ಭ್ರಷ್ಟರು ಒಂದೇ ವೇದಿಕೆಯಲ್ಲಿ ಒಗ್ಗೂಡುತ್ತಾರೆ ; ವಿಪಕ್ಷಗಳ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ
ನವದೆಹಲಿ : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರನ್ನು ಲೋಕಸಭೆಯಿಂದ ಅನರ್ಹಗೊಳಿಸಿರುವ ಕುರಿತಂತೆ ಪ್ರತಿಪಕ್ಷಗಳು ಒಗ್ಗೂಡಿವೆ. ಇಂದು ಪ್ರಧಾನಿ ಮೋದಿಯವರು ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ್ದು, ಒಂದು ವೇದಿಕೆಯಲ್ಲಿ ಭ್ರಷ್ಟರು ಒಗ್ಗೂಡಿದ್ದಾರೆ ಎಂದು ಟೀಕಿಸಿದ್ದಾರೆ.
ಇಂದು ಪ್ರಧಾನಿ ಮೋದಿಯವರು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ವಸತಿ ಕಟ್ಟಡ ಮತ್ತು ಸಂಕೀರ್ಣವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ನಾವು ಸಾಂವಿಧಾನಿಕ ಸಂಸ್ಥೆಗಳ ಬಲವಾದ ಅಡಿಪಾಯವನ್ನು ಹೊಂದಿದ್ದೇವೆ. ಅದಕ್ಕಾಗಿಯೇ ಭಾರತವನ್ನು ತಡೆಯಲು ಸಾಂವಿಧಾನಿಕ ಸಂಸ್ಥೆಗಳ ಮೇಲೆ ದಾಳಿ ಮಾಡಲಾಗುತ್ತಿದೆ. ಭ್ರಷ್ಟಾಚಾರದ ವಿರುದ್ಧ ಬಿಜೆಪಿ ತನ್ನ ಹೋರಾಟ ನಡೆಸುತ್ತಿದೆ ಎಂದು ಹೇಳಿದ್ದಾರೆ.
ಏಜೆನ್ಸಿಗಳು ಕ್ರಮ ಕೈಗೊಂಡಾಗ ದಾಳಿ ಮಾಡಲಾಗುತ್ತಿದೆ. ನ್ಯಾಯಾಲಯಗಳಲ್ಲಿ ಪ್ರಶ್ನೆಗಳನ್ನು ಎತ್ತಲಾಗುತ್ತಿದೆ. ಕೆಲವು ಪಕ್ಷಗಳು 'ಭ್ರಷ್ಟಾಚಾರಿ ಬಚಾವೋ ಅಭಿಯಾನ' ಆರಂಭಿಸಿವೆ ಎಂದು ಕಾಂಗ್ರೆಸ್ ನಡೆಸುತ್ತಿರುವ ಲೋಕತಂತ್ರ ಬಚಾವೋ ಮಾಶಾಲ್ ಶಾಂತಿ ಮೆರವಣಿಗೆಯನ್ನು ಕಟುವಾಗಿ ಟೀಕಿಸಿದ್ದಾರೆ.
ಕಾಂಗ್ರೆಸ್ ಆಡಳಿತದಲ್ಲಿ PMLA (ಹಣ ಲಾಂಡರಿಂಗ್ ವಿರುದ್ಧ ಕಾನೂನು) ಅಡಿಯಲ್ಲಿ, ಒಟ್ಟು 5,000 ಕೋಟಿ ಜಪ್ತಿ ಮಾಡಲಾಗಿತ್ತು. ಆದರೆ ಬಿಜೆಪಿ ಅಡಿಯಲ್ಲಿ ನಾವು ಸುಮಾರು 10,00,000 ಕೋಟಿ ಜಪ್ತಿ ಮಾಡಿದ್ದೇವೆ. ಓಡಿಹೋದ ಇಪ್ಪತ್ತು ಸಾವಿರ ಆರ್ಥಿಕ ಅಪರಾಧಿಗಳು ನಮ್ಮಿಂದ ಸಿಕ್ಕಿಬಿದ್ದಿದ್ದಾರೆ. ಏಳು ದಶಕಗಳಲ್ಲಿ ಮೊದಲ ಬಾರಿಗೆ ಭ್ರಷ್ಟರ ವಿರುದ್ಧ ಇಂತಹ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ.
ನಾವು ಸೂಕ್ತ ಕ್ರಮ ಕೈಗೊಂಡರೆ ಕೆಲವರು ಅಸಮಾಧಾನಗೊಳ್ಳುತ್ತಾರೆ, ಕೋಪಗೊಳ್ಳುತ್ತಾರೆ. ಆದರೆ ಅವರ (ವಿರೋಧ) ಸುಳ್ಳು ಆರೋಪಗಳಿಂದ ಭ್ರಷ್ಟಾಚಾರದ ವಿರುದ್ಧದ ಕ್ರಮವನ್ನು ನಿಲ್ಲಿಸಲಾಗುವುದಿಲ್ಲ ಎಂದು ಹೇಳಿದ್ದಾರೆ.
ಕೇಂದ್ರೀಯ ತನಿಖಾ ದಳ ಮತ್ತು ಜಾರಿ ನಿರ್ದೇಶನಾಲಯದಂತಹ ಸಂಸ್ಥೆಗಳು ಬಿಜೆಪಿಯ ರಾಜಕೀಯ ವಿರೋಧಿಗಳನ್ನು ಮಾತ್ರ ಗುರಿಯಾಗಿಸುತ್ತಿವೆ ಎಂದು ವಿರೋಧ ಪಕ್ಷಗಳು ಸಲ್ಲಿಸಿರುವ ಅರ್ಜಿಯನ್ನು ಏಪ್ರಿಲ್ 15 ರಂದು ಸುಪ್ರೀಂ ಕೋರ್ಟ್‌ಗೆ ವಿಚಾರಣೆ ನಡೆಸಲಿದೆ.