ಒಂದು ವಾರ ದಟ್ಟ ಮಂಜು, ಚಳಿ ಇರಲಿದೆ: ಹವಾಮಾನ ಇಲಾಖೆ ಮುನ್ಸೂಚನೆ

ಒಂದು ವಾರ ದಟ್ಟ ಮಂಜು, ಚಳಿ ಇರಲಿದೆ: ಹವಾಮಾನ ಇಲಾಖೆ ಮುನ್ಸೂಚನೆ

ಬೆಂಗಳೂರು : ಜನವರಿ 18: ರಾಜ್ಯ ರಾಜಧಾನಿಯಲ್ಲಿ ಅತ್ಯಂತ ಕನಿಷ್ಠ ತಾಪಮಾನ ವರದಿಯಾದ ಬೆನ್ನಲ್ಲೆ ಇದೀಗ ಚಳಿ ಜೊತೆಗೆ ತೀವ್ರ ಮಂಜಿನ ವಾತಾವರಣ ಬೆಂಗಳೂರಿನ ಬಹುತೇಕ ಕಡೆಗಳಲ್ಲಿ ಒಂದು ವಾರ ಪೂರ್ತಿ ಕಂಡು ಬರುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಎರಡು ದಿನ ಅತಿ ಕನಿಷ್ಠ 13 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು. ಉಳಿದ ಕೆಲವು ಭಾಗಗಳಲ್ಲಿ ಮಂಜು ದಟ್ಟವಾಗಿತ್ತು. ಈ ಚಳಿ ಹಾಗೂ ಮಂಜು ಕವಿದ ವಾತಾವರಣ ಈ ವಾರಾಂತ್ಯದವರೆಗೂ ಮುಂದುವರಿಯಲಿದೆ. ಈ ವೇಳೆ ಚಳಿ ಪ್ರಮಾಣ ಸ್ವಲ್ಪ ಮಟ್ಟಿಗೆ ಕಡಿಮೆ ಯಾಗಲಿದೆ. ತಾಪಮಾನ ಕನಿಷ್ಠ 14ರಿಂದ 16ಡಿಗ್ರಿ ಸೆಲ್ಸಿಯಸ್ ವರೆಗೂ ದಾಖಲಾಗುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ತಿಳಿಸಿದೆ.

ಕೆಲವು ದಿನಗಳಿಂದ ಉದ್ಯಾನ ನಗರದಲ್ಲಿ ನಿರ್ಮಲ, ಸ್ಪಷ್ಟ ಆಕಾಶ ವಿದ್ದು, ಮಾರುತಗಳು ಇಲ್ಲವಾಗಿದೆ. ಇದು ಭೂಮಿ ತಾಪಮಾನ ಬೇಗ ಕಡಿಮೆಯಾಗಲು ಸಹಾಯವಾಗುತ್ತದೆ. ಇದರಿಂದಲೇ ತಂಪು ವಾತಾವರಣ ಬೇಗ ಪಸರುತ್ತದೆ. ನಗರದ ಕೆಲವೆಡೆ ದಟ್ಟ ಮಂಜು, ಇನ್ನು ಹಲವೆಡೆ ಮಧ್ಯಮ ಪ್ರಮಾಣದಲ್ಲಿ ಮಂಜು ಕಂಡು ಬರುತ್ತಿದೆ. ಜನರು ಭಾನುವಾರದಿಂದ ದಿಢೀರ್ ಹೆಚ್ಚಾದ ಈ ಚಳಿಗೆ ತತ್ತರಿಸಿದ್ದಾರೆ. ಆರೋಗ್ಯ ಬಗ್ಗೆ ಕಾಳಜಿ ವಹಿಸುತ್ತಿದ್ದಾರೆ.

ಈ ವಾರದ ತಾಪಮಾನದ ಅಂಕಿ ಅಂಶಗಳನ್ನು ನೋಡುವುದಾದರೆ ಗುರುವಾರ ಮತ್ತು ಶುಕ್ರವಾರ ಕನಿಷ್ಠ 14 ಡಿಗ್ರಿ ಸೆಲ್ಸಿಯಸ್, ಶನಿವಾರ 15 ಡಿಗ್ರಿ ಸೆಲ್ಸಿಯಸ್, ಭಾನುವಾರ 16 ಡಿಗ್ರಿ ಸೆಲ್ಸಿಯಸ್ ದಾಖಲಾಗುತ್ತದೆ. ಈ ಸಂದರ್ಭದಲ್ಲಿ ಗರಿಷ್ಠ ತಾಪಮಾನ ಎಲ್ಲ ಭಾಗದಲ್ಲೂ 30 ಡಿಗ್ರಿ ಸೆಲ್ಸಿಯಸ್ ಇರಲಿದೆ. ಈ ಕನಿಷ್ಠ ತಾಪಮಾನವು ಹೀಗೆ ಮುಂದುವರಿದಿದ್ದೇ ಆದಲ್ಲಿ ಮುಂದಿನ ವಾರವು ನಗರ ನಿವಾಸಿಗಳಿಗೆ ಚಳಿ ಸಂಕಷ್ಟ ಎದುರಾಗಲಿದೆ.

ಎರಡು ದಿನ ಅತ್ಯಧಿಕ ಮಂಜು

ಬೆಂಗಳೂರು ನಗರ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಶುಕ್ರವಾರ (ಜ.20) ಮತ್ತು ಶನಿವಾರ (21)ರಂದು ಭಾರಿ ಪ್ರಮಾಣದಲ್ಲಿ ಮಂಜು ಆವರಿಸಲಿದೆ ಎಂದು ಭಾರತೀಯ ಹವಾಮಾಣ ಇಲಾಖೆ ಬೆಂಗಳೂರು ಕೇಂದ್ರ ತಿಳಿಸಿದೆ. ಎರಡು ದಿನ ಬೆಳಗ್ಗೆ ವಿಪರೀತ ಮಂಜು ಬೀಳಲಿದೆ. 10ಅಡಿ ದೂರದ ವ್ಯಕ್ತಿ ಕಾಣದಷ್ಟು ತೀವ್ರ ಮಂಜು ಆವರಿಸಲಿದೆ. ಜನರು ಈ ವೇಳೆ ಬೆಚ್ಚಗಿನ ಧಿರಿಸು ಧರಿಸುವ ಮೂಲಕ ಆರೊಗ್ಯ ಕಾಪಾಡಿಕೊಳ್ಳಬೇಕು ಎಂದು ವೈದ್ಯರು ಸಲಹೆ ನೀಡಿದ್ದಾರೆ.