ಜಿ.ಪಂ. ಸಿಇಒಗಳಿಗೆ ಸಿಎಂ ಬೊಮ್ಮಾಯಿ ಖಡಕ್ ಎಚ್ಚರಿಕೆ

ಜಿ.ಪಂ. ಸಿಇಒಗಳಿಗೆ ಸಿಎಂ ಬೊಮ್ಮಾಯಿ ಖಡಕ್ ಎಚ್ಚರಿಕೆ

ಬೆಂಗಳೂರು,ಡಿ.30- ರಾಜ್ಯ ಸರ್ಕಾರದ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಬೇಕು . ಇಲ್ಲದಿದ್ದರೆ ಸಹಿಸಲಾಗುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಿಇಒಗಳಿಗೆ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ.

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಇಂದು ನಡೆದ ಸಿಇಒಗಳ ಸಭೆಯಲ್ಲಿ ಅಧಿಕಾರಿಗಳ ಕಾರ್ಯವೈಖರಿಗೆ ಸಿಎಂ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಮರ್ಪಕವಾಗಿ ಕೆಲಸ ನಿರ್ವಹಿಸದ ಅಧಿಕಾರಿಗಳ ಮೇಲೆ ಮುಲಾಜಿಲ್ಲದೆ ನಾನು ಕ್ರಮ ಕೈಗೊಳ್ಳುತ್ತೇನೆ. ಇದಕ್ಕೆ ಯಾರೊಬ್ಬರೂ ಅವಕಾಶ ಕೊಡದಂತೆ ಕಾರ್ಯ ನಿರ್ವಹಿಸಬೇಕೆಂದು ಅವರು ಸೂಚಿಸಿದ್ದಾರೆ. ನಾವು ಜನರಿಗಾಗಿ, ಜನರ ಹಿತಕ್ಕಾಗಿ, ಜನರಿಗೋಸ್ಕರ ಕಾರ್ಯಕ್ರಮಗಳನ್ನು ಘೋಷಣೆ ಮಾಡುತ್ತೇವೆ. ಇದನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡುವುದು ಆಡಳಿತ ನಡೆಸುವ ನಿಮ್ಮ ಜವಾಬ್ದಾರಿ. ಕೆಲವು ಕಾರ್ಯಕ್ರಮಗಳು 6-7 ತಿಂಗಳು ಕಳೆದರೂ ಕೂಡ ಜನರಿಗೆ ತಲುಪುತ್ತಿಲ್ಲ ಎಂದು ತರಾಟೆಗೆ ತೆಗೆದುಕೊಂಡರು.

ಬಜೆಟ್‍ನಲ್ಲಿ ಘೋಷಣೆ ಮಾಡಿದ ಕಾರ್ಯಕ್ರಮಗಳು ಹಂತ ಹಂತವಾಗಿ ಅನುಷ್ಠಾನವಾಗಬೇಕು. ಮೊದಲ 6 ತಿಂಗಳಲ್ಲಿ ಶೇ. 50ರಷ್ಟು, ಡಿಸೆಂಬರ್ ಅಂತ್ಯಕ್ಕೆ ಶೇ.80 ಹಾಗೂ ಫೆಬ್ರವರಿ ಅಂತ್ಯಕ್ಕೆ ನೂರಕ್ಕೆ ನೂರರಷ್ಟು ಅನುಷ್ಠಾನವಾಗಲೇಬೇಕು. ವಿಳಂಬವಾದರೆ ಅಧಿಕಾರಿಗಳನ್ನೇ ಹೊಣೆ ಮಾಡುತ್ತೇನೆ ಎಂದು ಎಚ್ಚರಿಸಿದರು.

ಕಾರ್ಯಕ್ರಮಗಳ ಅನುಷ್ಠಾನಕ್ಕೆ ಹಣಕಾಸಿನ ಕೊರತೆ ಇರುವುದಿಲ್ಲ. ಇದಕ್ಕೆ ಇಚ್ಛಾಸಕ್ತಿ ಇರಬೇಕು. ಕೆಲವರು ಹವಾನಿಯಂತ್ರಿತ ಕಚೇರಿಯನ್ನು ಬಿಟ್ಟು ಹೋಗುವುದೇ ಇಲ್ಲ. ಎಲ್ಲವೂ ಕುಳಿತಲ್ಲೇ ಆಗಬೇಕೆಂದರೆ ಸರ್ಕಾರ ಕಾರ್ಯಕ್ರಮಗಳನ್ನು ಘೋಷಣೆ ಮಾಡುವ ಅಗತ್ಯವಾದರೂ ಇದೆಯೇ ಎಂದು ತರಾಟೆಗೆ ತೆಗೆದುಕೊಂಡರು.

ಜನೋಪಯೋಗಿ ಸರ್ಕಾರವಾಗಬೇಕಾದರೆ ಜಿಲ್ಲಾ ಪಂಚಾಯ್ತಿಗಳು ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುವುದು ಅತಿ ಮುಖ್ಯ. ನಿಮ್ಮ ಜಿಲ್ಲೆಯಲ್ಲಿ ಅತ್ಯುತ್ತಮವಾಗಿ ಕಾರ್ಯಶೈಲಿಯಿಂದ ನಿಮ್ಮದೇ ಚಾಪನ್ನು ಮೂಡಿಸಿ ಎಂದು ಸಲಹೆ ಮಾಡಿದರು. ತಳ ಹಂತದಲ್ಲಿ ಯೋಜನೆಗಳ ಅನುಷ್ಠಾನ ಅತಿಮುಖ್ಯವಾದದ್ದು, ಅಕಾರದ ವಿಕೇಂದ್ರೀಕರಣ ಮೂಲಕ ನಿಮಗೆ ಹೆಚ್ಚಿನ ಅಕಾರ ಕೊಡಲಾಗಿದೆ. ಜನರ ಹಿತಕ್ಕಾಗಿ ನಿಮ್ಮ ವಿವೇಚನಾಕಾರವನ್ನು ಬಳಸಿಕೊಳ್ಳಿ ಎಂದು ಸೂಚಿಸಿದರು.

ಬಡವರ ಅನುಕೂಲಕ್ಕಾಗಿ ಅಕಾರಿಗಳು ತೆಗೆದುಕೊಳ್ಳುವ ತೀರ್ಮಾನಗಳಿಗೆ ಸರ್ಕಾರ ಸಂಪೂರ್ಣ ಬೆಂಬಲ ನೀಡಲಿದೆ. ಅಕಾರಿಗಳು ಸ್ಪಷ್ಟ ನಿರ್ಣಯವನ್ನು ತೆಗೆದುಕೊಳ್ಳಬೇಕು. ವಿಳಂಬ ಧೋರಣೆ ಅತ್ಯಂತ ದುಬಾರಿ. ಅನಿಶ್ಚಿತತೆ ಒಂದು ರೀತಿ ಪ್ಲೇಗ್ ರೋಗ ಇದ್ದಂತೆ ಎಂದು ಸಿಇಒಗಳಿಗೆ ಸಿಎಂ ಚಾಟಿ ಬೀಸಿದರು.

ತಳಹಂತದ ಅಕಾರಿ ಮತ್ತು ಸಿಬ್ಬಂದಿಗಳ ಮೇಲೆ ಹತೋಟಿ ಇಟ್ಟುಕೊಳ್ಳಿ. ಕಾಲಕಾಲಕ್ಕೆ ಪ್ರಗತಿ ಪರಿಶೀಲನೆ ಮಾಡಬೇಕು. ಪ್ರತಿಯೊಬ್ಬರೂ ಕಡ್ಡಾಯವಾಗಿ ಹಳ್ಳಿಗಳಿಗೆ ಭೇಟಿ ಕೊಡಬೇಕು. ಅಲ್ಲಿ ಜನರ ಕಷ್ಟಗಳನ್ನು ಆಲಿಸಿ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ನಿರ್ದೇಶಿಸಿದರು.
ಸಭೆಯಲ್ಲಿ ಸಚಿವರಾದ ಕೆ.ಎಸ್.ಈಶ್ವರಪ್ಪ, ವಿ.ಸೋಮಣ್ಣ, ಗೋವಿಂದ ಕಾರಜೋಳ, ಸಿ.ಸಿ.ಪಾಟೀಲ್, ಸರ್ಕಾರದ ಮುಖ್ಯಕಾರ್ಯದರ್ಶಿ ಪಿ.ರವಿಕುಮಾರ್ ಸೇರಿದಂತೆ ಎಲ್ಲಾ ಜಿಲ್ಲೆಗಳ ಸಿಇಒಗಳು ಹಾಗೂ ಹಿರಿಯ ಅಕಾರಿಗಳು ಭಾಗವಹಿಸಿದ್ದರು.