ನಟ ರಾಜ್​​ಕುಮಾರ್​ ಸಿನಿಮಾಗಳನ್ನು ನೋಡಿ ಕನ್ನಡ ಕಲಿತ ಐಪಿಎಸ್​ ಅಧಿಕಾರಿ

ನಟ ರಾಜ್​​ಕುಮಾರ್​ ಸಿನಿಮಾಗಳನ್ನು ನೋಡಿ ಕನ್ನಡ ಕಲಿತ ಐಪಿಎಸ್​ ಅಧಿಕಾರಿ
ಕೋಲಾರ ಜಿಲ್ಲೆಯ ಜಿಲ್ಲಾ ರಕ್ಷಣಾಧಿಕಾರಿ ಡಿ.ಕಿಶೋರ್ ಬಾಬು ಮೂಲತ: ಆಂಧ್ರ ಪ್ರದೇಶದವರು. ಅವರು 2013ರಲ್ಲಿ ಐಪಿಎಸ್ ಪರೀಕ್ಷೆ ಪಾಸ್​ ಮಾಡಿದ ನಂತರ ಅವರಿಗೆ ಕರ್ನಾಟಕ ರಾಜ್ಯದಲ್ಲಿ ಕೆಲಸ ಮಾಡುವ ಅವಕಾಶ ಒದಗಿ ಬಂತು.

ಕನ್ನಡ ನಾಡಿನಲ್ಲಿ ಕೆಲಸ ಮಾಡಲು ಬೇರೆ ರಾಜ್ಯದಿಂದ ಬರುವ ಅದೆಷ್ಟೋ ಜನರು ಕನ್ನಡ ಗೊತ್ತಿಲ್ಲದೆ ಕೆಲಸ ಮಾಡಿಕೊಂಡು ಹೋಗುತ್ತಾರೆ.

ಇನ್ನೂ ಕೆಲವರು ಇಲ್ಲಿಗೆ ಬಂದು ಕನ್ನಡ ಕಲಿತು, ಕನ್ನಡ ಭಾಷೆಯಲ್ಲೇ ಮಾತನಾಡುತ್ತಾರೆ. ಹೀಗೆ ಹೊರ ರಾಜ್ಯದ ಐಪಿಎಸ್ ಅಧಿಕಾರಿಯೊಬ್ಬರು ಕನ್ನಡವನ್ನು ಪ್ರೀತಿಯಿಂದ ಕಲಿತು ಸ್ವಚ್ಛವಾಗಿ ಮಾತನಾಡುತ್ತಿದ್ದಾರೆ. ರಾಜ್​ಕುಮಾರ್​ ಸಿನಿಮಾಗಳನ್ನು ನೋಡಿ ಅವರು ಕನ್ನಡ ಕಲಿತಿದ್ದರು ವಿಶೇಷ.

ಕೋಲಾರ ಜಿಲ್ಲೆಯ ಜಿಲ್ಲಾ ರಕ್ಷಣಾಧಿಕಾರಿ ಡಿ.ಕಿಶೋರ್ ಬಾಬು ಮೂಲತ: ಆಂಧ್ರ ಪ್ರದೇಶದವರು. ಅವರು 2013ರಲ್ಲಿ ಐಪಿಎಸ್ ಪರೀಕ್ಷೆ ಪಾಸ್​ ಮಾಡಿದ ನಂತರ ಅವರಿಗೆ ಕರ್ನಾಟಕ ರಾಜ್ಯದಲ್ಲಿ ಕೆಲಸ ಮಾಡುವ ಅವಕಾಶ ಒದಗಿ ಬಂತು. ಕರ್ನಾಟಕಕ್ಕೆ ಬಂದು ತನ್ನ ಕೆಲಸ ಆರಂಭಿಸಿದ ಕಿಶೋರ್​ ಬಾಬು ಅವರಿಗೆ ಭಾಷೆ ಅನ್ನೋದು ಎಂದಿಗೂ ಸಮಸ್ಯೆಯಾಗಿ ಕಂಡು ಬಂದಿಲ್ಲ. 2013 ರಲ್ಲಿ ಐಪಿಎಸ್​ ಪರೀಕ್ಷೆ ಪಾಸ್​ ಆದ ನಂತರ 2014ರಲ್ಲಿ ಅವರು ಕರ್ನಾಟಕದ ಬಿಜಾಪುರಕ್ಕೆ ಬಂದರು. ಅಲ್ಲಿ ಕೆಲ ತಿಂಗಳುಗಳ ಕಾಲ ಇದ್ದ ಅವರು ನಂತರ ಬಂದಿದ್ದು ಮೈಸೂರು ಭಾಗಕ್ಕೆ. ಮಂಡ್ಯ, ಹಾಸನ ಜಿಲ್ಲೆಯ ಹೊಳೆನರಸಿಪುರ, ನಂತರ ರಾಯಚೂರು, ಗುಲ್ಬರ್ಗದಲ್ಲಿ ಸೇವೆ ಸಲ್ಲಿಸಿ ಈಗ ಕೋಲಾರದಲ್ಲಿ ಜಿಲ್ಲಾವರಿಷ್ಠಾಧಿಕಾರಿಯಾಗಿ ಕೆಲಸ ನಿರ್ವಹಣೆ ಮಾಡುತ್ತಿದ್ದಾರೆ.

ಪುನೀತ್​ ಸಾವಿಗೆ ಕಂಬನಿ ಮಿಡಿದಿದ್ದ ಐಪಿಎಸ್​ ಅಧಿಕಾರಿ

ಪುನೀತ್​ ರಾಜ್​ ಕುಮಾರ್ ನಿಧನರಾಗಿದ್ದ ಸುದ್ದಿ ಸಾಕಷ್ಟು ನೋವು ತಂದಿತ್ತು. ಪುನೀತ್​ ಸಾವಿಗೆ ಬೇಸರ ವ್ಯಕ್ತಪಡಿಸಿದ ಕಿಶೋರ್​ ಬಾಬು ಅವರು ಪುನೀತ್​​ ಸೇವಾ ಮನೋಭಾವದ ಕುರಿತು ತುಂಬು ಹೃದಯದಿಂದ ಹೊಗಳಿದರು. ಅವರ ಅಕಾಲಿಕ ನಿಧನಕ್ಕೆ ಬೇಸರ ವ್ಯಕ್ತಪಡಿಸಿ ಕಂಬನಿ ಮಿಡಿದರು. 'ಪುನೀತ್​ ಅವರ ಹಲವು ಸಿನಿಮಾಗಳನ್ನು ನೋಡಿದ್ದೇನೆ. ಅಷ್ಟೇ ಅಲ್ಲ ಅವರ ತಂದೆ ರಾಜ್​ಕುಮಾರ್​ ಸಿನಿಮಾಗಳನ್ನು ಹೆಚ್ಚಾಗಿ ನೋಡಿ ಮನಸೋತಿದ್ದೇನೆ' ಎನ್ನುತ್ತಾರೆ ಅವರು.

ಅಣ್ಣಾವ್ರ ಸಿನಿಮಾ ನೋಡಿ ಕನ್ನಡ ಕಲಿತೆ

'ನಾನು ಕೇವಲ ಪುನೀತ್​ ರಾಜ್​ಕುಮಾರ್​ ಅವರ ಸಿನಿಮಾಗಳನ್ನಷ್ಟೇ ಅಲ್ಲಾ ಅಣ್ಣಾವ್ರ ಸಿನಿಮಾಗಳನ್ನು ನೋಡಿದ್ದೇನೆ. ನಾನು ಕನ್ನಡ ಕಲಿತಿದ್ದೇ ರಾಜ್​ ಅವರ ಸಿನಿಮಾಗಳನ್ನು ನೋಡಿ. ಅವರು ನಟಿಸಿರುವ ಮಯೂರ, ಶ್ರೀಕೃಷ್ಣದೇವರಾಯ, ಬಬ್ರುವಾಹನ, ಎರಡು ಕನಸು, ಭಕ್ತಪ್ರಹಲ್ಲಾದ, ಜೀವನ ಚೈತ್ರ ಸೇರಿದಂತೆ ಹತ್ತಾರು ರಾಜ್​​ಕುಮಾರ್ ಅವರ ಸಿನಿಮಾಗಳನ್ನು ನೋಡಿದ್ದೇನೆ. ನಾನು ಸುಲಲಿತವಾಗಿ ಕನ್ನಡ ಮಾತನಾಡೋದನ್ನ ಕಲಿತೆ ಅವರ ಸಿನಿಮಾಗಳಿಂದ ಕಲಿತೆ ಎಂದರು. ಅವರ ಬಾಯಿಂದ ಬರುವ ಕನ್ನಡವನ್ನು ಕೇಳೋದೆ ಒಂದು ರೀತಿಯ ಸೊಗಸು. ಅವರ ಬಾಯಿಂದ ಬರುವ ಕನ್ನಡ ಕೇಳಲು ಇಂಪಾಗಿರುತ್ತದೆ' ಎಂದರು.

ತೆಲುಗು ಮಾತನಾಡುವವರ ಜೊತೆಗೂ ಕನ್ನಡದಲ್ಲೇ ವ್ಯವಹಾರ

ಗಡಿ ಜಿಲ್ಲೆ ಕೋಲಾರದಲ್ಲಿ ತೆಲುಗು ಬಾಷೆ ಪ್ರಭಾವ ಹೆಚ್ಚಾಗಿದೆ. ಕೋಲಾರದಲ್ಲಿನ ಕೆಲವರು ತೆಲುಗು ಬಾಷೆಯನ್ನು ಮಾತನಾಡುತ್ತಾರೆ. ಕಿಶೋರ್​ ಬಾಬು ಅವರು ಮಾತೃ ಬಾಷೆ ತೆಲುಗು. ಆದಾಗ್ಯೂ ಕೋಲಾರದಲ್ಲಿನ ಜನರನ್ನು ಅವರು ತೆಲುಗುವಿನಲ್ಲಿ ಮಾತನಾಡಿಸುವುದಿಲ್ಲ. ಬದಲಾಗಿ ತೆಲುಗು ಬರುವವರ ಜೊತೆಗೂ ಕನ್ನಡದಲ್ಲೇ ಮಾತನಾಡಿಸುವ ಮೂಲಕ ತಮ್ಮ ಕನ್ನಡದ ಮೇಲಿನ ಕಾಳಜಿ, ಪ್ರೀತಿಯನ್ನು ತೋರಿಸುವ ಮೂಲಕ ತಾನೊಬ್ಬ ಕನ್ನಡಾಭಿಮಾನಿ ಅನ್ನೋದನ್ನು ತೋರಿಸಿಕೊಟ್ಟಿದ್ದಾರೆ