ಜನ ಸರ್ಕಾರವನ್ನು ಬದಲಾಯಿಸಬೇಕೆಂದು ಬಯಸಿದ್ದಾರೆ : ಡಿಕೆಶಿ

ಜನ ಸರ್ಕಾರವನ್ನು ಬದಲಾಯಿಸಬೇಕೆಂದು ಬಯಸಿದ್ದಾರೆ : ಡಿಕೆಶಿ

ಬೆಳಗಾವಿ,ಡಿ.16- ಬಿಜೆಪಿ ಸರ್ಕಾರದ ಭ್ರಷ್ಟಾಚಾರದಿಂದಾಗಿ ರಾಜ್ಯಕ್ಕೆ ಕಳಂಕ ಬಂದಿದೆ. ಜನ ಬೇಸತ್ತು ಸರ್ಕಾರವನ್ನು ಬದಲಾವಣೆ ಮಾಡಬೇಕೆಂದು ಬಯಸಿದ್ದಾರೆ. ಇದರ ಗಮನ ಬೇರೆಡೆ ಸೆಳೆಯುವ ಸಲುವಾಗಿ ಬಿಜೆಪಿ ಸರ್ಕಾರ ಮತಾಂತರ ನಿಷೇಧ ಕಾಯ್ದೆಯನ್ನು ಜಾರಿಗೆ ತರಲು ಮುಂದಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಶೇ.40ರಷ್ಟು ಕಮಿಷನ್ ಪಡೆಯುತ್ತಿರುವ ಬಗ್ಗೆ ಗುತ್ತಿಗೆದಾರರ ಸಂಘ ಲಿಖಿತವಾಗಿ ದೂರು ನೀಡಿರುವ ಪುರಾವೆಗಳಿವೆ. ಈ ಹಿಂದೆ ಪ್ರಧಾನಿ ಮೋದಿ ಅವರು ಕಾಂಗ್ರೆಸ್ ಸರ್ಕಾರವನ್ನು 10 ಪರ್ಸೆಂಟ್ ಸರ್ಕಾರ ಎಂದಾಗ ಯಾವುದೇ ದಾಖಲೆಗಳು ಇರಲಿಲ್ಲ ಎಂದರು.

ವಿಧಾನಪರಿಷತ್ ಸೇರಿದಂತೆ ಹಲವಾರು ಚುನಾವಣೆಗಳಲ್ಲಿ ಬಿಜೆಪಿ ಸೋಲು ಕಂಡಿದೆ. ಜನ ಬಿಜೆಪಿಯನ್ನು ತಿರಸ್ಕರಿಸುತ್ತಿದ್ದಾರೆ. ಅದನ್ನು ಮರೆಮಾಚಲು ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರಲಾಗುತ್ತಿದೆ. ಈಗಾಗಲೇ ಕಾಯ್ದೆ ಜಾರಿಯಲ್ಲಿರುವುದರಿಂದ ಹೊಸ ಕಾಯ್ದೆಯ ಅಗತ್ಯ ಏನಿದೆ ಎಂದು ಪ್ರಶ್ನಿಸಿದರು.

ನಿನ್ನೆಯ ವಿಧಾನಪರಿಷತ್‍ನಲ್ಲಿ 15ಮಂದಿ ಕಾಂಗ್ರೆಸ್ ಸದಸ್ಯರನ್ನು ಅಮಾನತುಗೊಳಿಸುವ ಮೂಲಕ ಇತಿಹಾಸ ಸೃಷ್ಟಿಸಲಾಗಿದೆ. ಭ್ರಷ್ಟ ಸಚಿವರ ಬಗ್ಗೆ ಚರ್ಚಿಸಲು ಅವಕಾಶ ನೀಡಿ ಎಂದರೆ ಅಮಾನತುಗೊಳಿಸಲಾಗಿದೆ. ಇದೇನು ಪ್ರಜಾಪ್ರಭುತ್ವವೇ ? ಅತ್ಯಂತ ಹಿರಿಯ ಸದಸ್ಯ ಬಸವರಾಜ ಹೊರಟ್ಟಿ ನಡೆದುಕೊಳ್ಳುತ್ತಿರುವ ರೀತಿ ಇದೆನಾ ? ಹೆಣ್ಣು ಮಗಳೊಬ್ಬನ್ನು ಸಭಾಪತಿ ಪೀಠದಲ್ಲಿ ಕೂರಿಸಿ ಅಮಾನತುಗೊಂಡ ಸದಸ್ಯರ ಹೆಸರನ್ನು ಹೇಳಿಸುತ್ತಾರೆ. ನಾವು ಬೆಳಗಾವಿಗೆ ಬಂದಿರುವುದು ಧರಣಿ ಮಾಡಲಿಕ್ಕಲ್ಲ. ಜನರ ಮಸ್ಯೆಗೆ ದನಿಯಾಗಲಿಕ್ಕೆ. ಅದಕ್ಕೆ ಅವಕಾಶ ನೀಡದಿರುವ ಸರ್ಕಾರದ ನಿಲುವು ಖಂಡನೀಯ ಎಂದರು.

ಬಿಜೆಪಿಯ ಹಿಂದುತ್ವವೇ ಬೇರೆ. ಶ್ರೀರಾಮ, ಗಾಂಯ ಹಿಂದು ಧರ್ಮವೇ ಬೇರೆ. ಬಿಜೆಪಿಯ ಹಿಂದುತ್ವದಲ್ಲಿ ಪವಿತ್ರ ಹೆಣ್ಣುಮಗಳು ಸೀತಾಮಾತೆಯ ಹೆಸರೇ ಪ್ರಸ್ತಾಪವಿರುವುದಿಲ್ಲ. ಜನರನ್ನು ಭಾವನಾತ್ಮಕವಾಗಿ ಕೆರಳಿಸಿ ರಾಜ್ಯದ ನೆಮ್ಮದಿ ಹಾಳು ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ನೆರೆ ಸಂತ್ರಸ್ತರಿಗೆ ಈ ಸರ್ಕಾರ ಯಾವುದೇ ಪರಿಹಾರ ನೀಡಿಲ್ಲ. ಭ್ರಷ್ಟಾಚಾರ ಮಿತಿ ಮೀರಿದೆ. ಕೃಷಿ ಸಮಸ್ಯೆಗಳು ಹೆಚ್ಚಾಗಿವೆ. ದಿನಕ್ಕೊಂದು ವಿಷಯಗಳನ್ನು ಮುಂದಿಟ್ಟುಕೊಂಡು ನಾವು ಚರ್ಚೆ ಮಾಡುತ್ತೇವೆ ಎಂದರು.