ಜೆಡಿಎಸ್ ನಿಂದ ಸ್ಪರ್ಧಿಸಿದರೇ ಗೆಲ್ಲುವ ಭರವಸೆಯಿಲ್ಲ, ಕುಮಾರಸ್ವಾಮಿ ಮೇಲೆ ವಿಶ್ವಾಸವಿಲ್ಲ: 'ತೆನೆ' ಹೊತ್ತ ಮಹಿಳೆ ಬಿಟ್ಟು 'ಕೈ' ಹಿಡಿದ ಕೋನರೆಡ್ಡಿ
ಹುಬ್ಬಳ್ಳಿ: ನವಲಗುಂದ ಮಾಜಿ ಶಾಸಕ ಎನ್ ಎಚ್ ಕೋನರೆಡ್ಡಿ ಜೆಡಿಎಸ್ ತೊರೆಯುತ್ತಿರುವುದರಿಂದ ಉತ್ತರ ಕರ್ನಾಟಕ ಭಾಗದಲ್ಲಿ ಪ್ರಾದೇಶಿಕ ಪಕ್ಷ ಜೆಡಿಎಸ್ ಗೆ ಹೊಡೆತ ಬೀಳಲಿದೆ, ಮುಂಬರುವ ಚುನಾವಣೆಯಲ್ಲಿ ಜೆಡಿಎಸ್ ಗೆ ಹಿನ್ನಡೆಯಾಗುವ ಸಾಧ್ಯತೆಯಿದೆ.
ಜೆಡಿಎಸ್ ತೊರೆದಿರುವ ಕೋನರೆಡ್ಡಿ ಕಾಂಗ್ರೆಸ್ ಸೇರುವ ಸುಳಿವು ನೀಡಿದ್ದು 2023 ರ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ತಿಳಿಸಿದ್ದಾರೆ.
ಜೆಡಿಎಸ್ ಮುಖಂಡರ ನಿರ್ಲಕ್ಷ್ಯ ಮತ್ತು ಹಾಗೂ ಸರಿಯಾದ ಬೆಂಬಲವಿಲ್ಲದಿರುವುದು ಧಾರವಾಡ ಜಿಲ್ಲೆಯ ಪ್ರಮುಖ ನಾಯಕರಾಗಿದ್ದ ಕೋನರೆಡ್ಡಿ ಪಕ್ಷ ತೊರೆಯಲು ಮುಖ್ಯ ಕಾರಣ ಎಂದು ಮೂಲಗಳು ತಿಳಿಸಿವೆ. ತಮ್ಮ ಬೆಂಬಲಿಗರ ಸಲಹೆ ಮೇರೆಗೆ ತಾವು ಕಾಂಗ್ರೆಸ್ ಸೇರುತ್ತಿರುವುದಾಗಿ ಕೋನರೆಡ್ಡಿ ತಿಳಿಸಿದ್ದಾರೆ.
ಜೆಡಿಎಸ್ ಹಿರಿಯ ನಾಯಕರ ವಿರುದ್ಧ ಕೋನರೆಡ್ಡಿ ತೀವ್ರ ಅಸಮಾಧಾನಗೊಂಡಿದ್ದರು ಎಂದು ಅವರ ಆಪ್ತರೊಬ್ಬರು ಹೇಳಿದ್ದಾರೆ. 'ಉತ್ತರ ಕರ್ನಾಟಕ ಭಾಗದಲ್ಲಿ ಚುನಾವಣೆಯಲ್ಲಿ ಜೆಡಿಎಸ್ ಉತ್ತಮ ಸಾಧನೆ ಮಾಡದಿದ್ದಾಗ, ಅದರಲ್ಲೂ ಇತ್ತೀಚೆಗೆ ನಡೆದ ಸಿಂದಗಿ ಮತ್ತು ಹಾನಗಲ್ ಉಪಚುನಾವಣೆಯಲ್ಲಿ ಸೋಲಿನ ನಂತರ, ಕೋನರಡ್ಡಿ ಸೇರಿದಂತೆ ಹಲವಾರು ನಾಯಕರು ಜೆಡಿಎಸ್ ನಿಂದ ಹೊರಹೋಗಲು ಯೋಜಿಸಿದ್ದರು.
ಕೋನರೆಡ್ಡಿ ಜೆಡಿಎಸ್ ತೊರೆದಿರುವ ಹಿನ್ನೆಲೆಯಲ್ಲಿ ಧಾರವಾಡದಲ್ಲಿ ಬಸವರಾಜ ಹೊರಟ್ಟಿ ಮಾತ್ರ ಸದ್ಯ ಪ್ರಮುಖ ನಾಯಕರಾಗಿದ್ದಾರೆ, ವಿಧಾನ ಪರಿಷತ್ ನ ಹಾಲಿ ಸಭಾಪತಿಯಾಗಿರುವ ಹೊರಟ್ಟಿ ಸಕ್ರಿಯ ರಾಜಕಾರಣದಿಂದ ದೂರ ಉಳಿದಿದ್ದಾರೆ.
ರಾಮಕೃಷ್ಣ ಹೆಗಡೆ ನೇತೃತ್ವದಲ್ಲಿ ಕೋನರಡ್ಡಿಗೆ ಬ್ರೇಕ್ ಕೊಟ್ಟವರು ಬಸವರಾಜ ಹೊರಟ್ಟಿ. ನಂತರದ ದಿನಗಳಲ್ಲಿ, ಕೋನರಡ್ಡಿ ಅವರು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಮತ್ತು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರ ಆಪ್ತರಾಗಿ ಗುರುತಿಸಿಕೊಂಡಿದ್ದರು. ಕಳೆದ ವರ್ಷದವರೆಗೂ ಕುಮಾರಸ್ವಾಮಿಯವರ ರಾಜಕೀಯ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದರು.
ಹುಬ್ಬಳ್ಳಿ-ಧಾರವಾಡ ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಪಕ್ಷದ ಕಳಪೆ ಪ್ರದರ್ಶನದ ಹಿನ್ನೆಲೆಯಲ್ಲಿ ಅವರು ರಾಜೀನಾಮೆ ನೀಡಿದ್ದಾರೆ. ಹೊರಟ್ಟಿ ಸೇರಿದಂತೆ ಹಲವು ಜೆಡಿಎಸ್ ಮುಖಂಡರು ಪಕ್ಷ ಬಿಡದಂತೆ ಕೋನರಡ್ಡಿ ಅವರ ಮನವೊಲಿಸಲು ಯತ್ನಿಸಿದ್ದಾರೆ. ಆದರೆ 2023ರ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿದರೆ ಸೋಲುವ ಭೀತಿ ಕೋನರಡ್ಡಿ ಅವರಲ್ಲಿದೆ. ಇದರೊಂದಿಗೆ ಮಾಜಿ ಸಿಎಂ ಕುಮಾರಸ್ವಾಮಿ ಜತೆ ವಿಶ್ವಾಸದ ಸಮಸ್ಯೆ ಇದೆ' ಎಂದು ಧಾರವಾಡದ ಜೆಡಿಎಸ್ ಮುಖಂಡರೊಬ್ಬರು ತಿಳಿಸಿದ್ದಾರೆ.
2019ರಲ್ಲಿ ಧಾರವಾಡದ ಮತ್ತೊಬ್ಬ ಜೆಡಿಎಸ್ ಮುಖಂಡ ರಾಜಣ್ಣ ಕೊರವಿ ಬಿಜೆಪಿ ಸೇರಿದ್ದರು. ಕಳೆದ ವಿಧಾನಸಭೆ ಚುನಾವಣೆ ವೇಳೆ ಪಕ್ಷವನ್ನು ಮತ್ತೆ ಕಟ್ಟುವ ನಿರೀಕ್ಷೆಯಲ್ಲಿ ಕುಮಾರಸ್ವಾಮಿ ಹುಬ್ಬಳ್ಳಿಯಲ್ಲಿ ಬಾಡಿಗೆ ಮನೆ ಮಾಡಿದ್ದರು. ಆದರೆ ಚುನಾವಣೆ ಮುಗಿದ ಕೂಡಲೇ ಮನೆ ಖಾಲಿ ಮಾಡಿದ್ದರು.