'ದಿ ಕಾಶ್ಮೀರ್ ಫೈಲ್ಸ್' ನಿರ್ದೇಶಕನ ಚಿತ್ರಕ್ಕೆ ನಾಯಕಿಯಾದ 'ಕಾಂತಾರ' ಹೀರೋಯಿನ್

ರಿಷಬ್ ಶೆಟ್ಟಿ ನಿರ್ದೇಶನದ 'ಕಾಂತಾರ' ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಪ್ರೇಕ್ಷಕರಿಗೆ ಚಿರಪರಿಚಿತರಾದ ಸಪ್ತಮಿ ಗೌಡ ಇದೀಗ ಸದ್ದಿಲ್ಲದೇ ಬಾಲಿವುಡ್ ಗೆ ಎಂಟ್ರಿ ಪಡೆದಿದ್ದಾರೆ. ದಿ ಕಾಶ್ಮೀರ್ ಫೈಲ್ಸ್ ಸಿನಿಮಾದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ಹೊಸ ಸಿನಿಮಾ 'ದಿ ವ್ಯಾಕ್ಸಿನ್ ವಾರ್' ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.
ತಾವು ದಿ ವ್ಯಾಕ್ಸಿನ್ ವಾರ್ ಸಿನಿಮಾಗೆ ಆಯ್ಕೆಯಾಗಿದ್ದನ್ನು ಖಚಿತ ಪಡಿಸಿರುವ ಸಪ್ತಮಿ ಗೌಡ, ಈ ಬಾರಿಯ ಸಂಕ್ರಾಂತಿಯನ್ನು ದಿ ವ್ಯಾಕ್ಸಿನ್ ವಾರ್ ಶೂಟಿಂಗ್ ಸೆಟ್ ನಲ್ಲೇ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಇದು ಬಯಸದೇ ಬಂದಿರುವ ಭಾಗ್ಯ ಎಂದೂ ಹೇಳಿಕೊಂಡಿದ್ದಾರೆ. ಸ್ವತಃ ವಿವೇಕ್ ಅಗ್ನಿಹೋತ್ರಿ ಅವರೇ ಸಪ್ತಮಿ ಗೌಡ ಅವರಿಗೆ ಕಾಲ್ ಮಾಡಿ, ನಟಿಸಲು ಅವಕಾಶ ನೀಡಿದ್ದಾರೆ ಎಂದು ಅವರು ಹೇಳಿಕೊಂಡಿದ್ದಾರೆ.
ಪಾತ್ರದ ಬಗ್ಗೆ ಹೆಚ್ಚೇನೂ ಹೇಳದ ಸಪ್ತಮಿ, ಈ ಸಿನಿಮಾದಲ್ಲಿ ನಾಯಕ, ನಾಯಕಿ ಅಂತೇನೂ ಇಲ್ಲ. ಕಂಟೆಂಟ್ ಮೇಲೆ ನಿಂತಿರುವಂತಹ ಸಿನಿಮಾ. ಈ ಸಿನಿಮಾದಲ್ಲಿ ನನ್ನದೂ ಪ್ರಮುಖ ಪಾತ್ರ ಅಂದಷ್ಟೇ ಹೇಳಿಕೊಂಡಿದ್ದಾರೆ. ಹೈದರಾಬಾದ್ ನಲ್ಲಿ ಸದ್ಯ ದಿ ವ್ಯಾಕ್ಸಿನ್ ವಾರ್ ಸಿನಿಮಾದ ಶೂಟಿಂಗ್ ನಡೆಯುತ್ತಿದ್ದು, ಸಂಕ್ರಾಂತಿ ದಿನದಂದು ಸಪ್ತಮಿ ಚಿತ್ರತಂಡವನ್ನು ಸೇರಿಕೊಳ್ಳಲಿದ್ದಾರೆ.
ಕಾಂತಾರ ಸಿನಿಮಾ ಹಾಗೂ ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಈಗಾಗಲೇ ಆಸ್ಕರ್ ಅಂಗಳದಲ್ಲಿವೆ. ಎರಡೂ ಚಿತ್ರಗಳ ನಡುವೆ ಪೈಪೋಟಿಯೂ ಏರ್ಪಡಬಹುದು. ಇಂತಹ ಹೊತ್ತಿನಲ್ಲಿ ಸಪ್ತಮಿ ಗೌಡ ಅವರಿಗೆ ಬಾಲಿವುಡ್ ಗೆ ಹೋಗುವಂತಹ ಅವಕಾಶ ಸಿಕ್ಕಿದೆ. ಅದರಲ್ಲೂ ಕಳೆದ ವರ್ಷ ಬಾಕ್ಸ್ ಆಫೀಸ್ ದೋಚಿದ್ದ ವಿವೇಕ್ ಅಗ್ನಿಹೋತ್ರಿ ಜೊತೆ ಕೆಲಸ ಮಾಡಲು ಅವರು ತುದಿಗಾಲಲ್ಲಿ ನಿಂತಿದ್ದಾರೆ. ಈ ನಡುವೆ ಕನ್ನಡದ ಕಾಳಿ ಚಿತ್ರಕ್ಕೂ ಸಪ್ತಮಿ ಗೌಡ ಬ್ಯುಸಿಯಾಗಿದ್ದಾರೆ.