ಬಿಜೆಪಿ ತೊರೆದು ಕಾಂಗ್ರೆಸ್ ಸೇರಲು ಯೋಗೇಶ್ವರ್ ಸಜ್ಜು? ಆಡಿಯೋ ಲೀಕ್ ಬೆನ್ನಲ್ಲೇ ರಾಜಕಾರಣದಲ್ಲಿ ಸಂಚಲನ

ಬೆಂಗಳೂರು: 'ಅಮಿತ್ ಶಾ ಒಂಥರಾ ರೌಡಿ ರೀತಿ. ನಾನೇ ಸಿಎಂ ಆದರೂ ಆದೆ.' ಎಂದು ಎಂಎಲ್ಸಿ ಸಿ.ಪಿ.ಯೋಗೇಶ್ವರ್ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ವೈರಲ್ ಆದ ಬೆನ್ನಲ್ಲೇ ಮತ್ತೊಂದು ಚರ್ಚೆ ಶುರುವಾಗಿದೆ.
ಯೋಗೇಶ್ವರ್ ಕಾಂಗ್ರೆಸ್ ಬಾಗಿಲು ತಟ್ಟಲು ಸಿದ್ಧವಾಗಿದ್ದು, ಗ್ರೀನ್ ಸಿಗ್ನಲ್ಗಾಗಿ ಕಾಯುತ್ತಿರುವ ಹಿನ್ನೆಲೆಯಲ್ಲಿಯೇ ಅದಕ್ಕೆ ಪೂರಕ ವಾತಾವರಣ ಸೃಷ್ಟಿ ಮಾಡಲು ತಾವೇ ಆಡಿಯೋ ಲೀಕ್ ಮಾಡಿದ್ದಾರೆ ಎನ್ನುವ ನಿಟ್ಟಿನಲ್ಲಿ ರಾಜಕೀಯ ಚರ್ಚೆಗಳು ತಾರಕಕ್ಕೇರಿವೆ.
ಬಿಜೆಪಿಯಲ್ಲಿ ಭವಿಷ್ಯ ಕಟ್ಟಿಕೊಳ್ಳಲು ಹೋರಾಟ ನಡೆಸಿದ ಯೋಗೇಶ್ವರ್ಗೆ ಅಲ್ಲಿ ಸಂಕಷ್ಟ ಎದುರಾಗಿರುವ ಕಾರಣ, ಕಾಂಗ್ರೆಸ್ ಕಡೆಗೆ ಒಲವು ತೋರಿಸುತ್ತಿದ್ದಾರೆ. ಸಿದ್ದರಾಮಯ್ಯ ಅವರ ಬಗ್ಗೆ ಮೃದು ಧೋರಣೆ ಹೊಂದಿರುವ ಅವರು, ಕಾಂಗ್ರೆಸ್ಗೆ ಹತ್ತಿರವಾಗುತ್ತಿದ್ದಾರೆ ಎನ್ನುವ ಚರ್ಚೆಗಳು ಹಳೇ ಮೈಸೂರು ಭಾಗದ ರಾಜಕಾರಣದಲ್ಲಿ ಹೊಸ ಸಂಚಲನ ಸೃಷ್ಟಿ ಮಾಡಿದೆ.
ಚುನಾವಣೆ ಬಳಿಕ ಬಿಜೆಪಿ ಸರ್ಕಾರ ಜನಾಭಿಪ್ರಾಯದ ಮೂಲಕ ಅಧಿಕಾರಕ್ಕೆ ಬರುವುದಿಲ್ಲ. ಅಮಿತ್ ಷಾ ಒಂಥರಾ ರೌಡಿ ರೀತಿ. ದೇವೇಗೌಡರು ಅಂಡರ್ ಸ್ಟ್ಯಾಂಡಿಗ್ ರಾಜಕೀಯ ಮಾಡ್ತಾರೆ ಎನ್ನುವ ಮಾತುಗಳು ಬಿಜೆಪಿ ಬಗ್ಗೆ ಇರುವ ಅಸಮಾಧಾನಕ್ಕೆ ಹಿಡಿದ ಕನ್ನಡಿಯಾಗಿದೆ.
ಯೋಗೇಶ್ವರ್ ಬಿಜೆಪಿ ತೊರೆಯುವುದಕ್ಕೆ ನೆಪ ಹುಡುಕಿಕೊಳ್ಳುತ್ತಿದ್ದಾರೆ ಎಂದು ಜೆಡಿಎಸ್ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದು, ಮುಂದೆ ಇದು ಯಾವ ಹಂತಕ್ಕೆ ಹೋಗಿ ಮುಟ್ಟುತ್ತದೆ ಎನ್ನುವುದನ್ನು ಕಾಯ್ದು ನೋಡಬೇಕು.