ಐಪಿಎಲ್ ಇತಿಹಾಸದಲ್ಲಿ ಆರ್‌ಸಿಬಿ vs ಸಿಎಸ್‌ಕೆ ತಂಡಗಳ ಅಂಕಿಅಂಶ ಹೇಗಿದೆ?
2023ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 16ನೇ ಸೀಸನ್‌ಗೆ ಶುಕ್ರವಾರ, ಮಾರ್ಚ್ 31ರಿಂದ ಚಾಲನೆ ಸಿಕ್ಕಿದ್ದು, ಉದ್ಘಾಟನಾ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟನ್ಸ್ ತಂಡಗಳು ಮುಖಾಮುಖಿಯಾಗಿದ್ದು, ಮೊದಲ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ನಾಯಕತ್ವದ ಗುಜರಾತ್ ಟೈಟನ್ಸ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 5 ವಿಕೆಟ್‌ಗಳ ಗೆಲುವು ಸಾಧಿಸಿತು.
ಇನ್ನು ಐಪಿಎಲ್ ಇತಿಹಾಸದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮತ್ತು ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡಗಳು ಬಲಾಢ್ಯ ತಂಡಗಳೆಂದು ಹೆಸರು ಮಾಡಿವೆ. ಇವೆರಡು ತಂಡಗಳು ಮುಖಾಮುಖಿಯಾಗುವುದನ್ನು ಕ್ರಿಕೆಟ್ ಪ್ರೇಮಿಗಳು ಕಾತರದಿಂದ ಕಾಯುತ್ತಾರೆ. ಇವೆರಡು ತಂಡಗಳಿಗೆ ಅತಿ ದೊಡ್ಡ ಅಭಿಮಾನಿ ಬಳಗವಿದ್ದು, ಆರ್‌ಸಿಬಿ ಮತ್ತು ಸಿಎಸ್‌ಕೆ ನಡುವಿನ ಹೈ-ವೋಲ್ಟೇಜ್ ಕಾಳಗವನ್ನು ಐಪಿಎಲ್‌ನ ಎಲ್ ಕ್ಲಾಸಿಕೋ ಎಂದೂ ಕರೆಯಲಾಗುತ್ತದೆ.
ಇಂಡಿಯನ್ ಪ್ರೀಮಿಯರ್ ಲೀಗ್‌ನ ಎರಡು ಸೂಪರ್ ದೈತ್ಯ ತಂಡಗಳಾದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಘರ್ಷಣೆಯು 2008ರ ಐಪಿಎಲ್‌ನ ಉದ್ಘಾಟನಾ ಆವೃತ್ತಿಯಿಂದಲೇ ಅಭಿಮಾನಿಗಳ ಗಮನವನ್ನು ಸೆಳೆದಿದೆ. ಈ ಎರಡು ತಂಡಗಳ ನಡುವಿನ ಪಂದ್ಯವು ಕೇವಲ ಕ್ರಿಕೆಟ್ ಆಟಕ್ಕಿಂತ ಭಾವನಾತ್ಮಕವಾಗಿ ತೆಗೆದುಕೊಳ್ಳುವವರಿದ್ದಾರೆ.
ಈ ಎರಡು ಬಲಿಷ್ಠ ತಂಡಗಳ ನಡುವಿನ ಪಂದ್ಯಗಳ ಅಂಕಿಅಂಶಗಳ ಬಗ್ಗೆ ಅವಲೋಕಿಸುವುದಾದರೆ, ಗೆಲುವಿನ ಲೆಕ್ಕಾಚಾರದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಆರ್‌ಸಿಬಿಗಿಂತ ಮುನ್ನಡೆ ಪಡೆದುಕೊಂಡಿದೆ. 2022ರ ಐಪಿಎಲ್ 15ನೇ ಆವೃತ್ತಿಯವರೆಗೆ 31 ಬಾರಿ ಮುಖಾಮುಖಿಯಾಗಿದ್ದು, ಐಪಿಎಲ್ ಮತ್ತು ಚಾಂಪಿಯನ್ಸ್ ಲೀಗ್ ಟಿ20 ಸೇರಿವೆ. ಅದರಲ್ಲಿ ಸಿಎಸ್‌ಕೆ 20 ಪಂದ್ಯಗಳನ್ನು ಗೆದ್ದಿದ್ದರೆ, ಆರ್‌ಸಿಬಿ ತಂಡ 10 ಪಂದ್ಯಗಳನ್ನು ಮಾತ್ರ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಒಂದು ಪಂದ್ಯ ಯಾವುದೇ ಫಲಿತಾಂಶ ಕಂಡಿಲ್ಲ.
2008ರ ಏಪ್ರಿಲ್ 28ರಂದು ಉಭಯ ತಂಡಗಳು ಮೊದಲ ಬಾರಿಗೆ ಮುಖಾಮುಖಿಯಾಗಿದ್ದವು. ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆ ಪಂದ್ಯದಲ್ಲಿ ಸಿಎಸ್‌ಕೆ ತಂಡ ಆರ್‌ಸಿಬಿ ವಿರುದ್ಧ 13 ರನ್‌ಗಳಿಂದ ಗೆಲುವು ಸಾಧಿಸಿತ್ತು. ಇನ್ನು ಇತ್ತಂಡಗಳ ಕೊನೆಯ ಮುಖಾಮುಖಿಯಲ್ಲಿ ಫಲಿತಾಂಶ ಭಿನ್ನವಾಗಿದೆ. 2022ರ ಮೇ4 ರಂದು ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಸಿಎಸ್‌ಕೆ ವಿರುದ್ಧ ಆರ್‌ಸಿಬಿ 13 ರನ್‌ಗಳಿಂದ ಗೆದ್ದು ಬೀಗಿದೆ.
ಇದೀಗ ಮತ್ತೆ 2023ರ ಐಪಿಎಲ್‌ನ 16ನೇ ಋತುವಿನಲ್ಲಿ ಮುಖಾಮುಖಿಯಾಗಲಿವೆ. ಸಿಎಸ್‌ಕೆ ಮತ್ತು ಆರ್‌ಸಿಬಿ ನಡುವಿನ ಹೈ-ವೋಲ್ಟೇಜ್ ಪಂದ್ಯವು ಏಪ್ರಿಲ್ 17ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಿಗದಿಯಾಗಿದೆ. ಈ ವೇಳೆ ವಿರಾಟ್ ಕೊಹ್ಲಿ, ಎಂಎಸ್ ಧೋನಿ, ಫಾಫ್ ಡು ಪ್ಲೆಸಿಸ್ ಮತ್ತು ಬೆನ್ ಸ್ಟೋಕ್ಸ್ ಅವರಂತಹ ದಿಗ್ಗಜರು ಪರಸ್ಪರ ಸೆಣಸಾಡಲಿದ್ದಾರೆ.
ಕಳೆದ ವರ್ಷದ ಐಪಿಎಲ್‌ನಲ್ಲಿ ಫಾಫ್ ಡು ಪ್ಲೆಸಿಸ್ ನಾಯಕತ್ವದ ಆರ್‌ಸಿಬಿ ತಂಡ ಅಗ್ರ ನಾಲ್ಕರಲ್ಲಿ ಸ್ಥಾನ ಪಡೆದು ಪ್ಲೇಆಫ್ ತಲುಪಿತ್ತು. ಆದರೆ ಕ್ವಾಲಿಫೈಯರ್ 2ರಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಸೋತು ಪಂದ್ಯಾವಳಿಯಿಂದ ಹೊರಬಿತ್ತು. ಇನ್ನು ಎಂಎಸ್ ಧೋನಿ ನಾಯಕತ್ವದ ಸಿಎಸ್‌ಕೆ ತಂಡ ಕೇವಲ 8 ಅಂಕಗಳನ್ನು ಗಳಿಸಿ 9ನ ಸ್ಥಾನಕ್ಕೆ ತೃಪ್ತಿಪಟ್ಟಿತು.
ಆರ್‌ಸಿಬಿ vs ಸಿಎಸ್‌ಕೆ ನಡುವೆ ಅತಿ ಹೆಚ್ಚು ರನ್ ಗಳಿಸಿದವರು
ವಿರಾಟ್ ಕೊಹ್ಲಿ (ಆರ್‌ಸಿಬಿ) - 993 ರನ್‌ಗಳು
ಆರ್‌ಸಿಬಿ vs ಸಿಎಸ್‌ಕೆ ನಡುವೆ ಅತಿ ಹೆಚ್ಚು ವಿಕೆಟ್ ಪಡೆದವರು
ರವೀಂದ್ರ ಜಡೇಜಾ (ಸಿಎಸ್‌ಕೆ) - 18 ವಿಕೆಟ್