ಬಿಎಂಟಿಸಿಯಿಂದ ಅಂತರ ಜಿಲ್ಲಾ ಬಸ್ ಸೇವೆ? ವಿವರ

ಬೆಂಗಳೂರು, ಜನವರಿ 18: ರಾಜ್ಯ ರಾಜಧಾನಿ ಬೆಂಗಳೂರಿನಿಂದ ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ ಮತ್ತು ರಾಜಧಾನಿಗೆ ಸಮೀಪವಿರುವ ಇತರ ಸ್ಥಳಗಳಿಗೆ ಸಿಟಿ ಬಸ್‌ಗಳನ್ನು ಓಡಿಸುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (ಬಿಎಂಟಿಸಿ) ಮಹತ್ವಾಕಾಂಕ್ಷೆಯ ಯೋಜನೆಯನ್ನು ಹಾಕಿಕೊಂಡಿದೆ ಎಂದು ವರದಿಗಳು ತಿಳಿಸಿವೆ.
ಆದರೆ ಈ ನಿಧಾರಕ್ಕೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಆಕ್ಷೇಪ ವ್ಯಕ್ತಪಡಿಸಿದ್ದು, ಯೋಜನೆಗೆ ಆಕ್ರೋಶ ವ್ಯಕ್ತಪಡಿಸಿದೆ ಎನ್ನಲಾಗಿದೆ. ಬೆಂಗಳೂರಿನಲ್ಲಿ ಸಾರ್ವಜನಿಕ ಸಾರಿಗೆಗಳನ್ನು ಬಳಸುವ ಲಕ್ಷಾಂತರ ಪ್ರಯಾಣಿಕರು ಬೆಂಗಳೂರು ಮೆಟ್ರೋಗೆ ಆಕರ್ಷಿತರಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಹಲವೆಡೆ ಬಿಎಂಟಿಸಿ ಬಸ್ ಓಡಾಟವನ್ನು ನಿಲ್ಲಿಸಿದೆ ಎನ್ನಲಾಗಿದೆ. ಆದರೆ ಜನ ಬಂದರು ಇಲ್ಲ ಬಾರದಿದ್ದರೂ ಬೆಂಗಳೂರಿನ ಕೆಲವೆಡೆ ಹಾಗೂ ಗ್ರಾಮಂತರದ ಕೆಲವೆಡೆ ಬಸ್‌ಗಳನ್ನು ಓಡಿಸಲಾಗುತ್ತಿದೆ. ಹೀಗಾಗಿ ಸಂಸ್ಥೆಗೆ ನಷ್ಟ ಅನುಭವಿಸಿತ್ತು. ಅದರ ನಷ್ಟ ಭರಿಸಲು ಹೊಸ ಪ್ಲಾನ್ ರೆಡಿಯಾಗಿದೆ.
ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಸಮೀಪದ ಜಿಲ್ಲೆಗಳಿಗೂ ಬಸ್ ಸಂಪರ್ಕ ಕಲ್ಪಿಸಲು ಮುಂದಾಗಿದೆ. ಇದಕ್ಕೆ ತಾರ್ಕಿಕ ಕಾರಣವೆಂಬಂತೆ ಬೆಂಗಳೂರು ಸಮೀಪದ ಜಿಲ್ಲೆಗಳಾದ ರಾಮನಗರ, ಚಿಕ್ಕಬಳ್ಳಾಪುರ ಕೋಲಾರದ ಭಾಗದಿಂದ ಸಾವಿರಾರು ಜನರು ಇಲ್ಲಿಗೆ ಕೆಲಸಕ್ಕೆ ನಿತ್ಯವೂ ಓಡಾಟ ಮಾಡುತ್ತಾರೆ. ಹೀಗಾಗಿ ಅವರಿಗೂ ನೆರವಾಗಲು ಬಿಎಂಟಿಸಿ ಯೋಜಿಸಿದೆ ಎಂದು ತಿಳಿದು ಬಂದಿದೆ.
ಕೋಲಾರದಿಂದ ಬೆಂಗಳೂರಿಗೆ 65 ಕೀಮಿ, ಕನಕಪುರ, ಚಿಕ್ಕಬಳ್ಳಾಪುರ 65 ಕಿಮೀ, ರಾಮನಗರ 48 ಕಿಮೀ ಇದ್ದು ಈ ಪ್ರದೇಶಗಳಿಗೆ ಬಿಎಂಟಿಸಿ ಬಸ್ ಓಡಿಸಲು ಮುಂದಾಗಿದೆ ಎನ್ನಲಾಗಿದೆ. ಈಗಾಗಲೇ ಬಿಎಂಟಿಸಿಯ 400 ವೋಲ್ವೋ ಬಸ್‌ಗಳು ಬಳಕೆಯಾಗುತ್ತಿಲ್ಲ. ಹಾಗಾಗಿ ಬೆಂಗಳೂರು ಸಮೀಪದ ಜಿಲ್ಲೆಗಳಿಗೆ ಬಿಎಂಟಿಸಿ ಬಸ್ ಓಡಿಸಲು ಮುಂದಾಗಿದೆ. ಬೆಂಗಳೂರು ಸಮೀಪದ ಜಿಲ್ಲೆಗಳಲ್ಲಿ ಖಾಸಗಿ ಸಂಸ್ಥೆ ಬಸ್‌ಗಳ ಹಾವಳಿ ಹೆಚ್ಚಾಗುತ್ತಿದೆ. ಹೀಗಾಗಿ ಅವರೊಂದಿಗೆ ಸ್ಪರ್ಧೆಗಿಳಿಯಲು ಮುಂದಾಗಿದೆ ಎನ್ನಲಾಗುತ್ತಿದೆ.
ಬೆಂಗಳೂರಿನಿಂದ ಹೊರಗೆ ಈಗ 25 ಕೀಮಿಯೊಳಗೆ ಬಸ್ ಸಂಚಾರಕ್ಕೆ ಅನುಮತಿ ನೀಡಲಾಗಿದೆ. ಈಗ ಅಂತರಜಿಲ್ಲಾ ವ್ಯಾಪ್ತಿಗೂ ಬಿಎಂಟಿಸಿ ಬಸ್ ಸೇವೆಯನ್ನು ಒದಗಿಸಲಾಗುವುದು ಎಂದು ತಿಳಿದು ಬಂದಿದೆ. ಬೆಂಗಳೂರಿಗೆ ಸೇವೆ ಒದಗಿಸುವ ಏಕೈಕ ಉದ್ದೇಶದಿಂದ 1997ರಲ್ಲಿ ಕೆಎಸ್‌ಆರ್‌ಟಿಸಿಯಿಂದ ಬಿಎಂಟಿಸಿಯನ್ನು ಬೇರ್ಪಡಿಸಲಾಗತ್ತು. ಬಿಎಂಟಿಸಿಯಲ್ಲಿ ನೇಮಕಗೊಂಡಿರುವ ಉಪಾಧ್ಯಕ್ಷರು, ನಗರವು ಎಲ್ಲಾ ದಿಕ್ಕುಗಳಲ್ಲಿಯೂ ಬೆಳೆದಿರುವುದರಿಂದ ಮತ್ತು ಜನರು ಕೆಲಸಕ್ಕಾಗಿ ನೆರೆಯ ಜಿಲ್ಲೆಗಳಿಂದ ಪ್ರಯಾಣಿಸುವುದರಿಂದ ನಿಗಮವು ತನ್ನ ಸೇವೆಗಳನ್ನು ತನ್ನ ವ್ಯಾಪ್ತಿಯನ್ನು ಮೀರಿ ವಿಸ್ತರಿಸುವ ಆಲೋಚನೆಯನ್ನು ಮುಂದಿಟ್ಟದ್ದರು.
ಬಿಎಂಟಿಸಿ ನಗರ ವ್ಯಾಪ್ತಿಯಲ್ಲಿ ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮಿತಿಯಿಂದ 25 ಕಿ.ಮೀ ಒಳಗೆ ಬಸ್ಸುಗಳನ್ನು ಓಡಿಸಲು ಆದೇಶವನ್ನು ಹೊಂದಿದೆ. ಎರಡೂ ಸಂಸ್ಥೆಗಳ ಹಿತದೃಷ್ಟಿಯಿಂದ ಚಿಕ್ಕಬಳ್ಳಾಪುರಕ್ಕೆ ಸಿಟಿ ಬಸ್‌ಗಳನ್ನು ಓಡಿಸುವ ಆಲೋಚನೆಯನ್ನು ಕೈಬಿಡಲಾಗಿದೆ ಎಂದು ಬಿಎಂಟಿಸಿ ಅಧ್ಯಕ್ಷ ಎನ್.ಎಸ್. ನಂದೀಶ ರೆಡ್ಡಿ ತಿಳಿಸಿದ್ದಾರೆ ಎಂದು ದಿ ಹಿಂದೂ ವರದಿ ಮಾಡಿದೆ.