಇಲಾಖೆಯಲ್ಲೂ ಇದೆ. ಅದರಲ್ಲೂ ಆರೋಗ್ಯ ಇಲಾಖೆಯ ಎನ್ ಹೆಚ್ ಎಂ ನೌಕರರು ಯೋಜನೆ ಇರೋವರೆಗೆ ಇರಲಿದ್ದಾರೆ. ಅವರನ್ನು ಖಾಯಂ ಮಾಡುವುದು ಸರ್ಕಾರದ ಮುಂದೆ ಇಲ್ಲ. ಅದು ಸರ್ಕಾರಕ್ಕೂ ಕಷ್ಟವಾಗಲಿದೆ. ಆದರೇ ಇಲ್ಲಿಯವರೆಗೆ ನೇಮಕಗೊಂಡಂತ ಯಾವುದೇ ಒಬ್ಬ ಎನ್ ಹೆಚ್‌ಎಂ ನೌಕರರನ್ನು ಕಾರಣವಿಲ್ಲದೇ ನಾವು ತೆಗೆದು ಹಾಕಿಲ್ಲ ಎಂದು ಸ್ಪಷ್ಟಪಡಿಸಿದರು.
ಈ ಬಳಿಕ ಮಾತನಾಡಿದಂತ ಜೆಡಿಎಸ್ ಸದಸ್ಯ ಬಂಡೆಪ್ಪ ಕಾಶ್ಯಂಪುರ್ ಅವರು, ಎನ್ ಹೆಚ್‌ಎಂ ನಲ್ಲಿ ಕೆಲಸ ಮಾಡುತ್ತಿರುವಂತ ಗುತ್ತಿಗೆ ನೌಕರರು ಕೋವಿಡ್ ನಲ್ಲಿ ಬಹಳ ಕಷ್ಟ ಪಟ್ಟು ಕೆಲಸ ಮಾಡಿದ್ದಾರೆ. ಖಾಯಂ ನೌಕರರಂತೇ ಕೆಲಸ ಮಾಡುತ್ತಿದ್ದಾರೆ ಎಂದರು.
ಎನ್ ಹೆಚ್‌ಎಂ ನೌಕರರನ್ನು ಬೇರೆ ರಾಜ್ಯಗಳಲ್ಲಿ ಖಾಯಂ ಮಾಡಲಾಗಿದೆ, ಕರ್ನಾಟಕದಲ್ಲೂ ಮಾಡಬೇಕೆಂದು ಬಂಡೆಪ್ಪ ಕಾಶ್ಯಂಪುರ್ ಒತ್ತಾಯ
ಆಗ ಮಧ್ಯಪ್ರವೇಶಿಸಿದಂತ ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಹತ್ತು ವರ್ಷ ಮೇಲ್ಪಟ್ಟು ಕೆಲಸ ಮಾಡುತ್ತಿರುವಂತ ಎನ್ ಹೆಚ್‌ಎಂ ಗುತ್ತಿಗೆ ನೌಕರರಿಗೆ 20, 26 ಸಾವಿರ ಈಗ ವೇತನ ಬರುತ್ತಿದೆ ಎಂದರು.
ಆ ಬಳಿಕ ಮಾತು ಮುಂದುವರೆಸಿದಂತ ಬಂಡೆಪ್ಪ ಕಾಶ್ಯಂಪುರ್, ಬೇರೆ ರಾಜ್ಯಗಳಾದಂತ ಒಡಿಸ್ಸಾ, ಮಣಿಪುರ, ರಾಜಸ್ಥಾನ, ಪಂಜಾಬ್ ಗಳಲ್ಲಿ ಎನ್ ಹೆಚ್‌ಎಂ ನೌಕರರನ್ನು ಖಾಯಂ ಮಾಡಲಾಗಿದೆ. ಅದರಂತೆ ಕರ್ನಾಟಕದಲ್ಲೂ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವಂತ ನೌಕರರನ್ನು ಖಾಯಂಗೊಳಿಸಬೇಕು. ಈ ಮೂಲಕ ಸರ್ಕಾರ ಅವರ ಬಗ್ಗೆ ಒಳ್ಳೆಯ ನಿರ್ಧಾರವನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ವರದಿ: ವಸಂತ ಬಿ ಈಶ್ವರಗೆರೆ