ಧಾರವಾಡ: ವಚನ ಸಾಹಿತ್ಯದ ಪಿತಾಮಹರೆನಿಸಿದ ಡಾ. ಫ.ಗು.ಹಳಕಟ್ಟಿಯವರ ಜನ್ಮದಿನವಾದ ಜುಲೈ ೦೨ ರಂದು ವಚನ ಸಾಹಿತ್ಯ ಸಂರಕ್ಷಣಾ ದಿನವೆಂದು ಘೋಷಿಸಿದ ಸರಕಾರದ ಕಾರ್ಯಕ್ಕೆ ಪಂ.ಪುಟ್ಟರಾಜ ಗವಾಯಿಗಳ ಕಲಾ ಪ್ರತಿಷ್ಠಾನದ ಕಾರ್ಯದರ್ಶಿ, ಸಾಹಿತಿಗಳಾದ ಮಾರ್ತಾಂಡಪ್ಪ ಎಮ್ ಕತ್ತಿ ಅಭಿನಂದನೆಗಳನ್ನು ಸಲ್ಲಿಸಿ, ನಿರ್ಣಯ ಕೈಗೊಂಡ ಸರ್ವರಿಗೂ ಧನ್ಯವಾದಗಳನ್ನು ಅರ್ಪಿಸಿದ್ದಾರೆ.
ಬಸವಾದಿ ಶರಣ ಶರಣೆಯರಿಂದ ೧೨ನೇ ಶತಮಾನದಲ್ಲಿ ರಚಿತವಾದ ವಚನ ಸಾಹಿತ್ಯವು ಕಾರಣಾಂತರಗಳಿAದ ಜನಸಾಮಾನ್ಯರ ಗಮನಕ್ಕೆ ಬಾರದ ೧೯ನೇ ಶತಮಾನದ ಕೊನೆಯವರೆಗೆ ಗುಪ್ತವಾಗಿಯೇ ಉಳಿದಿದ್ದು, ಈ ಸಾಹಿತ್ಯ ನಿಧಿಯನ್ನು ಲೋಕದ ಗಮನಕ್ಕೆ ತರುವ ಮಹತ್ಕಾರ್ಯವು ೨೦ನೇ ಶತಮಾನದ ಹಾದಿಯಲ್ಲಿ ಪ್ರಾರಂಭವಾಯಿತು. ವಚನ ಸಾಹಿತ್ಯವನ್ನು ಬೆಳಕಿಗೆ ತರುವಲ್ಲಿ ಡಾ.ಪ.ಗು.ಹಳಕಟ್ಟಿಯವರ ಕೊಡುಗೆ ಅಪಾರವಾಗಿದೆ. ಅವರ ಈ ಕಾರ್ಯವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರು ಆಸಕ್ತಿ ವಹಿಸಿ ಸ್ಮರಿಸಿರುವುದು ವಚನಗಳಿಗೆ ಸಲ್ಲಿಸಿದ ಗೌರವವಾಗಿದೆ.
೧೮೮೦ ಜುಲೈ ೦೨ ರಂದು ಜನಿಸಿದ ಡಾ.ಫ.ಗು.ಹಳಕಟ್ಟಿಯವರು ನಂತರ ವಿಜಯಪುರ (ಬಿಜಾಪುರ)ದಲ್ಲಿ ನೆಲೆನಿಂತು ತಮ್ಮ ವಕೀಲ ವೃತ್ತಿಯ ಜೊತೆಗೆ ವಚನ ಸಾಹಿತ್ಯದ ಹುಡುಕಾಟ, ಸಂಗ್ರಹ, ಸಂಶೋಧನೆ, ಪ್ರಕಟಣೆ, ಸಂವಾದನೆ ಕೆಲಸದಲ್ಲಿ ತಲ್ಲೀನರಾದರು. ಹೀಗೆ ಸಂಗ್ರಹಿಸಿದ ವಚನ ಸಾಹಿತ್ಯವನ್ನು ಪ್ರಕಟಿಸಿ ಒಂದು ಸಂತ ಮುದ್ರಣಾಲಯ ಸ್ಥಾಪಿಸಬೇಕೆಂದು, ತಾವೇ ಪ್ರಾರಂಭಿಸಿದ ಶಿವಾನುಭವ ಪತ್ರಿಕ ಮೂಲಕ ವಚನ ಸಾಹಿತ್ಯದ ಪ್ರಸಾರ ಕಾರ್ಯ ನಿರಂತರವಾಗಿ ಕೈಗೊಂಡರು. ಹೀಗೆ ತಮ್ಮ ಜೀವಮಾನವಿಡಿ ಕನ್ನಡ ಸಾಹಿತ್ಯದ ಅಪೂರ್ವ ನಿಧಿಯನಿಸಿದ ವಚನ ಸಾಹಿತ್ಯವನ್ನು ಬೆಳಕಿಗೆ ತಂದು ಜನಮಾನಸಕ್ಕೆ ತಲುಪಿಸಿದ ಕೀರ್ತಿ ಫ.ಗು.ಹಳಕಟ್ಟಿಯವರದು. ಅದರಂತೆ ಸನ್ಮಾನ್ಯ ಮುಖ್ಯಮಂತ್ರಿಯವರು ವಚನ ಸಾಹಿತ್ಯದ ಪಿತಾಮಹರೆನಿಸಿದ ಡಾ. ಫ.ಗು.ಹಳಕಟ್ಟಿಯವರ ಜನ್ಮದಿನವಾದ ಜುಲೈ ೦೨ ರಂದು ವಚನ ಸಾಹಿತ್ಯ ಸಂರಕ್ಷಣಾ ದಿನವೆಂದು ಘೋಷಿಸಲು ಆದೇಶಿಸಿರುತ್ತಾರೆ.ಅವರಿಗೆ ಪಂ.ಪುಟ್ಟರಾಜ ಗವಾಯಿಗಳ ಕಲಾ ಪ್ರತಿಷ್ಠಾನ ಮತ್ತು ಕಲಾ ಸ್ಪಂದನ ಹಾವೇರಿಯ ಎಲ್ಲ ಪದಾಧಿಕಾರಿಗಳು ಅಭಿನಂದಿಸಿ ಗೌರವ ಸಲ್ಲಿಸಿದ್ದಾರೆ.
ಡಾ. ಫ.ಗು.ಹಳಕಟ್ಟಿಯವರ ಜನ್ಮದಿನವನ್ನು 'ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆಯನ್ನಾಗಿ ಜುಲೈ ೦೨ ರಂದು ರಾಜ್ಯಾದ್ಯಂತ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಆಚರಿಸಲು ಸರ್ಕಾರವು ಆದೇಶಿಸಿದೆ ಎಂದು ಮಾರ್ತಾಂಡಪ್ಪ ಎಮ್ ಕತ್ತಿ ಹೇಳಿದ್ದಾರೆ. ಈ ಕಾರ್ಯಕ್ಕೆ ಕೆ.ಎಚ್.ನಾಯಕ, ಪ್ರೇಮಾನಂದ ಶಿಂಧೆ,ರಾಜಶೇಖರಗೌಡ ಕಂಟೆಪ್ಪಗೌಡರ, ಮಂಜುನಾಥ ಕತ್ತಿ, ಜಗದೀಶ ಎಮ್ ಕೆ, ಸಿದ್ದವೀರಗೌಡ ಪಾಟೀಲ, ಸುರೇಶ ಬೆಟಗೇರಿ, ಶ್ರೀಶೈಲ ಚಿಕನಳ್ಳಿ ಮುಂತಾದವರು ಅಭಿನಂದಿಸಿದ್ದಾರೆ.