ಕುಸ್ತಿ ಅಸೋಸಿಯೇಷನ್ ಕಾರ್ಯ ನಿರ್ವಹಣೆಗೆ ಕೇಂದ್ರ ಸರ್ಕಾರದಿಂದ 'ಸಮಿತಿ' ರಚನೆ, 'ಮೇರಿ ಕೋಮ್'ಗೆ ಅಧ್ಯಕ್ಷತೆ

ಕುಸ್ತಿ ಅಸೋಸಿಯೇಷನ್ ಕಾರ್ಯ ನಿರ್ವಹಣೆಗೆ ಕೇಂದ್ರ ಸರ್ಕಾರದಿಂದ 'ಸಮಿತಿ' ರಚನೆ, 'ಮೇರಿ ಕೋಮ್'ಗೆ ಅಧ್ಯಕ್ಷತೆ

ವದೆಹಲಿ : ಕುಸ್ತಿಪಟುಗಳ ಧರಣಿಯ ನಂತರ, ಕುಸ್ತಿ ಸಂಘದ ಕಾರ್ಯಚಟುವಟಿಕೆಗಳನ್ನ ನೋಡಿಕೊಳ್ಳಲು ಸರ್ಕಾರ ಸಮಿತಿಯನ್ನ ರಚಿಸಿದೆ. ಒಲಿಂಪಿಯನ್ ಮತ್ತು ಮಾಜಿ ವಿಶ್ವ ಚಾಂಪಿಯನ್ ಬಾಕ್ಸರ್ ಮೇರಿ ಕೋಮ್ ಅವ್ರನ್ನ ಈ ಸಮಿತಿಯ ಅಧ್ಯಕ್ಷರನ್ನಾಗಿ ಮಾಡಲಾಗಿದೆ.

ಕುಸ್ತಿ ಫೆಡರೇಶನ್ ಆಫ್ ಇಂಡಿಯಾ (WFI) ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧದ ಲೈಂಗಿಕ ಕಿರುಕುಳ ಮತ್ತು ಭ್ರಷ್ಟಾಚಾರದ ಆರೋಪಗಳ ಬಗ್ಗೆ ತನಿಖೆ ನಡೆಸಲು ಮೇಲ್ವಿಚಾರಣಾ ಸಮಿತಿಯನ್ನು ಕ್ರೀಡಾ ಸಚಿವಾಲಯ ಘೋಷಿಸಿತ್ತು.

ಕುಸ್ತಿಪಟುಗಳ ಆರೋಪಗಳ ಹಿನ್ನೆಲೆಯಲ್ಲಿ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವ್ರನ್ನ ಕುಸ್ತಿ ಸಂಘದ ಕಾರ್ಯಚಟುವಟಿಕೆಗಳ ಮೇಲ್ವಿಚಾರಣೆಯಿಂದ ನಿಷೇಧಿಸಲಾಗಿದೆ. ಒಲಿಂಪಿಯನ್ ಕುಸ್ತಿಪಟು ಯೋಗೇಶ್ವರ್ ದತ್, ದ್ರೋಣಾಚಾರ್ಯ ಪ್ರಶಸ್ತಿ ವಿಜೇತ ತೃಪ್ತಿ ಮುರುಗಂಡೆ, ಕ್ಯಾಪ್ಟನ್ ರಾಜಗೋಪಾಲನ್, ರಾಧಾ ಶ್ರೀಮನ್ ಸಮಿತಿಯ ಸದಸ್ಯರಾಗಿದ್ದಾರೆ. ಕುಸ್ತಿ ಸಂಘದ ಕೆಲಸವನ್ನ ಈಗ ಈ ಮೇಲ್ವಿಚಾರಣಾ ಸಮಿತಿಯು ನೋಡಿಕೊಳ್ಳುತ್ತದೆ.

ಮೇಲ್ವಿಚಾರಣಾ ಸಮಿತಿಯನ್ನ ಔಪಚಾರಿಕವಾಗಿ ನೇಮಿಸುವವರೆಗೂ ಕುಸ್ತಿ ಒಕ್ಕೂಟದ ಎಲ್ಲಾ ಚಟುವಟಿಕೆಗಳನ್ನ ಸ್ಥಗಿತಗೊಳಿಸಲಾಗಿದೆ ಎಂದು ಕೇಂದ್ರ ಸರ್ಕಾರ ಶನಿವಾರ ತಿಳಿಸಿತ್ತು. ಇದಕ್ಕೂ ಮೊದಲು, ಸರ್ಕಾರದಿಂದ ಭರವಸೆ ಪಡೆದ ನಂತರ, ಆಟಗಾರರು ಶುಕ್ರವಾರ ತಡರಾತ್ರಿ ತಮ್ಮ ಧರಣಿಯನ್ನ ಕೊನೆಗೊಳಿಸಿದರು.