ʻಪ್ರಜಾಪ್ರಭುತ್ವ ಸಂಪ್ರದಾಯಗಳನ್ನು ಎಲ್ಲರೂ ಗೌರವಿಸಿʼ: ಬ್ರೆಜಿಲ್ ಗಲಭೆ ಬಗ್ಗೆ ಪ್ರಧಾನಿ ಮೋದಿ ಬೇಸರ ವ್ಯಕ್ತ

ನವದೆಹಲಿ: ಬ್ರೆಜಿಲ್‌ನಲ್ಲಿ ನಡೆಯುತ್ತಿರುವ ಗಲಭೆಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಕಳವಳ ವ್ಯಕ್ತಪಡಿಸಿದ್ದಾರೆ. 'ಪ್ರಜಾಪ್ರಭುತ್ವ ಸಂಪ್ರದಾಯಗಳನ್ನು ಎಲ್ಲರೂ ಗೌರವಿಸಬೇಕು' ಎಂದು ಒತ್ತಿ ಹೇಳಿದ್ದಾರೆ. ಅಷ್ಟೇ ಅಲ್ಲದೇ, ಸರ್ಕಾರಿ ಅಧಿಕಾರಿಗಳಿಗೆ ಬೆಂಬಲವನ್ನೂ ನೀಡಿದ್ದಾರೆ.
'ಬ್ರೆಸಿಲಿಯಾದಲ್ಲಿ ರಾಜ್ಯ ಸಂಸ್ಥೆಗಳ ವಿರುದ್ಧ ಗಲಭೆ ಮತ್ತು ವಿಧ್ವಂಸಕ ಸುದ್ದಿಗಳ ಬಗ್ಗೆ ತೀವ್ರ ಕಳವಳವಿದೆ. ಪ್ರಜಾಪ್ರಭುತ್ವ ಸಂಪ್ರದಾಯಗಳನ್ನು ಎಲ್ಲರೂ ಗೌರವಿಸಬೇಕು. ಬ್ರೆಜಿಲ್ ಅಧಿಕಾರಿಗಳಿಗೆ ನಾವು ನಮ್ಮ ಸಂಪೂರ್ಣ ಬೆಂಬಲವನ್ನು ನೀಡುತ್ತೇವೆ' ಎಂದು ಬ್ರೆಜಿಲ್ ಅಧ್ಯಕ್ಷ ಲೂಯಿಜ್ ಇನಾಸಿಯೊ ಲುಲಾ ಡ ಸಿಲ್ವಾ ಅವರನ್ನು ಪ್ರಧಾನಿ ಮೋದಿ ಟ್ಯಾಗ್ ಮಾಡಿ ತಮ್ಮ ಬೆಂಬಲವನ್ನು ಸೂಚಿಸಿದ್ದಾರೆ.
ಬ್ರೆಜಿಲ್‌ನ ಬಲಪಂಥೀಯ ಮಾಜಿ ಅಧ್ಯಕ್ಷ ಜೈರ್ ಬೋಲ್ಸನಾರೊ ಅವರ ನೂರಾರು ಬೆಂಬಲಿಗರು ರಾಷ್ಟ್ರೀಯ ಕಾಂಗ್ರೆಸ್, ಅಧ್ಯಕ್ಷೀಯ ಅರಮನೆ ಮತ್ತು ಸುಪ್ರೀಂ ಕೋರ್ಟ್‌ನ ಮೇಲೆ ದಾಳಿ ಮಾಡಿದ ಗಂಟೆಗಳ ನಂತರ ಪ್ರಧಾನಿಯವರ ಪ್ರತಿಕ್ರಿಯೆ ಬಂದಿದೆ. ಅಧ್ಯಕ್ಷ ಲೂಲಾ ಗಲಭೆಗಳನ್ನು 'ಫ್ಯಾಸಿಸ್ಟ್' ದಾಳಿ ಎಂದು ಖಂಡಿಸಿದ್ದಾರೆ. ಬೋಲ್ಸನಾರೊ ಹಿಂಸಾಚಾರದಲ್ಲಿ ಯಾವುದೇ ಪಾತ್ರವನ್ನು ನಿರಾಕರಿಸಿದ್ದಾರೆ ಮತ್ತು ದರೋಡೆ ಮತ್ತು ಆಕ್ರಮಣಗಳನ್ನು ಖಂಡಿಸಿದ್ದಾರೆ.
ಏನಿದು ಗಲಭೆ?
ಬ್ರೆಜಿಲ್‌ನಲ್ಲಿ ಅಕ್ಟೋಬರ್ ತಿಂಗಳಿನಲ್ಲಿ ಚುನಾವಣೆ ನಡೆದಿತ್ತು. ಈ ಚುನಾವಣೆಯಲ್ಲಿ ಬೋಲ್ಸನಾರೊ ಅವರನ್ನು ಸೋಲಿಸಿದ ಎಡಪಂಥೀಯ ನಾಯಕ 77 ವರ್ಷದ ಲುಲಾ ಅವರು ಒಂದು ವಾರದ ಹಿಂದಷ್ಟೇ ಅಧಿಕಾರ ವಹಿಸಿಕೊಂಡಿದ್ದರು. ಲೂಲಾ ಅವರು ಬೋಲ್ಸನಾರೊ ಅವರನ್ನು ಸೋಲಿಸಿದಾಗಿನಿಂದ ಅಧಿಕಾರ ವಹಿಸಿಕೊಳ್ಳುವುದನ್ನು ತಡೆಯಲು ಮಿಲಿಟರಿ ಮಧ್ಯಸ್ಥಿಕೆ ಜಾರಿಗೊಳಿಸುವಂತೆ ಹಾರ್ಡ್‌ಲೈನ್ ಬೋಲ್ಸನಾರೊ ಬೆಂಬಲಿಗರು ಸೇನಾ ನೆಲೆಗಳ ಹೊರಗೆ ಪ್ರತಿಭಟನೆ ನಡೆಸುತ್ತಿದ್ದಾರೆ.