3 ಸಲ ರಾಜ್ಯಸಭೆ, 7 ಬಾರಿ ಲೋಕಸಭೆ ಸಂಸದರಾಗಿ.. ವಿದ್ಯಾರ್ಥಿ ರಾಜಕಾರಣದಿಂದ ರಾಷ್ಟ್ರ ರಾಜಕಾರಣದವರೆಗೆ

3 ಸಲ ರಾಜ್ಯಸಭೆ, 7 ಬಾರಿ ಲೋಕಸಭೆ ಸಂಸದರಾಗಿ.. ವಿದ್ಯಾರ್ಥಿ ರಾಜಕಾರಣದಿಂದ ರಾಷ್ಟ್ರ ರಾಜಕಾರಣದವರೆಗೆ

ಬಿಹಾರದ ರಾಜಕೀಯದಲ್ಲಿ ಛಾಪು ಮೂಡಿಸಿದ್ದ ಹಿರಿಯ ನಾಯಕ ಶರದ್ ಯಾದವ್ ಇನ್ನು ನೆನಪು ಮಾತ್ರ. 75 ವರ್ಷದ ಯಾದವ್ ಹಲವು ದಿನಗಳಿಂದ ಮೂತ್ರಪಿಂಡ ಸಮಸ್ಯೆ ಸೇರಿದಂತೆ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರ ನಿಧನಕ್ಕೆ ದೇಶದ ಗಣ್ಯರು ಸಂತಾಪ ವ್ಯಕ್ತಪಡಿಸಿ ಅವರ ಜೊತೆಗಿನ ರಾಜಕೀಯ ಹಾದಿಯನ್ನು ಸ್ಮರಿಸುತ್ತಿದ್ದಾರೆ.

ವಿದ್ಯಾರ್ಥಿ ಜೀವನದಿಂದಲೇ ಹೋರಾಟದ ಬದುಕನ್ನು ಶುರುಮಾಡಿದ್ದ ಯಾದವ್, ನಂತರ ರಾಜಕೀಯ ಪ್ರವೇಶ ಮಾಡಿ ರಾಷ್ಟ್ರ ರಾಜಕಾರಣದಲ್ಲಿ ಅತ್ಯುನ್ನತ ಸ್ಥಾನವನ್ನು ಅಲಂಕರಿಸಿದ ಹೆಗ್ಗಳಿಕೆ ಅವರದ್ದು.

ಸಾಮಾನ್ಯ ರೈತ ಕುಟುಂಬದಲ್ಲಿ ಜನನ
ಶರದ್ ಯಾದವ್ ಜುಲೈ 1, 1947 ರಂದು ಮಧ್ಯಪ್ರದೇಶದ ಹೋಶಂಗಾಬಾದ್‌ನಲ್ಲಿ ಜನಿಸಿದರು. ಸಾಮಾನ್ಯ ರೈತ ಕುಟುಂಬದಲ್ಲಿ ಜನಿಸಿದ್ದ ಯಾದವ್, ಪ್ರಾಥಮಿಕ ಶಿಕ್ಷಣವನ್ನು ಹುಟ್ಟೂರಿನಲ್ಲಿಯೇ ಮುಗಿಸಿದರು. ಯೌವನಕ್ಕೆ ಕಾಲಿಡುತ್ತಿದ್ದಂತೆಯೇ ರಾಜಕೀಯ ವಿಚಾರಗಳಲ್ಲಿ ಹೆಚ್ಚು ಆಸಕ್ತಿ ಪಡೆದುಕೊಂಡರು. ಹುಟ್ಟೂರಿನಲ್ಲಿ ಆರಂಭಿಕ ಶಿಕ್ಷಣ ಪಡೆದ ಯಾದವ್, ಜಬಲ್ಪುರ ಎಂಜಿನಿಯರಿಂಗ್ ಕಾಲೇಜಿನಲ್ಲಿ ಓದಿದರು. ಈ ಸಮಯದಲ್ಲಿ ಯಾದವ್ ವಿದ್ಯಾರ್ಥಿ ಜೀವನದ ಹೋರಾಟಗಳಲ್ಲಿ ತುಂಬಾ ಸಕ್ರಿಯರಾಗಿ ಗುರುತಿಸಿಕೊಂಡಿದ್ದರು. ಕೇವಲ ಪ್ರತಿಭಟನೆ, ಹೋರಾಟ ಮಾತ್ರವಲ್ಲ, ಓದುವುದರಲ್ಲೂ ಶರದ್ ಯಾದವ್ ಅಗ್ರಸ್ಥಾನದಲ್ಲಿದ್ದರು. ವಿಶೇಷ ಅಂದ್ರೆ ಶರದ್ ಯಾದವ್, ರಾಮ್ ಮನೋಹರ್ ಲೋಹಿಯಾ ಚಿಂತನೆಗಳಿಂದ ಹೆಚ್ಚು ಪ್ರಭಾವಿತರಾಗಿದ್ದರು.