ವಿಧಾನಸೌಧದ ಗೇಟ್ನಲ್ಲಿ 10 ಲಕ್ಷ ರೂ ಹಣ ಸೀಜ್ ಮಾಡಿದ ಪೊಲೀಸರು
ಬೆಂಗಳೂರು: ವಿಧಾನಸೌಧದ ಪೂರ್ವ ಗೇಟ್ನಲ್ಲಿ 10 ಲಕ್ಷ ರೂಪಾಯಿ ಹಣವನ್ನು ಪೊಲೀಸರು ವಶಕ್ಕೆ ಪಡೆದಿರುವುದಾಗಿ ವರದಿಯಾಗಿದೆ.
ಲೋಕೋಪಯೋಗಿ ಇಲಾಖೆಯ ಎಇ ಹಣ ತಂದಿದ್ದರು ಎನ್ನಲಾಗಿದ್ದು, ಸಚಿವರೊಬ್ಬರನ್ನು ಭೇಟಿಯಾಗಲು ಬಂದಿದ್ದ ವೇಳೆ ಹಣದ ಸಮೇತ ಬ್ಯಾಗ್ ಅನ್ನು ಪೊಲೀಸರು ಸೀಜ್ ಮಾಡಿದ್ದಾರೆ.
ಹಣ ತಂದಿದ್ದ ಎಇಯನ್ನು ಪ್ರಶ್ನೆ ಮಾಡಿದ್ದಕ್ಕೆ ಗುತ್ತಿಗೆದಾರರಿಗೆ ನೀಡುವ ಹಣ ಎಂದು ಹೇಳಿದ್ದಾರೆ. ಸದ್ಯ ದೂರು ದಾಖಲಿಸಿ ಹಣವನ್ನು ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ. ದಾಖಲಾತಿ ನೀಡಿ ನ್ಯಾಯಲಯಲ್ಲಿ ಹಣ ಪಡೆದುಕೊಳ್ಳುವಂತೆ ಪೊಲೀಸರು ಸೂಚನೆ ನೀಡಿದ್ದಾರೆ.
ಈ ಬಗ್ಗೆ ಕೇಂದ್ರ ಡಿಸಿಪಿ ಶ್ರೀನಿವಾಸ ಗೌಡ ಹೇಳಿಕೆ ನೀಡಿದ್ದು, PWD ಇಲಾಖೆಯ ಜೂನಿಯರ್ ಇಂಜಿನಿಯರ್ ಒರ್ವರು ಹಣದ ಸಹಿತ ಬಂದಿದ್ದರು. ಈ ವೇಳೆ ವಿಧಾನ ಸೌಧ ಮತ್ತು ವಿಕಾಸ ಸೌಧದ ಭದ್ರತಾ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಳಿಕ ಹಣದ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಆದರೆ, ಅವರ ಬಳಿ ಸರಿಯಾದ ಉತ್ತರ ಇಲ್ಲ. ಸದ್ಯ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ತಿಳಿಸಿದರು.
ಹತ್ತು ಲಕ್ಷದ ಐವತ್ತು ಸಾವಿರ ಹಣ ವಶಕ್ಕೆ ಪಡೆಯಲಾಗಿದೆ. ಹಣದ ಮೂಲ ಯಾವುದು? ಹಣ ಯಾಕೆ ತಂದಿದ್ದು? ಎಲ್ಲಿ ಡ್ರಾ ಮಾಡಲಾಗಿದೆ? ಮತ್ತು ಯಾರಿಗೆ ಕೊಡುವ ಉದ್ದೇಶ ಇದೆ? ಎಂಬುದನ್ನು ಮಾಹಿತಿ ನೀಡುವಂತೆ ಸೂಚನೆ ನೀಡಲಾಗಿದೆ. ತಾನು ಮಂಡ್ಯದಲ್ಲಿ ಕೆಲಸ ಮಾಡ್ತಿದ್ದು ಇಲ್ಲಿ ವಿಕಾಸಸೌಧದಲ್ಲಿ ಕೆಲಸ ಇದ್ದ ಕಾರಣ ತಂದಿದ್ದೆ. ನಾವು ಹಣವನ್ನು ಮಂಡ್ಯಕ್ಕೆ ತೆಗೆದುಕೊಂಡು ಹೋಗುವುದಿತ್ತು ಎಂದು ಹಣ ತಂದಿದ್ದ ಜಗದೀಶ್ ಹೇಳಿದ್ದಾರೆ.
ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.