ಆರಕ್ಷಕರ ಕುಟುಂಬದವರ ರಕ್ಷಣೆ ಯಾರ ಹೆಗಲಿಗೆ... ಜನರ ರಕ್ಷಣೆ ನೀಡುವ ಪೊಲೀಸರ ಕುಟುಂಬದ ರಕ್ಷಣೆ ಸರ್ಕಾರ ನೀಡಬೇಕು

   ಪೊಲೀಸರಿಗೆ ಸರ್ಕಾರ ಎಲ್ಲಾ ಸವಲತ್ತುಗಳನ್ನು ನೀಡ್ತಾರೆ ಅನ್ನೋದು ಎಲ್ಲರ ಊಹೆ ಆಗಿತ್ತೆ. ಬೇರೆ ಜಿಲ್ಲೆಗಳಲ್ಲಿ ಪೊಲೀಸರಿಗೆ ಉತ್ತಮ ರೀತಿಯ ಸವಲತ್ತುಗಳನ್ನು ನೀಡಿರಬಹುದು. ಆದ್ರೆ ಧಾರವಾಡದಲ್ಲಿ ಪೊಲೀಸರಿಗೆ ಹಂಚಿಕೆ ಮಾಡಿರುವ ಪೊಲೀಸ್ ವಸತಿ ಗೃಹಗಳನ್ನು ನೋಡಿದ್ರೇ ಆರಕ್ಷಕರ ಕುಟುಂಬ, ಭಯದ ಮಧ್ಯೆಯೇ ದಿನ ಕಳೆಯುತ್ತದೆ. ಹಾಗಾದ್ರೆ ಏನಿದು ಅಂತಿರಾ ಈ ಸ್ಟೋರಿ ನೋಡಿ......
 ಹೊರಗಿನಿಂದ ನೋಡಿದರೆ ಹೊಚ್ಚ ಹೊಸದಾದ ಕಟ್ಟಡ. ನಿಜಕ್ಕೂ ಇದು ಹೊಸ ಕಟ್ಟಡವೂ ಕೂಡಾ ಹೌದು, ಇದು ನಿರ್ಮಾಣಗೊಂಡಿದ್ದು ಆರು ವರ್ಷಗಳ ಹಿಂದೆಯಷ್ಟೇ. ಆದರೂ ಇಂತಹ ಹೊಸ ಕಟ್ಟಡದಲ್ಲಿರೋಕೆ ಇಲ್ಲಿನವರು ಹೆದರಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಇದೀಗ ಈ ಕಟ್ಟಡ ಕುಸಿದು ಬೀಳುವ ಭೀತಿಯಲ್ಲಿದೆ. ಇದು ಧಾರವಾಡದ ಸಾಧನಕೇರಿಯ ರಕ್ಷಾ ಕಾಲೊನಿಯಲ್ಲಿ ಪೊಲೀಸ್ ಸಿಬ್ಬಂದಿಗಾಗಿಯೇ ನಿರ್ಮಿಸಿರುವ ವಸತಿ ಸಮುಚ್ಚಯ. ಒಟ್ಟು ಎರಡು ವಿಭಾಗಗಳಲ್ಲಿ ತಲಾ ಎರಡು ಮಹಡಿಗಳಿದ್ದು, 24 ಕುಟುಂಬಗಳು ಇಲ್ಲಿವೆ. ದುರಂತ ಅಂದ್ರೆ ಇಡೀ ಕಟ್ಟಡವೇ ಈಗ ಹಿಂಭಾಗಕ್ಕೆ ಕುಸಿದು ಬೀಳುತ್ತೇನೋ ಎನ್ನುವ ಭೀತಿ ಎದುರಾಗಿದೆ. ಈ ಕಟ್ಟಡದ ಹಿಂಭಾಗದಲ್ಲಿ ಸಣ್ಣದಾಗಿ ಶುರುವಾಗಿದ್ದ ಕುಸಿತ ಈಗ ದೊಡ್ಡ ಪ್ರಮಾಣಕ್ಕೇರಿದೆ. ಆರಂಭದಲ್ಲಿ ಕಟ್ಟಡಕ್ಕೆ ಹಾಕಲಾಗಿದ್ದ ಆವರಣ ಗೋಡೆ ಕುಸಿದು ಬೀಳುತ್ತಿದೆ ಅಂತಾನೇ ಇಲ್ಲಿದ್ದವರು ಭಾವಿಸಿದ್ದರು. ಆದರೆ ಈಗ ಆವರಣ ಗೋಡೆ ಸಮೇತ ಕಟ್ಟಡಕ್ಕೆ ಮಾಡಲಾಗಿದ್ದ ಹೊರಕವಚವೂ ಸಹ ಕುಸಿಯೋದಕ್ಕೆ ಶುರುವಾದಾಗಿನಿಂದ ಇಲ್ಲಿರುವ  ಪೊಲೀಸ್ ಕುಟುಂಬಗಳು ಜೀವ ಭಯದಲ್ಲಿ ದಿನ ಕಳೆಯುತ್ತಿವೆ...
ಇದು ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರೇಟ್  ವ್ಯಾಪ್ತಿಗೆ ಬರುವ ವಸತಿ ಸಮುಚ್ಚಯ. ಇಲ್ಲಿರುವ ಎಲ್ಲರೂ ಈ ವ್ಯಾಪ್ತಿಯಲ್ಲೇ ಕಾರ್ಯನಿರ್ವಹಿಸುವ  ಪೊಲೀಸರು. ಆದರೆ ಈ ಪೊಲೀಸ್ ಕುಟುಂಬಗಳೇ ಈಗ ಭಯದಲ್ಲಿರಬೇಕಾಗಿದೆ. ಮೇಲ್ಮಹಡಿಯಲ್ಲಿರುವ  ಮನೆಗಳಲ್ಲಿ ತಾರಸಿಯಿಂದ ಸಾಕಷ್ಟು ನೀರು ಸೋರಿಕೆಯಾಗುತ್ತಿದ್ದು, ಇಂತಹ ಹೊಚ್ಚ ಹೊಸ ಕಟ್ಟಡದಲ್ಲಿದ್ದರೂ ಪ್ಲಾಸ್ಟಿಕ್ ಕಟ್ಟಿಕೊಂಡು ಮನೆಯೊಳಗೆ ಗುಡಿಸಲಿನಂತೆ ಇರಬೇಕಾದ ಸ್ಥಿತಿ ಈ ಕುಟುಂಬದ್ದಾಗಿದೆ....
ಇದೊಂದು ಮಾತ್ರವಲ್ಲ ಈ ಕಟ್ಟದೊಳಗೆ ಒಮ್ಮೆ ಪ್ರವೇಶಿಸಿದರೆ ಸಾಕು ಹೆಜ್ಜೆ ಹೆಜ್ಜೆಗೂ ಸಮಸ್ಯೆಗಳೇ ಎದುರಾಗುತ್ತವೆ. ಇಡೀ ಕಟ್ಟಡವೇ ಕುಸಿಯುವ ಭೀತಿಯಲ್ಲಿರುವ ಕಾರಣಕ್ಕೆ ದುರಂತ ಸಂಭವಿಸುವ ಮುಂಚೆಯೇ  ಮೇಲಾಧಿಕಾರಿಗಳು ಎಚ್ಚೆತ್ತುಕೊಂಡು ಸೂಕ್ತ ಕ್ರಮ ಕೈಗೊಳ್ಳಬೇಕಾದ ಅಗತ್ಯವಿದೆ ಎನ್ನಲಾಗಿದೆ