ರಾಜ್ಯಮಟ್ಟದ 'ವಿಜ್ಞಾನ ಮೇಳ'ಕ್ಕೆ ಇಂದು ಸಿಎಂ ಬೊಮ್ಮಾಯಿ ಚಾಲನೆ

ಬೆಂಗಳೂರು : ಅರಮನೆ ಮೈದಾನದಲ್ಲಿರುವ ತ್ರಿಪುರವಾಸಿನಿ ಸಭಾಂಗಣದಲ್ಲಿ ದಿ: 27.01.2023 & 28.01.2023 ರಂದು ವಿಜ್ಞಾನ ಮೇಳ ಆಯೋಜಿಸಲಾಗಿದ್ದು, ಇಂದು ಸಿಎಂ ಬೊಮ್ಮಾಯಿ ಚಾಲನೆ ನೀಡಲಿದ್ದಾರೆ.
ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ( ಕ್ರೈಸ್ ) 830 ವಸತಿ ಶಾಲೆಗಳು ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖಾ ವ್ಯಾಪ್ತಿಯ 326 ಶಾಲೆಗಳು ಸೇರಿದಂತೆ ಒಟ್ಟು 1156 ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ದೃಷ್ಠಿಕೋನ, ವಿಜ್ಞಾನದಲ್ಲಿ ಆಸಕ್ತಿ ಮೂಡಿಸಲು, ಮತ್ತು ವಿದ್ಯಾರ್ಥಿಗಳಲ್ಲಿನ ಪ್ರತಿಭೆಯನ್ನು ಗುರುತಿಸಿ, ಪ್ರೋತ್ಸಾಹಿಸಲು ರಾಜ್ಯ ಮಟ್ಟದ ವಿಜ್ಞಾನ ಮೇಳವನ್ನು(Science Exhibition) ಬೆಂಗಳೂರಿನ ಅರಮನೆ ಮೈದಾನದಲ್ಲಿರುವ ತ್ರಿಪುರವಾಸಿನಿ ಸಭಾಂಗಣದಲ್ಲಿ ದಿ: 27.01.2023 & 28.01.2023 ರಂದು ಆಯೋಜಿಸಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖಾ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ವಿದ್ಯಾರ್ಥಿಗಳು ಪ್ರಸ್ತುತ ಪಡಿಸುವ ವಿಜ್ಞಾನ ಮಾದರಿಗಳನ್ನು ವೀಕ್ಷಿಸಿ, ವಿದ್ಯಾರ್ಥಿಗಳ ಸುಪ್ತಚೇತನದಲ್ಲಿರುವ ವೈಜ್ಞಾನಿಕ ಮನೋಭವಾವನೆ, ಪ್ರತಿಭೆಯನ್ನು ಪ್ರೋತ್ಸಾಹಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಸಚಿವರುಗಳು, ಶಾಸಕರುಗಳು, ಸಂಸದರು ಹಾಗೂ ಇನ್ನಿತರೆ ಗಣ್ಯರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.ಎರಡು ದಿನಗಳ ಈ ರಾಜ್ಯ ಮಟ್ಟದ ವಿಜ್ಞಾನ ಮೇಳದಲ್ಲಿ ವಿದ್ಯಾರ್ಥಿಗಳು ವಿಜ್ಞಾನ, ಗಣಿತ, ಮಾಹಿತಿ ತಂತ್ರಜ್ಞಾನ ಹಾಗೂ ಇನ್ನಿತರೆ ಕ್ಷೇತ್ರಗಳಿಗೆ ಸಂಬಂಧಿಸಿದ ನಾವಿನ್ಯಯುತ ಪ್ರಯೋಗಗಳನ್ನು ಸಿದ್ಧಪಡಿಸಿ ಪ್ರದರ್ಶಿಸಲಿದ್ದಾರೆ. ರಾಜ್ಯದ ಪ್ರತಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ KREIS ಮತ್ತು ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶಾಲೆಗಳಲ್ಲಿ ಒಂದು ಶಾಲೆಯನ್ನು ಆಯಾ ಕ್ಷೇತ್ರದ ಶಾಸಕರ ಮಾರ್ಗದರ್ಶನದಲ್ಲಿ, ಅಧಿಕಾರಿಗಳು ಮತ್ತು ಸಂಪನ್ಮೂಲ ತಂಡದ ಮೂಲಕ ಆಯ್ಕೆ ಮಾಡಲಾಗಿದ್ದು, ಆಯ್ಕೆಗೊಂಡ ಶಾಲೆಯು ರಾಜ್ಯಮಟ್ಟದ ಪ್ರದರ್ಶದಲ್ಲಿ ಭಾಗವಹಿಸಲಿದೆ. ರಾಜ್ಯದ ಎಲ್ಲಾ 224 ವಿಧಾನ ಸಭಾ ಕ್ಷೇತ್ರಗಳಿಂದ ಆಯ್ಕೆಯಾಗಿರುವ ವಸತಿ ಶಾಲೆಗಳ ವಿದ್ಯಾರ್ಥಿಗಳು ಪ್ರದರ್ಶನದಲ್ಲಿ ಭಾಗವಹಿಸಲಿದ್ದಾರೆ. ಈ ಮೇಳವನ್ನು ಯಶಸ್ವಿಯಾಗಿ ಆಯೋಜಿಸಲು ಎಲ್ಲಾ ಅಗತ್ಯ ಕ್ರಮಗಳನ್ನು ಈಗಾಗಲೇ ಕೈಗೊಳ್ಳಲಾಗಿದೆ.ರಾಜ್ಯಮಟ್ಟಕ್ಕೆ ಆಯ್ಕೆಯಾದ ಪ್ರತಿಯೊಂದು ಶಾಲೆಯಿಂದ 5 ವಿದ್ಯಾರ್ಥಿಗಳು, ಒಬ್ಬರು ಪ್ರಾಂಶುಪಾಲರು ಮತ್ತು ಒಬ್ಬ ಶಿಕ್ಷಕರು ಒಟ್ಟು ಏಳು ಜನ ಭಾಗವಹಿಸಲಿದ್ದು, ಒಟ್ಟಾರೆ 1500 ಕ್ಕೂ ಹೆಚ್ಚು ಮಂದಿ ಭಾಗವಹಿಸಲಿದ್ದಾರೆ.
ಪ್ರತಿಷ್ಟಿತ ವಿಜ್ಞಾನ ಸಂಸ್ಥೆಗಳಾದ ISRO, IISc, Agasthya Foundation, Bharatha Jnana Vignana samiti, Nehru planetarium, Vishveshvaraiah Museum etc ಇವರಿಂದ ಮಕ್ಕಳು ಹಾಗೂ ಶಿಕ್ಷಕರ ಜ್ಞಾನಾರ್ಜನೆಗೆ ಪೂರಕವಾದ ವಿಜ್ಞಾನದ ಪ್ರಯೋಗಳ ಪ್ರದರ್ಶನ/ಪ್ರಾತ್ಯಕ್ಷಿಕೆ ಯನ್ನು ಏರ್ಪಡಿಸಲಾಗಿದೆ. ಈ ವಿಜ್ಞಾನ ಮೇಳವನ್ನು ವೀಕ್ಷಿಸಲು ಬೆಂಗಳೂರು ನಗರ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಲ್ಲಿನ ವಿದ್ಯಾರ್ಥಿಗಳು, ಶಿಕ್ಷಕರು, ವಿಜ್ಞಾನಾಸಕ್ತರು ಆಗಮಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಪುರಸ್ಕಾರ : ರಾಜ್ಯಮಟ್ಟದಲ್ಲಿ ಪ್ರಥಮ ಬಹುಮಾನ ಪಡೆದ ಶಾಲೆಗೆ ರೂ.5.00 ಲಕ್ಷ, ದ್ವಿತೀಯ ಬಹುಮಾನ ಪಡೆದ ಶಾಲೆಗೆ ರೂ.3.00 ಲಕ್ಷ ಮತ್ತು ತೃತೀಯ ಬಹುಮಾನ ಪಡೆದ ಶಾಲೆಗೆ ರೂ.2.00 ಲಕ್ಷಗಳನ್ನು ನೀಡಲಾಗುವುದು. ಅಲ್ಲದೆ ಪ್ರತಿ ಕಂದಾಯ ವಿಭಾಗದಲ್ಲಿನ ಅತ್ಯುತ್ತಮ ಪ್ರಯೋಗಕ್ಕೆ ಮೊದಲನೇ ಬಹುಮಾನ ಪಡೆಯುವ ಶಾಲೆಗೆ ರೂ.3.00 ಲಕ್ಷ, ಎರಡನೇ ಬುಹುಮಾನ ಪಡೆಯುವ ಶಾಲೆಗೆ ರೂ.2.00 ಲಕ್ಷ ಮತ್ತು 3ನೇ ಬುಹುಮಾನ ಪಡೆಯುವ ಶಾಲೆಗೆ ರೂ.1.00 ಲಕ್ಷ ನೀಡಲಾಗುತ್ತಿದ್ದು, ಒಟ್ಟಾರೆ ರೂ.34.00 ಲಕ್ಷ ಮೊತ್ತದ ನಗದು ಬಹುಮಾನಗಳೊಂದಿಗೆ ಪ್ರಶಸ್ತಿ ಪತ್ರದೊಡನೆ ಪ್ರದಾನ ಮಾಡಲಾಗುವುದು ಎಂದು ತಿಳಿಸಿದ್ದಾರೆ.ಈ ರಾಜ್ಯ ಮಟ್ಟದ ವಿಜ್ಞಾನ ಮೇಳಕ್ಕೆ ಸಾರ್ವಜನಿಕರಿಗೆ ಮುಕ್ತವಾಗಿ ಪ್ರವೇಶ ಅವಕಾಶವನ್ನು ಕಲ್ಪಿಸಲಾಗಿದೆ. ಈ ಮೇಳಕ್ಕೆ ಎರಡೂ ದಿನಗಳಲ್ಲಿ ವಿದ್ಯಾರ್ಥಿಗಳನ್ನು ಪೋಷಕರು ಸ್ವಯಂ ಪ್ರೇರಿತವಾಗಿ ಕರೆದುಕೊಂಡು ಬಂದು ವಿಜ್ಞಾನ ಮಾದರಿಗಳನ್ನು ವೀಕ್ಷಿಸಿ, ಮಕ್ಕಳನ್ನು ಪ್ರೋತ್ಸಾಹಿಸುವುದರೊಂದಿಗೆ ಮಕ್ಕಳ ಸುಪ್ತ ಚೇತನದಲ್ಲಿರುವ ಅನ್ವೇಷಣೆ, ಸಂಶೋಧನಾ ಹಾಗೂ ವೈಜ್ಞಾನಿಕ ಮನೋಭಾವವು ಹೊರಹೊಮ್ಮಲು ಉತ್ತೇಜನ ನೀಡಿ, ಈ ವಿಜ್ಞಾನ ಮೇಳವನ್ನು ಯಶಸ್ವಿಗೊಳಿಸಬೇಕು ಎಂದು ಕೋರಿದ್ದಾರೆ.