ತುಟ್ಟಿಯಾದ ತರಕಾರಿ: ಕಾರ್ತಿಕ ಮಾಸ ಬಂತು, ಬೇಡಿಕೆ ಹೆಚ್ಚಿತು

ತುಟ್ಟಿಯಾದ ತರಕಾರಿ: ಕಾರ್ತಿಕ ಮಾಸ ಬಂತು, ಬೇಡಿಕೆ ಹೆಚ್ಚಿತು

ತರಕಾರಿಗಳು; ನ.1; ನ.8 (₹ ಗಳಲ್ಲಿ)

ಟೊಮೆಟೊ; 26; 34

ಕ್ಯಾರೆಟ್; 35; 50

ನುಗ್ಗೆಕಾಯಿ; 60; 100

ಹಸಿಮೆಣಸಿನಕಾಯಿ; 15; 23

ಹಸಿಶುಂಠಿ; 40; 50

ಈರುಳ್ಳಿ; 31; 35

ಬದನೆ; 22; 30

ಸಿಹಿಗುಂಬಳ; 05; 06

ಆಲುಗೆಡ್ಡೆ; 22; 25

ಬೀನ್ಸ್; 25; 23

ಹೂಕೋಸು; 30; 24

ದಪ್ಪಮೆಣಸಿನಕಾಯಿ; 85; 85

ಎಲೆಕೋಸು; 08; 08

ಬೆಂಡೆಕಾಯಿ; 20; 20

***

ಮೈಸೂರು: ಕಾರ್ತಿಕ ಮಾಸದ ಬರುವಿಕೆಯೊಂದಿಗೆ ತರಕಾರಿಗಳಿಗೂ ಬೇಡಿಕ ಹೆಚ್ಚಿದ ಪರಿಣಾಮ ದರವೂ ದುಬಾರಿಯಾಗಿದೆ.

ಟೊಮೆಟೊ, ಕ್ಯಾರೆಟ್, ನುಗ್ಗೆಕಾಯಿ, ಹಸಿಮೆಣಸಿನಕಾಯಿ, ಹಸಿಶುಂಠಿ, ಈರುಳ್ಳಿ, ಬದನೆ, ಸಿಹಿಗುಂಬಳ, ಆಲುಗೆಡ್ಡೆಯ ಬೆಲೆಗಳು ಏರಿಕೆಯಾಗಿ, ಗ್ರಾಹಕರು ಹೈರಣಾಗಿದ್ದಾರೆ. ಉಳಿದ ತರಕಾರಿಗಳ ಧಾರಣೆಗಳೂ ಏರಿಕೆ ಸ್ಥಿತಿಯಲ್ಲೇ ಇವೆ.

ಕಾರ್ತಿಕ ಮಾಸದಲ್ಲಿ ಮದುವೆ, ಗೃಹಪ್ರವೇಶ, ನಾಮಕರಣದಂಥ ಶುಭಕಾರ್ಯಗಳು ಹೆಚ್ಚಾಗಿವೆ. ನಿತ್ಯವೂ ಕಾರ್ಯಕ್ರಮಗಳು ಆಯೋಜನೆಗೊಳ್ಳುತ್ತಿರುವುದರಿಂದ ಸ್ಥಳೀಯ ಮಾರುಕಟ್ಟೆಗಳಲ್ಲಿ ಬೇಡಿಕೆ ಹೆಚ್ಚಿದೆ.

'ಕೋವಿಡ್‌ ನಿಯಂತ್ರಣಕ್ಕೆ ಬಂದಿರುವುದರಿಂದ ಕೇರಳದಲ್ಲಿ ಹೋಟೆಲ್ ಉದ್ಯಮ ಚೇತರಿಸಿಕೊಂಡಿದೆ. ಇಲ್ಲಿನ ಎಪಿಎಂಸಿಯಿಂದ ಬಹುತೇಕ ತರಕಾರಿಗಳನ್ನು ಕೇರಳದಿಂದ ಬಂದ ವ್ಯಾಪಾರಿಗಳೇ ಖರೀದಿಸುತ್ತಿದ್ದಾರೆ. ಆ ಕಾರಣದಿಂದಲೂ ಬೆಲೆಗಳು ದುಬಾರಿಯಾಗುತ್ತಿವೆ' ಎಂದು ಎಪಿಎಂಸಿಯ ವರ್ತಕ ಕೃಷ್ಣರಾಜು ತಿಳಿಸಿದರು.

ಇತ್ತೀಚೆಗೆ ಸುರಿಯುತ್ತಿರುವ ಧಾರಾಕಾರ ಮಳೆಯಿಂದಲೂ ತರಕಾರಿಗಳ ಇಳುವರಿ ಕಡಿಮೆಯಾಗಿದೆ. ಬೇಡಿಕೆಗೆ ತಕ್ಕಷ್ಟು ಪೂರೈಕೆಯಾಗದೇ ಇರುವುದು ಬೆಲೆ ಹೆಚ್ಚಳಕ್ಕೆ ಕಾರಣ.

ಶುಭ ಸಮಾರಂಭಗಳನ್ನು ಆಯೋಜಿಸುವವರ ಪರಿಸ್ಥಿತಿ ಶೋಚನೀಯವಾಗಿದೆ. ತರಕಾರಿ ಬೆಲೆಗಳ ಏರುಗತಿ ಕಂಡು ಮಾರುಕಟ್ಟೆಗಳನ್ನು ಬಿಟ್ಟು ಸಂತೆಯಲ್ಲಿ ಖರೀದಿಸುವತ್ತ ಬಹಳಷ್ಟು ಮಂದಿ ಯೋಚಿಸುವಂತಾಗಿದೆ. ಎಲ್ಲೇ ಹೋದರೂ ಅಗ್ಗದ ಧಾರಣೆ ಮರೀಚಿಕೆ ಎನಿಸಿದೆ.

ನುಗ್ಗೆಕಾಯಿಯ ಸಗಟು ಧಾರಣೆ ಎಪಿಎಂಸಿ ಮಾರುಕಟ್ಟೆಯಲ್ಲಿ ಒಂದೇ ವಾರದಲ್ಲಿ ಕೆ.ಜಿಗೆ ₹ 60ರಿಂದ ₹ 100ಕ್ಕೆ ಹೆಚ್ಚಿದ್ದರೆ, ಕ್ಯಾರೆಟ್ ₹ 35ರಿಂದ ₹ 50ಕ್ಕೆ ದುಬಾರಿಯಾಗಿದೆ. ಟೊಮೆಟೊ ₹ 26ರಿಂದ ₹ 34ಕ್ಕೆ ಏರಿಕೆ ಕಂಡಿದೆ. ಹಾಪ್‌ಕಾಮ್ಸ್‌ನಲ್ಲಿ ನುಗ್ಗೆ ₹ 130, ಕ್ಯಾರೆಟ್ ₹ 80, ಟೊಮೆಟೊ ₹ 65ಕ್ಕೆ ಮಾರಾಟವಾಗಿದೆ.

ಒಂದು ವಾರದಿಂದಲೂ ಮಳೆ ಬಿಡುವು ನೀಡದೇ ಇರುವುದರಿಂದ ಸೊಪ್ಪಿನ ಧಾರಣೆಯಲ್ಲೂ ಇಳಿಕೆಯಾಗಿಲ್ಲ. ಒಂದು ಕಟ್ಟಿಗೆ ₹ 5ರಿಂದ ₹ 10ರವರೆಗೂ ಬೆಲೆ ಇದೆ.