ಪಿಎಸ್‌ಐ ಅಕ್ರಮ ನೇಮಕಾತಿ ಪ್ರಕರಣ: ಪರಾರಿಯಾಗಿದ್ದ ಕಿಂಗ್ ಪಿನ್ ಪಾಟೀಲ್ ಪತ್ತೆ

ಹೊಸದಿಗಂತ ವರದಿ ಕಲಬುರಗಿ:
ಪಿಎಸ್‌ಐ ನೇಮಕಾತಿ ಆಕ್ರಮಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳನ್ನು ತಳ್ಳಿ ಪರಾರಿಯಾಗಿದ್ದ ಕಿಂಗ್ ಪಿನ್ ಆರ್.ಡಿ.ಪಾಟೀಲ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಪತ್ತೆಯಾಗಿದ್ದಾನೆ. ಅಜ್ಞಾತ ಸ್ಥಳದಿಂದ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಮೂಲಕ ತನ್ನ ಅಭಿಮಾನಿಗಳಿಗೆ ವಿಶೇಷ ನಮಸ್ಕಾರಗಳು ತಿಳಿಸಿದ್ದಾರೆ.
ಕಳೆದ 9 ತಿಂಗಳಿನಿಂದ ನನ್ನ ಮೇಲೆ ರಾಜಕೀಯ ಕುತಂತ್ರ ಮಾಡಿ, ಹಗರಣದಲ್ಲಿ ಸಿಲುಕಿಸಲಾಗಿದೆ.ನನ್ನ ಸಾಮಾಜಿಕ ಸೇವೆ ನೋಡಿ ರಾಜಕೀಯಕ್ಕೆ ಬರಬಹುದೆಂದು ನನ್ನನ್ನು ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎಂದು ತಿಳಿಸಿದರು. ಕೆಲವು ಸಿಐಡಿ ಅಧಿಕಾರಿಗಳು ರಾಜಕೀಯ ಮುಖಂಡರ ಕೈಗೊಂಬೆಯಾಗಿದ್ದು,ನನ್ನ ಮೇಲೆ ಕುತಂತ್ರ ಹೆಣೆದಿದ್ದಾರೆ ಎಂದ ಅವರು, ಯಾರು ಏನೇ ಕುತಂತ್ರ ಮಾಡಿದರು,ನನ್ನ ಸಾಮಾಜಿಕ ಸೇವೆ ನಿಲ್ಲುವುದಿಲ್ಲ ಎಂದು ಹೇಳಿಕೊಂಡಿದ್ದಾರೆ.
ನನ್ನ ಬಗ್ಗೆ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ಸುದ್ದಿ ಸತ್ಯಕ್ಕೆ ದೂರವಾಗಿದ್ದು,ನನ್ನನ್ನು ಬಗ್ಗು ಬಡೆಯಲು ಕೆಲವು ರಾಜಕೀಯ ಮುಖಂಡರು ಮುಂದಾಗಿದ್ದಾರೆ. ಇಂತಹ ಹತ್ತು ಪ್ರಕರಣಗಳು ನನ್ನ ಹೆಗಲ ಮೇಲೆ ಬಿದ್ದರು,ನಾನಂತೂ ನನ್ನ ಸಾಮಾಜಿಕ ಸೇವೆ ನಿಲ್ಲಿಸುವುದಿಲ್ಲ ಎಂದು ಹೇಳಿದ್ದಾರೆ.
ನಾನು ಅಫಜಲಪುರ ವಿಧಾನ ಸಭಾ ಕ್ಷೇತ್ರದಲ್ಲಿ ಸ್ಪರ್ಧೆ ಗೆ ಯತ್ನಿಸಿಲ್ಲ.ನನ್ನನ್ನು ಈ ಪ್ರಕರಣದಲ್ಲಿ ಸಿಲುಕಿಸಿದ ಜನರಿಗೆ ಒಂದು ಮಾತನ್ನು ಹೇಳಲು ಬಯಸುತ್ತೇನೆ. ನಮ್ಮ ಅಫಜಲಪುರ ಕ್ಷೇತ್ರದ ಜನರು ಮನಸ್ಸು ಮಾಡಿದರೆ, 2023ರ ವಿಧಾನ ಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತೇನೆ ಎಂದರು.
ಸಿಐಡಿ ಅಧಿಕಾರಿಗಳು ನನ್ನನ್ನು ಸುಧೀರ್ಘ ವಿಚಾರಣೆ ನಡೆಸಿದ ಸಂದರ್ಭದಲ್ಲಿ ಅವರಿಗೆ ನಾನು ಸಂಪೂರ್ಣ ಸಹಕಾರ ನೀಡಿದ್ದೇನೆ.ಸಿಐಡಿ ಅಧಿಕಾರಿಗಳು ಮನೆಗೆ ಬಂದಾಗ,ನಾನು ಹೊರಗಡೆ ಹೋಗಿದ್ದೆ.ಹೀಗಾಗಿ ನಾನು ಯಾವುದೇ ಅಧಿಕಾರಿಯನ್ನು ತಳ್ಳಿ ಓಡಿ ಹೋಗಿದ್ದೇನೆ ಎಂಬುದು ಶುದ್ಧ ಸುಳ್ಳು ಎಂದರು.
ಮಾಧ್ಯಮಗಳಲ್ಲಿ ಓಡಿ ಹೋಗಿದ್ದೇನೆ ಎಂಬ ವರದಿಗಳು ಪ್ರಸಾರವಾಗಿದ್ದು,ಸುಳ್ಳು ವರದಿ ಬಿಂಬಿಸಲಾಗಿದೆ. ನಾನು ಕಾನೂನಿನ ವಿರುದ್ಧ ನಡೆಯುವ ವ್ಯಕ್ತಿ ಅಲ್ಲ. ಈ ನೆಲದ ಕಾನೂನಿಗೆ ಗೌರವ ಕೊಡುವ ಮನುಷ್ಯ ಇದ್ದೇನೆ ಎಂದು ಜಾಲತಾಣಗಳಲ್ಲಿ ಹೇಳಿಕೊಂಡಿದ್ದಾರೆ.