ಸಚಿವ ಅಶ್ವತ್ಥ ನಾರಾಯಣ ಹಾಗೂ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಪತ್ರ ಬರೆದು ಆಗ್ರಹಿಸಿದ ಶಾಸಕ ಪ್ರಿಯಾಂಕ್ ಖರ್ಗೆ

ಕಲ್ಯಾಣ ಕರ್ನಾಟಕ ಭಾಗಕ್ಕೆ ಮಂಜೂರಾಗಿದ್ದ ಯೋಜನೆಗಳನ್ನು ಕಿತ್ತುಕೊಂಡು, ಇಲ್ಲಿನ ಕಚೇರಿಗಳನ್ನೂ ಎತ್ತಂಗಡಿ ಮಾಡಿರುವ ಬಿಜೆಪಿ ಸರ್ಕಾರ,ಈಗ ನಮ್ಮ ಭಾಗದ ಜನರಿಗೆ ಸಂವಿಧಾನದ ಮೂಲಕ ದೊರಕಿರುವ ವಿಶೇಷ ಮೀಸಲಾತಿಯನ್ನೂ ಕಿತ್ತುಕೊಳ್ಳುತ್ತಿದೆ ಎಂದು ಶಾಸಕ ಪ್ರಿಯಾಂಕ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಚಿವ ಅಶೋಕ ನಾರಾಯಣ , ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಪತ್ರ ಬರೆದು ಆಕ್ರೋಶ ವ್ಯಪಡಿಸಿರೋ ಅವರು,ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಖಾಲಿ ಇರುವ 1,242 ಸಹಾಯಕ ಪ್ರಾಧ್ಯಾಪಕ ಹುದ್ದೆಗಳಿಗೆ ನಿಯಮಗಳನ್ನು ಗಾಳಿಗೆ ತೂರಿ ಅರ್ಜಿ ಕರೆದಿರುವುದನ್ನು ಖಂಡಿಸಿದ್ದಾರೆ. ಸರ್ಕಾರವು, ಕಲ್ಯಾಣ ಕರ್ನಾಟಕದ ಅಭ್ಯರ್ಥಿಗಳನ್ನು ಕಲ್ಯಾಣಕ್ಕೆ ಮಾತ್ರವೇ ಸೀಮಿತಗೊಳಿಸುವ ಕುತಂತ್ರ ನಡೆಸಿದೆ ಆರೋಪಿಸಿದ್ದಾರೆ.ಕಲ್ಯಾಣ ಕರ್ನಾಟಕ ಪ್ರದೇಶದ ಅಭ್ಯರ್ಥಿಗಳು 371(J) ವಿಶೇಷ ಮೀಸಲಾತಿಯಡಿ ಸ್ಥಳೀಯ ವೃಂದ, ಮಿಕ್ಕುಳಿದ ವೃಂದ ಹಾಗೂ ಸ್ಥಳೀಯ & ಮಿಕ್ಕುಳಿದ ವೃಂದ ಎರಡೂ ಕಡೆಯೂ ಅರ್ಜಿ ಸಲ್ಲಿಸಬಹುದು. ಆದರೆ, ಈಗ ಕೆಇಎ ಸಹಾಯಕ ಪ್ರಾಧ್ಯಾಪಕ ಹುದ್ದೆಗಳಿಗೆ ಕರೆದಿರುವ ಅರ್ಜಿಯಲ್ಲಿ ಮೂರು ಆಯ್ಕೆಗಳನ್ನು ನೀಡದೇ, ಕೇವಲ ಎರಡೇ ಆಯ್ಕೆಗಳನ್ನು ನೀಡಿ, ರಾಜ್ಯಮಟ್ಟದ ಹುದ್ದೆಗಳಿಗೆ ಇಲ್ಲಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸದಂತೆ ವ್ಯವಸ್ಥಿತವಾಗಿ ಪಿತೂರಿ ನಡೆಸಿದೆ. ಈ ಮೂಲಕ ಬಿಜೆಪಿ ಸರ್ಕಾರವು ಮತ್ತೊಮ್ಮೆ ಕಲ್ಯಾಣ ಕರ್ನಾಟಕ ವಿರೋಧಿಯೆಂದು ಸಾಬೀತುಪಡಿಸಿದೆ. ಈ ಭಾಗದ ಅಭಿವೃದ್ಧಿ ಕಾರ್ಯಗಳು, ಯೋಜನೆಗಳಿಗೆ ಅಡ್ಡಗಾಲು ಹಾಕಿದ್ದು ಸಾಲದೇ, ಈಗ ನಮ್ಮ ಮೀಸಲಾತಿ ಹಕ್ಕನ್ನು ಕಿತ್ತುಕೊಳ್ಳಲು ಮುಂದಾಗಿರುವ ಬಿಜೆಪಿ ಸರ್ಕಾರ, ಈ ಕೂಡಲೇ ತನ್ನ ಕಲ್ಯಾಣ ಕರ್ನಾಟಕ ವಿರೋಧಿ ನಿಲುವನ್ನು ಕೈ ಬಿಡದಿದ್ದಲ್ಲಿ ಹಾಗೂ ನಮ್ಮ ಭಾಗದ ಅಭ್ಯರ್ಥಿಗಳಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸದಿದ್ದಲ್ಲಿ, ಉಗ್ರ ಪ್ರತಿಭಟನೆಯನ್ನು ಎದುರಿಸಬೇಕಾಗುತ್ತದೆ ಎಂದು ಈ ಮೂಲಕ ಎಚ್ಚರಿಸುತ್ತೇನೆ ಎಂದು ಗುಡುಗಿದ್ದಾರೆ. ಈ ಕುರಿತು ಸಚಿವರಾದ ಅಶ್ವತ್ಥ ನಾರಾಯಣ ಹಾಗೂ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಪತ್ರ ಬರೆದು ಆಗ್ರಹಿಸಿದ್ದೇನೆ ಎಂದು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.