ವಿಧಾನಪರಿಷತ್ ಚುನಾವಣೆ : ಸೋಮವಾರ ಜೆಡಿಎಸ್ ಪಟ್ಟಿ ಪ್ರಕಟ

ಬೆಂಗಳೂರು,ನ.20-ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್‍ಗೆ ನಡೆಯುವ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿಗಳ ಪಟ್ಟಿಯನ್ನು ಸೋಮವಾರ ಪ್ರಕಟಿಸಲಿದೆ. ಈಗಾಗಲೇ ಹಾಸನದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಮೊಮ್ಮಗ ಡಾ.ಸೂರಜ್ ರೇವಣ್ಣ, ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ವಿಧಾನಪರಿಷತ್ ಸದಸ್ಯ ರಮೇಶ್‍ಗೌಡ ನಾಮಪತ್ರ ಸಲ್ಲಿಸಿದ್ದಾರೆ.
ನಾಮಪತ್ರ ಸಲ್ಲಿಸಲು ನ.23 ಕಡೆಯ ದಿನವಾಗಿರುವುದರಿಂದ ಸೋಮವಾರವೇ ಜೆಡಿಎಸ್ ಅಧಿಕೃತ ಪಟ್ಟಿಯನ್ನು ಪ್ರಕಟಿಸಲಿದೆ.
ಈ ಕ್ಷೇತ್ರವನ್ನು ಪ್ರತಿನಿಸುತ್ತಿದ್ದ ವಿಧಾನಪರಿಷತ್ ಸದಸ್ಯ ಸಂದೇಶ್ ನಾಗರಾಜ್, ಪಕ್ಷ ಬಿಡುತ್ತಿರುವ ಹಿನ್ನೆಲೆಯಲ್ಲಿ ಪರ್ಯಾಯ ಅಭ್ಯರ್ಥಿಯ ಹುಡುಕಾಟದಲ್ಲಿ ಜೆಡಿಎಸ್ ನಿರತವಾಗಿದೆ.
ಬಿಜೆಪಿ, ಕಾಂಗ್ರೆಸ್‍ನಿಂದ ಟಿಕೆಟ್ ವಂಚಿತರಾದವರು ಜೆಡಿಎಸ್ ಟಿಕೆಟ್ ಬಯಸಿದರೆ ನೀಡುವುದಿಲ್ಲ. ಚುನಾವಣೆ ಘೋಷಣೆಯಾಗಿರುವ 25 ಕ್ಷೇತ್ರಗಳ ಪೈಕಿ 6ರಿಂದ 8 ಕ್ಷೇತ್ರಗಳಲ್ಲಿ ಮಾತ್ರ ಸ್ಪರ್ಧೆ ಮಾಡಲು ಉದ್ದೇಶಿಸಲಾಗಿದೆ. ಮಂಡ್ಯ ಕ್ಷೇತ್ರದಿಂದ ಹಾಲಿ ವಿಧಾನಪರಿಷತ್ ಸದಸ್ಯ ಅಪ್ಪಾಜಿ ಗೌಡ ಅವರನ್ನೇ ಮತ್ತೆ ಕಣಕ್ಕಿಳಿಸಲಿದೆ. ಕೋಲಾರ ಕ್ಷೇತ್ರದಿಂದ ರಾಮು ಅವರನ್ನು ಕಣಕ್ಕಿಳಿಸುವ ಸಾಧ್ಯತೆ ಇದೆ. ಅದೇ ರೀತಿ ತುಮಕೂರು ಕ್ಷೇತ್ರಕ್ಕೆ ಕೆಎಎಸ್ ಅಧಿಕಾರಿಯಾಗಿದ್ದ ಅನಿಲ್‍ಕುಮಾರ್ ಅವರಿಗೆ ಟಿಕೆಟ್ ನೀಡುವ ಸಾಧ್ಯತೆಗಳಿವೆ.
ವಿಧಾನಪರಿಷತ್ ಸದಸ್ಯರಾಗಿರುವ ಸಿ.ಆರ್.ಮನೋಹರ್ ಮತ್ತು ಕಾಂತರಾಜ್ ಅವರು ಪಕ್ಷ ಬಿಡುತ್ತಿರುವ ಹಿನ್ನೆಲೆಯಲ್ಲಿ ಅವರಿಗೆ ಈ ಬಾರಿಯ ಚುನಾವಣೆಯಲ್ಲಿ ಟಿಕೆಟ್ ನೀಡಿಲ್ಲ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ.