ಜನರ ಗಮನ ಬೇರೆಡೆ ಸೆಳೆಯುವ ತಂತ್ರ: ಕಾಂಗ್ರೆಸ್‌ ಟೀಕೆ

ಜನರ ಗಮನ ಬೇರೆಡೆ ಸೆಳೆಯುವ ತಂತ್ರ: ಕಾಂಗ್ರೆಸ್‌ ಟೀಕೆ

ವದೆಹಲಿ: 'ದೇಶವು ಜ್ವಲಂತ ಸಮಸ್ಯೆಗಳನ್ನು ಎದುರಿಸುತ್ತಿದೆ. ಅವುಗಳಿಂದ ಜನರ ಗಮನ ಬೇರೆಡೆ ಸೆಳೆಯುವ ಉದ್ದೇಶದಿಂದ ಬಿಜೆಪಿಯು ರಾಜೀವ್‌ಗಾಂಧಿ ಫೌಂಡೇಷನ್ (ಆರ್‌ಜಿಎಫ್) ಮತ್ತು ರಾಜೀವ್‌ಗಾಂಧಿ ಚಾರಿಟಬಲ್ ಟ್ರಸ್ಟ್‌ಗೆ (ಆರ್‌ಜಿಸಿಟಿ) ನೀಡಲಾಗಿದ್ದ ಪರವಾನಗಿಗಳನ್ನು ರದ್ದುಪಡಿಸಿದೆ' ಎಂದು ಕಾಂಗ್ರೆಸ್‌ ಟೀಕಿಸಿದೆ.

'ಬಿಜೆಪಿಯು ಹಳೆಯ ದೂರುಗಳನ್ನೇ ಮುಂದಿಟ್ಟುಕೊಂಡು ಪರವಾನಗಿ ರದ್ದು ಮಾಡಿದೆ. ಕಾಂಗ್ರೆಸ್‌ ಪಕ್ಷದ ಗೌರವಕ್ಕೆ ಧಕ್ಕೆ ತರುವುದು ಹಾಗೂ ಸಮಸ್ಯೆಗಳಿಂದ ಜನರ ಗಮನ ಬೇರೆಡೆ ಸೆಳೆಯುವುದು ಆ ಪಕ್ಷದ ಉದ್ದೇಶ' ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್‌ ರಮೇಶ್‌ ದೂರಿದ್ದಾರೆ.

'ದೇಶದಲ್ಲಿ ಆರ್ಥಿಕ ಬಿಕ್ಕಟ್ಟು ಸೃಷ್ಟಿಯಾಗಿದೆ. ರೂಪಾಯಿ ಮೌಲ್ಯ ಕುಸಿಯುತ್ತಿದೆ. ಬೆಲೆ ಏರಿಕೆ ಹಾಗೂ ನಿರುದ್ಯೋಗ ಸಮಸ್ಯೆಯಿಂದ ಜನ ಬೇಸತ್ತಿದ್ದಾರೆ' ಎಂದೂ ಹರಿಹಾಯ್ದಿದ್ದಾರೆ.