Belagavi; ರೈತರ ವಿರೋಧದ ಮಧ್ಯೆಯೂ ರಾಷ್ಟ್ರೀಯ ಹೆದ್ದಾರಿ 4 ಎ ಬೈಪಾಸ್ ರಸ್ತೆ ಕಾಮಗಾರಿ ಆರಂಭ

Belagavi; ರೈತರ ವಿರೋಧದ ಮಧ್ಯೆಯೂ ರಾಷ್ಟ್ರೀಯ ಹೆದ್ದಾರಿ 4 ಎ ಬೈಪಾಸ್ ರಸ್ತೆ ಕಾಮಗಾರಿ ಆರಂಭ
ಬೆಳಗಾವಿ (ನವೆಂಬರ್ 12: ಬೆಳಗಾವಿ ತಾಲೂಕಿನ (Belagavi) ಹಲಗಾ ಮತ್ತು ಮಚ್ಛೆ ಗ್ರಾಮದ ಮಧ್ಯೆ 9.5 ಕಿಲೋಮೀಟರ್ ರಾಷ್ಟ್ರೀಯ ಹೆದ್ದಾರಿ 4 ಎ ಬೈಪಾಸ್ ರಸ್ತೆ ಕಾಮಗಾರಿ (National Highway By Pass Constuction) ರೈತರ ವಿರೋಧದ (Farmers Objection) ‌ನಡುವೆಯೂ ಶುರುವಾಗಿದೆ. ನಿನ್ನೆ ಕಾಮಗಾರಿ ಆರಂಭಗೊಂಡ ವೇಳೆ ರೈತರು ಪ್ರತಿಭಟನೆ ನಡೆಸಿದ್ದರು.
ಜಮೀನು ಮಾಲೀಕನ ಪುತ್ರ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಹಿನ್ನೆಲೆ ಪರಿಸ್ಥಿತಿ ಉದ್ವಿಗ್ನಗೊಂಡಿತ್ತು. ಇದಾದ ಬಳಿಕ ನಿನ್ನೆ ರಾತ್ರಿ ಬೆಳಗಾವಿ ಡಿಸಿ ಎಂ.ಜಿ.ಹಿರೇಮಠ ನೇತೃತ್ವದಲ್ಲಿ ನಡೆದ ಸಭೆಯೂ ವಿಫಲಗೊಂಡಿತ್ತು. ಇಂದು ಬೆಳ್ಳಂಬೆಳಗ್ಗೆ ಎಂಟು ಗಂಟೆ ಸುಮಾರಿಗೆ ಬಿಗಿ ಪೊಲೀಸ್ ಭದ್ರತೆಯಲ್ಲಿ ಹತ್ತಕ್ಕೂ ಹೆಚ್ಚು ಜೆಸಿಬಿ, ಹಿಟಾಚಿಗಳು ಹಾಗೂ ನೂರಕ್ಕೂ ಹೆಚ್ಚು ಕಾರ್ಮಿಕರಿಂದ ಕಾಮಗಾರಿ ಆರಂಭಗೊಂಡಿತ್ತು. ಈ ವೇಳೆ ರೈತರು ಬೆಳೆ ಬೆಳೆದ ಜಮೀನಿನ ಮೇಲೆ ಬೆಳೆ ಕಟಾವು ಆಗುವವರೆಗೂ ಕಾಮಗಾರಿ ನಡೆಸಲ್ಲ ಅಂತಾ ಡಿಸಿ ಭರವಸೆ ನೀಡಿದ್ದರೂ ಬೆಳೆಯ ಮೇಲೆ ಜೆಸಿಬಿ ಬರುತ್ತಿದ್ದಂತೆ ರೈತರು ಅಡ್ಡಿಪಡಿಸಿ ಪ್ರತಿಭಟನೆಗೆ ಮುಂದಾದರು.

ಜಮೀನಿನಲ್ಲಿ ಕಾಮಗಾರಿ ನಡೆಸದೇ ಬೇರೆ ಕಡೆ ಕಾಮಗಾರಿಯನ್ನು ಕಾರ್ಮಿಕರು ಮುಂದುವರಿಸಿದರು. ಬಳಿಕ ಬೈಪಾಸ್ ರಸ್ತೆ ಕಾಮಗಾರಿಗೆ ಭೂಸ್ವಾಧೀನ ಪಡಿಸಿಕೊಂಡ ಜಮೀನಿನಲ್ಲಿ ಬೆಳೆಯುವ ಬೆಳೆಗಳಾದ ಕ್ಯಾರೆಟ್, ಬಾಸುಮತಿ ಭತ್ತ, ಕಬ್ಬು ಜೊತೆಗೆ ಜಮೀನು ದಾಖಲೆ ಹಿಡಿದು ರೈತರು ಪ್ರತಿಭಟನೆ ನಡೆಸಿದ್ರು. ಈ ವೇಳೆ ಮಾತನಾಡಿದ ರೈತ ಮುಖಂಡ ರಾಜು ಮೊರವೆ, ಬೈಪಾಸ್ ರಸ್ತೆಗೆ ಸ್ವಾಧೀನ ಪಡಿಸಿಕೊಂಡ ಜಮೀನು ಫಲವತ್ತಾಗಿದೆ. ಭತ್ತ, ಚೆನ್ನಂಗಿ, ಕಬ್ಬು ಕ್ಯಾರೇಟ್ ಸೇರಿ ವಿವಿಧ ಬೆಳೆಗಳನ್ನು ಇಲ್ಲಿ ಬೆಳೆಯಲಾಗುತ್ತದೆ. ವರ್ಷಕ್ಕೆ ಮೂರು ಫಸಲು ಬರುತ್ತದೆ. ಚಿಕ್ಕಪುಟ್ಟ ರೈತರು ಎರಡು ಗುಂಟೆ ನಾಲ್ಕು ಗುಂಟೆ ಜಮೀನು ಹೊಂದಿದ್ದು ಅದನ್ನೇ ಸ್ವಾಧೀನಪಡಿಸಿಕೊಂಡ್ರೆ ನಾವೆಲ್ಲಿಗೆ ಹೋಗೋದು. ಹಲವು ರೈತರಿಗೆ ಪರಿಹಾರ ಬಂದಿಲ್ಲ. ಜಿಲ್ಲಾಡಳಿತಕ್ಕೆ ವರ್ಕ್ ಆರ್ಡರ್ ತೋರಿಸಿ ಅಂದರೆ ತೋರಿಸುತ್ತಿಲ್ಲ. ಹೀಗಾಗಿ ಕಾಮಗಾರಿ ಆರಂಭ ಮಾಡಬಾರದು‌ ಅಂತಾ ಅಳಲು ತೋಡಿಕೊಂಡರು.

ಇಂದು ಸಹ ಕಾಮಗಾರಿಗೆ ರೈತರು ವಿರೋಧಿಸುತ್ತಿದ್ದ ಹಿನ್ನೆಲೆ ಕಾಮಗಾರಿ ನಡೆಯುತ್ತಿದ್ದ ಮಚ್ಛೆ ಗ್ರಾಮದ ಹೊರವಲಯಕ್ಕೆ ಖುದ್ದು ಡಿಸಿ ಎಂ.ಜಿ.ಹಿರೇಮಠ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು. ಈ ವೇಳೆ ಬೆಳಗಾವಿ ಉಪವಿಭಾಗಾಧಿಕಾರಿ ರವೀಂದ್ರ ಕರಲಿಂಗಣ್ಣವರ್, ಡಿಸಿಪಿ ವಿಕ್ರಂ ಆಮಟೆ ಸೇರಿ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ರು. ಕಾಮಗಾರಿ ನಡೆಯುತ್ತಿರುವ ಮೂರು ಕಿಲೋಮೀಟರ್ ವರೆಗೂ ಕಾಲ್ನಡಿಗೆಯಲ್ಲಿ ಸಂಚರಿಸಿ ಡಿಸಿ ಎಂ.ಜಿ.ಹಿರೇಮಠ ಪರಿಶೀಲನೆ ನಡೆಸಿದ್ರು.

ಕಾಮಗಾರಿ ವೀಕ್ಷಣೆ ಬಳಿಕ ಮಾತನಾಡಿದ ಡಿಸಿ ಎಂ.ಜಿ.ಹಿರೇಮಠ, 'ಸರ್ಕಾರದ ಆದೇಶ ಹಿನ್ನೆಲೆ ಈಗಾಗಲೇ ಕಾಮಗಾರಿ ಆರಂಭವಾಗಿದೆ. ಒಟ್ಟು 825 ಜನ ರೈತರಿಗೆ 27ಕೋಟಿ ಪರಿಹಾರವನ್ನ ನೀಡಿದ್ದೇವೆ. ಇನ್ನೂಳಿದವರಿಗೆ ಮನವೊಲಿಸಿ ಪರಿಹಾರವನ್ನ ನೀಡುತ್ತೇವೆ. ಅವರು ಪರಿಹಾರ ತೆಗೆದುಕೊಳ್ಳದಿದ್ದರೆ ಕೋರ್ಟ್ ನಲ್ಲಿ ಪರಿಹಾರದ ಹಣವನ್ನ ಜಮಾ ಮಾಡುತ್ತೇವೆ.‌ ಮಧ್ಯವರ್ತಿಗಳ ಬಳಿ ಯಾರು ಹೋಗದೇ ನಮ್ಮ ಕಚೇರಿಗೆ ಬಂದ್ರೇ ಪರಿಹಾರ ನೀಡ್ತೇವಿ.‌ ಭೂಮಿ ಕಳೆದುಕೊಳ್ಳದ ರೈತರಿಗೆ ಪರಿಹಾರ ಹೋಗಿದೆ ಎಂಬ ಆರೋಪ ವಿಚಾರ ಅದು ಕೇವಲ ಆರೋಪ ಇದೆ ಈ ಬಗ್ಗೆ ಪರಿಶೀಲಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದರು.


ಗುರುವಾರ ರಸ್ತೆ ಕಾಮಗಾರಿ ಆರಂಭಿಸಿದ ಬಳಿಕ ರೈತರ ಪ್ರತಿಭಟನೆ ನಡೆಸಿದ್ದರು. ಈ ವೇಳೆ ಅಲ್ಲಿನ ರೈತರೊಬ್ಬರು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು. ಆ ಬಳಿಕ ಪರಿಸ್ಥಿತಿ ಉದ್ವಿಗ್ನಗೊಂಡಿತ್ತು. ಈ ವಿಚಾರವಾಗಿ ಖುದ್ದು ಪ್ರತಿಕ್ರಿಯೆ ನೀಡಿದ್ದ ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಬಗೆಹರಿಸುವಂತೆ ಸೂಚನೆ ನೀಡಿದ್ದರು.