ಜಲಜೀವನ್ ಮಿಷನ್ ಯೋಜನೆಯಡಿ ಕುಡಿಯುವ ನೀರು

ಜಲಜೀವನ್ ಮಿಷನ್ ಯೋಜನೆಯಡಿ ಕುಡಿಯುವ ನೀರು

ಬೆಳಗಾವಿ,ಡಿ.15-ತುಮಕೂರು ಜಿಲ್ಲೆ ತುರುವೇಕೆರೆ ಕ್ಷೇತ್ರ ವ್ಯಾಪ್ತಿಯಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ ಬಹುಗ್ರಾಮ ಕುಡಿಯುವ ನೀರು ಯೋಜನೆಯನ್ನು, ತಾಂತ್ರಿಕ ತಜ್ಞರ ಸಮಿತಿ ನೀಡುವ ವರದಿ ಆಧಾರದ ಮೇಲೆ ಕ್ರಮ ಕೈಗೊಳ್ಳುತ್ತೇವೆ ಎಂದು ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.

ಶಾಸಕ ಮಸಾಲ ಜಯರಾಮ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ತುರುವೇಕೆರೆ ತಾಲ್ಲೂಕಿನಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ 57 ಗ್ರಾಮಗಳ ಪೈಕಿ ಅಮ್ಮಸಂದ್ರ, ಆಮೆಕೆರೆ, ದಂಡಿನಶಿವ, ದುಂಡ ಹಾಗೂ ಅಜ್ಜಿನಹಳ್ಳಿ ಗ್ರಾಮಗಳಲ್ಲಿ ಹಾಲಿ ಇರುವ ಕೊಳವೆ ಬಾವಿಗಳನ್ನು ಸುಸ್ಥಿರ ಜಲಮೂಲಗಳು ಎಂದು ಪರಿಗಣಿಸಿ, ನಳ ಸಂಪರ್ಕ ಕಲ್ಪಿಸುವ ಯೋಜನೆಯನ್ನು ಜಾರಿ ಮಾಡಲಾಗಿದೆ ಎಂದರು.

ಕೆಲವು ಗ್ರಾಮಗಳಲ್ಲಿ ನೀರಿನ ಲಭ್ಯತೆ ಇಲ್ಲದ ಕಾರಣ ನೀರಿನ ಯೋಜನೆಯನ್ನು ಅನುಷ್ಠಾನ ಮಾಡಲು ಸಾಧ್ಯವಾಗಿಲ್ಲ. ಆದರ ತಾಂತ್ರಿಕ ಸಮಿತಿ ನೀಡುವ ವರದಿಯನ್ನು ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಿದ್ದೇವೆ ಎಂದು ಭರವಸೆ ನೀಡಿದರು.

ಪರಿಶೀಲಿಸಿ ಕ್ರಮ: ಶಾಸಕ ಅಮರೆಗೌಡ ಬಯ್ಯಾಪುರ ಅವರು ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲ್ಲೂಕಿನ ವ್ಯಾಪ್ತಿಯಲ್ಲಿ ಬರುವ ಹೋಬಳಿಯಲ್ಲಿ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯನ್ನು ಮಂಜೂರು ಮಾಡಲಾಗಿದ್ದರೂ ಅನುಷ್ಠಾನ ಮಾಡಲು ವಿಳಂಬವಾಗುತ್ತಿರುವುದರ ಬಗ್ಗೆ ಸಚಿವ ಕೋಟಾಶ್ರೀನಿವಾಸ್ ಪೂಜಾರಿಯವರ ಗಮನಸೆಳೆದರು.

ಇದಕ್ಕೆ ಉತ್ತರಿಸಿದ ಅವರು, ಕೋವಿಡ್ ಕಾರಣದಿಂದ ಶಾಲಾ ಕಟ್ಟಡದ ಕಾಮಗಾರಿಯನ್ನು ಪ್ರಾರಂಭಿಸಲು ಸಾಧ್ಯವಾಗಿಲ್ಲ. ಈಗಾಗಲೇ ಯೋಜನಾ ವರದಿಯನ್ನು ಸಿದ್ದಪಡಿಸಲಾಗಿದೆ ಮುಂಬರುವ ದಿನಗಳಲ್ಲಿ ಪರಿಶೀಲಿಸಿ ಕ್ರಮ ಕೈಗೊಳ್ಳುವ ಆಶ್ವಾಸನೆ ನೀಡಿದರು.

ಶಾಸಕರ ಸ್ಥಳೀಯ ಪ್ರದೇಶ ಅಭಿವೃದ್ಧಿ ಅನುದಾನ ಇಲ್ಲವೇ ಕಲ್ಯಾಣ ಕರ್ನಾಟಕ ವಿಶೇಷ ಯೋಜನೆಯಲ್ಲಿ ಇದನ್ನು ಅನುಷ್ಠಾಣ ಮಾಡುವ ಬಗ್ಗೆ ಅಕಾರಿಗಳ ಜೊತೆ ಸಭೆ ನಡೆಸುವುದಾಗಿ ಹೇಳಿದರು.

ಶಾಸಕ ವೆಂಕರೆಡ್ಡಿ ಮುದ್ನಾಳ್ ಅವರ ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಪೂಜಾರಿ, ಯಾದಗಿರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಡಿ.ದೇವರಾಜು ಅರಸು ಹಿಂದುಳಿದ ಅಭಿವೃದ್ಧಿ ನಿಗಮಕ್ಕೆ ಶೀಘ್ರದಲ್ಲೇ ಅನುದಾನವನ್ನು ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.

2021-22ರ ಸಾಲಿನಲ್ಲಿ ನಿಗಮಕ್ಕೆ 60 ಕೋಟಿಗಳಲ್ಲಿ ಶೈಕ್ಷಣಿಕ ಸಾಲ ಯೋಜನೆ, ಗಂಗಾ ಕಲ್ಯಾಣ ನೀರಾವರಿ ಯೋಜನೆ, ಸ್ವಯಂ ಉದ್ಯೋಗ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಿದ್ದೇವೆ. ಕೋವಿಡ್ ಕಾರಣದಿಂದ ಅನುದಾನ ಬಿಡುಗಡೆ ಮಾಡಲು ಸಾಧ್ಯವಾಗಿಲ್ಲ ಎಂದು ಹೇಳಿದರು.