ಚಳಿಗಾಲದ ಅಧಿವೇಶನ: ರಾಹುಲ್ ಭಾಗಿ ಸಾಧ್ಯತೆ ಇಲ್ಲ
ನವದೆಹಲಿ: ಭಾರತ್ ಜೋಡೊ ಯಾತ್ರೆಯಲ್ಲಿ ಪಾಲ್ಗೊಳ್ಳುತ್ತಿರುವ ಕಾರಣ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸಂಸತ್‌ನ ಮುಂಬರುವ ಚಳಿಗಾಲದ ಅಧಿವೇಶನದಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇಲ್ಲ ಎಂದು ಪಕ್ಷದ ಮೂಲಗಳು ಶನಿವಾರ ತಿಳಿಸಿವೆ.
ಚಳಿಗಾಲದ ಅಧಿವೇಶನವು ಡಿಸೆಂಬರ್ 7 ಮತ್ತು 29ರ ನಡುವೆ ನಡೆಯುವ ಸಾಧ್ಯತೆ ಇದೆ. ಆದರೆ ಈ ಕುರಿತ ಅಂತಿಮ ನಿರ್ಧಾರವನ್ನು ಸಂಸದೀಯ ವ್ಯವಹಾರಗಳ ಸಂಪುಟ ಸಮಿತಿ ತೆಗೆದುಕೊಳ್ಳಲಿದೆ ಎಂದೂ ಹೇಳಿದೆ.
ರಾಹುಲ್ ಅವರೊಂದಿಗೆ ಯಾತ್ರೆಯಲ್ಲಿ ಪಾಲ್ಗೊಳ್ಳುತ್ತಿರುವ ಇತರ ಮೂವರು ಸಂಸದರು ಕೂಡ ಅಧಿವೇಶನದಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇಲ್ಲ ಎಂದು ಪಕ್ಷದ ಸಂವಹನ ವಿಭಾಗದ ಮುಖ್ಯಸ್ಥ ಜೈರಾಮ್ ರಮೇಶ್ ಹೇಳಿದ್ದಾರೆ.
ಯಾತ್ರೆಯಲ್ಲಿ ಮಹಾರಾಷ್ಟ್ರದ ಎನ್‌ಸಿಪಿ ನಾಯಕಿ ಸುಪ್ರಿಯಾ ಸುಳೆ, ಜಯಂತ್ ಪಾಟೀಲ್, ಜಿತೇಂದ್ರ ಅವ್ಹಾದ್ ಮತ್ತು ಶಿವಸೇನಾ ಮುಖಂಡ ಆದಿತ್ಯ ಠಾಕ್ರೆ ಪಾಲ್ಗೊಂಡಿದ್ದಾರೆ ಎಂದು ಅವರು ವಿವರಿಸಿದ್ದಾರೆ.
ನವೆಂಬರ್ 22ರಂದು ಯಾತ್ರೆಯು ಮಧ್ಯಪ್ರದೇಶ ಪ್ರವೇಶಿಸುವ ಸಾಧ್ಯತೆ ಇದೆ ಎಂದೂ ಅವರು ಮಾಹಿತಿ ನೀಡಿದ್ದಾರೆ.