'ನಮ್ಮ ಮೆಟ್ರೋ ಪ್ರಯಾಣಿ'ಕರಿಗೆ ಗುಡ್ ನ್ಯೂಸ್ ಈ ನಿಲ್ದಾಣಗಳಲ್ಲಿ 'ಆಟೋ ರಿಕ್ಷಾ ಕೌಂಟರ್' ಓಪನ್

'ನಮ್ಮ ಮೆಟ್ರೋ ಪ್ರಯಾಣಿ'ಕರಿಗೆ ಗುಡ್ ನ್ಯೂಸ್ ಈ ನಿಲ್ದಾಣಗಳಲ್ಲಿ 'ಆಟೋ ರಿಕ್ಷಾ ಕೌಂಟರ್' ಓಪನ್

ಬೆಂಗಳೂರು: ನಮ್ಮ ಮೆಟ್ರೋ  ಪ್ರಯಾಣಿಕರ ಅನುಕೂಲಕ್ಕಾಗಿ, ಬೆಂಗಳೂರಿನ ಕೆಲ ಮೆಟ್ರೋ ನಿಲ್ದಾಣಗಳ ಬಳಿಯಲ್ಲಿ ಪೂರ್ವ ನಿಶ್ಚಿತ ಆಟೋ ರಿಕ್ಷಾ ದರದ ಕೌಂಟರ್ ಗಳನ್ನು ಇಂದಿನಿಂದ ಆರಂಭಿಸಲಾಗುತ್ತಿದೆ. ಈ ನಿಲ್ದಾಣಗಳಲ್ಲಿ ಪ್ರಯಾಣಿಕರು ತಮ್ಮ ನಿವಾಸಗಳಿಗೆ ಆಟೋದಲ್ಲಿ ಪೂರ್ವ ನಿಗಧಿತ ದರದಲ್ಲಿ ತಲುಪುವಂತ ವ್ಯವಸ್ಥೆ ಮಾಡಲಾಗಿದೆ.

ಈ ಬಗ್ಗೆ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತವು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ಬಿಎಂಆರ್ ಸಿಎಲ್ ಹಾಗೂ ಬೆಂಗಳೂರು ಸಂಚಾರ ಪೊಲೀಸ್ ಸಹಯೋಗದೊಂದಿಗೆ ಪೂರ್ವ ನಿಶ್ಚಿತ ಆಟೋ ರಿಕ್ಷಾ ದರದ ಕೌಂಟರ್ ಗಳನ್ನು ಇಂದು ಎಂ.ಜಿ ರಸ್ತೆ ಮತ್ತು ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣಗಳಲ್ಲಿ ಪ್ರಾರಂಭಿಸಿರುವುದಾಗಿ ತಿಳಿಸಿದೆ.

ಇನ್ನೂ ಈ ಕೌಂಟರ್ ಗಳನ್ನು ಬೈಯಪ್ಪನಹಳ್ಳಿ, ಬನಶಂಕರಿ ಮತ್ತು ನಾಗಸಂದ್ರದ 2 ಸ್ಥಳಗಳಲ್ಲಿ ಮೆಟ್ರೋ ನಿಲ್ದಾಣಗಳ ಆಗಮನ, ನಿರ್ಗಮನ ದ್ವಾರಗಳಲ್ಲಿ ಪ್ರಾರಂಭಿಸಲಾಗುವುದು. ಪ್ರಯಾಣಿಕರು ಮೊದಲು ಮತ್ತು ಕೊನೆಯ ಮೈಲಿ ಸಂಪರ್ಕ ಭಾಗವಾಗಿ ಮತ್ತು ಬೆಂಗಳೂರಿನ ನಾಗರೀಕರು ತಮ್ಮ ಸ್ಥಳಗಳಿಗೆ ಸುರಕ್ಷಿತವಾಗಿ ತಲುಪಲು ಅನುಕೂಲವಾಗಲಿದೆ ಎಂದಿದೆ.

ಮೆಟ್ರೋ ನಿಲ್ದಾಣಗಳ ಬಳಿಯ ಆಟೋ ಕೌಂಟರ್ ಗಳು ಪ್ರತಿದಿನ ಬೆಳಿಗ್ಗೆ 7 ಗಂಟೆಯಿಂದ ಮರುದಿನ ಮುಂಜಾನೆ 12.30ರವರೆಗೆ ತೆರೆದಿರುತ್ತವೆ. ಸರ್ಕಾರದ ನಿಗದಿತ ದರದಂತೆ ಆಟೋ ರಿಕ್ಷಾ ಪ್ರಯಾಣಕ್ಕೆ 2 ಕಿಲೋ ಮೀಟರ್ ವರೆಗೆ ಕನಿಷ್ಠ 30 ರೂ ಮತ್ತು ನಂತ್ರದ ಪ್ರತಿ ಕಿಲೋ ಮೀಟರ್ ಗೆ 15 ರೂ ಶುಲ್ಕ ವಿಧಿಸಲಾಗುತ್ತದೆ. ರಾತ್ರಿ 10ರಿಂದ ಬೆಳಿಗ್ಗೆ 5ರವರೆಗೆ ಸಾಮಾನ್ಯ ದರಕ್ಕಿಂತ ಒಂದೂವರೆ ಪಟ್ಟು ಹೆಚ್ಚಾಗಿರುತ್ತದೆ ಎಂದು ಹೇಳಿದೆ.