ಪ್ರಧಾನಿ ಮೋದಿಯನ್ನು ಡ್ರೋನ್ ಅಥವಾ ಗನ್ ಮೂಲಕ ಹತ್ಯೆ ಮಾಡುವ ಸಂಚು ನಡೆಸಿರಬಹುದು, ದೇವರ ದಯ ಬದುಕುಳಿದರು': ಕೇಂದ್ರ ಸಚಿವ ಗಿರಿರಾಜ್ ಸಿಂಗ್
ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಪಂಜಾಬ್ ಭೇಟಿ ಸಮಯದಲ್ಲಿ ಆದ ಭದ್ರತಾ ಲೋಪ ಅವರನ್ನು ಮುಗಿಸಲು ನಡೆಸಿರುವ ಸಂಚು ಎಂದು ಆರೋಪಿಸಿರುವ ಕೇಂದ್ರ ಸಚಿವ ಗಿರಿರಾಜ್ ಸಿಂಗ್, ಡ್ರೋನ್ ಅಥವಾ ಟೆಲಿಸ್ಕಾಪ್ ಗನ್ ಮೂಲಕ ಪ್ರಧಾನಿಯವರನ್ನು ಹತ್ಯೆ ನಡೆಸಲು ಸಂಚು ರೂಪಿಸಿರಬಹುದು ಎಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಪಂಜಾಬ್ ನಲ್ಲಿ ನಡೆದ ಘಟನೆ ಬಗ್ಗೆ ಉನ್ನತ ಮಟ್ಟದ ಸರಿಯಾದ ತನಿಖೆ ನಡೆಸಿದರೆ ಪಿತೂರಿ ಹೊರಬರುತ್ತದೆ. ಇದು ಕೇವಲ ಪಂಜಾಬ್ ಮುಖ್ಯಮಂತ್ರಿ ಕಚೇರಿಗೆ ಮಾತ್ರ ಸಂಬಂಧಿಸಿದ್ದಲ್ಲ, ಅದರಿಂದಾಚೆಗೂ ಇದೆ ಎಂದು ಟ್ವೀಟ್ ಮಾಡಿದ್ದಾರೆ.
ಪ್ರಧಾನಿಯವರ ಭೇಟಿ ಸಮಯದಲ್ಲಿ ಲೋಪವುಂಟಾಗಿದ್ದು ಆಕಸ್ಮಿಕ ಘಟನೆಯಲ್ಲ, ಇದೊಂದು ಸಂಚು. ಪ್ರಧಾನಿಯನ್ನು ಸಾವಿನ ಬಾವಿಯಲ್ಲಿ ಸಿಲುಕಿಸಿದಂತಾಗಿದ್ದು, ಇದು ಕಾಕತಾಳೀಯವಲ್ಲ, ಭಗವಾನ್ ಶಿವನ ಆಶೀರ್ವಾದದಿಂದ ಅವರು ಬದುಕುಳಿದರು, ಅವರನ್ನು ಡ್ರೋನ್ ಅಥವಾ ಟೆಲಿಸ್ಕೋಪಿಕ್ ಗನ್ ನಿಂದ ಕೊಲ್ಲಲು ಸಂಚು ನಡೆಸಿದ್ದಿರಬಹುದು ಎಂದು ತಿಳಿಯುತ್ತದೆ ಎಂದಿದ್ದಾರೆ.
PM Modi Security Breach: केंद्रीय मंत्री @girirajsinghbjp ने कहा- हत्या की साजिश थी pic.twitter.com/EUZEcazDWJ
— Zee Bihar Jharkhand (@ZeeBiharNews) January 7, 2022
ಪ್ರಧಾನಿ ಮೋದಿಯವರು ಬೆಂಗಾವಲು ವಾಹನ ಮಧ್ಯೆ ಸಿಕ್ಕಿಹಾಕಿಕೊಂಡಿರುವ ಚಿತ್ರಗಳು ಮತ್ತು ವಿಡಿಯೋಗಳನ್ನು ಕೂಡ ಗಿರಿರಾಜ್ ಸಿಂಗ್ ಪೋಸ್ಟ್ ಮಾಡಿ ಈ ಬಗ್ಗೆ ಸರಿಯಾದ ಸಮಗ್ರ ತನಿಖೆಯಾಗಬೇಕು, ತಪ್ಪಿತಸ್ಥರು ಯಾರೇ ಆಗಿದ್ದರೂ ಸುಮ್ಮನೆ ಬಿಡಬಾರದು, ತಕ್ಕ ಶಾಸ್ತಿಯಾಗಬೇಕು ಎಂದಿದ್ದಾರೆ.
ದೇಶದ ಪ್ರಮುಖ ಭದ್ರತಾ ಲೋಪದಲ್ಲಿ, ಪ್ರಧಾನಿಯವರ ಬೆಂಗಾವಲು ಪಡೆ ಕಳೆದ ಬುಧವಾರ ಪಂಜಾಬ್ ನ ಫಿರೋಜ್‌ಪುರದಲ್ಲಿ ಪ್ರತಿಭಟನಾಕಾರರ ದಿಗ್ಬಂಧನದಿಂದಾಗಿ ಮೇಲ್ಸೇತುವೆಯಲ್ಲಿ ಸಿಕ್ಕಿಹಾಕಿಕೊಂಡಿತು, ನಂತರ ಅವರು ರ್ಯಾಲಿ ಸೇರಿದಂತೆ ಯಾವುದೇ ಕಾರ್ಯಕ್ರಮಕ್ಕೆ ಹಾಜರಾಗದೆ ದೆಹಲಿಗೆ ವಾಪಸ್ಸಾಗಿದ್ದರು.
ಈ ಘಟನೆಯು ಪಂಜಾಬ್‌ನಲ್ಲಿನ ಆಡಳಿತಾರೂಢ ಕಾಂಗ್ರೆಸ್ ಪ್ರಧಾನ ಮಂತ್ರಿಯನ್ನು "ದೈಹಿಕವಾಗಿ ಹಲ್ಲೆ ಮಾಡಲು ಪ್ರಯತ್ನಿಸಿದೆ" ಎಂದು ಬಿಜೆಪಿ ಆರೋಪಿಸುತ್ತಿದೆ. ಇತರ ಪಕ್ಷಗಳು ಸಹ ಕಾನೂನು ಮತ್ತು ಸುವ್ಯವಸ್ಥೆಯ ವಿಷಯದ ಬಗ್ಗೆ ರಾಜ್ಯ ಸರ್ಕಾರದ ಮೇಲೆ ವಾಗ್ದಾಳಿ ನಡೆಸುತ್ತಿವೆ.
ಭದ್ರತಾ ಲೋಪದ ಬಗ್ಗೆ ತನಿಖೆ ನಡೆಸಲು ಕೇಂದ್ರವು ಗುರುವಾರ ಮೂವರು ಸದಸ್ಯರ ಸಮಿತಿಯನ್ನು ಸಹ ರಚಿಸಿದೆ.ಪಂಜಾಬ್ ಮುಖ್ಯ ಕಾರ್ಯದರ್ಶಿ ಅನಿರುದ್ಧ್ ತಿವಾರಿ ಅವರು ಭದ್ರತಾ ಲೋಪಕ್ಕೆ ಸಂಬಂಧಿಸಿದಂತೆ ಕೇಂದ್ರಕ್ಕೆ ವರದಿಯನ್ನು ಸಲ್ಲಿಸಿದ್ದು, ಘಟನೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಲೋಪದೋಷಗಳ ಕುರಿತು ತನಿಖೆ ನಡೆಸಲು ರಾಜ್ಯ ಸರ್ಕಾರ ಇಬ್ಬರು ಸದಸ್ಯರ ಸಮಿತಿಯನ್ನು ರಚಿಸಿದೆ.