ಇನ್ಮೇಲೆ ಮದುವೆ ಪಾರ್ಟಿಯಲ್ಲಿ ಕೇಕ್ ಕತ್ತರಿಸುವಂತಿಲ್ಲ, ಮದುಮಗ ಗಡ್ಡ ಬಿಡುವಂತಿಲ್ಲ!
ಮದುವೆ ದಿನ ಕ್ಲೀನ್ ಶೇವ್ ಇರ್ಲೇಬೇಕು!
ಹಾಗಾದರೆ ಕೇಕ್ ಕತ್ತರಿಸೋದು ಮತ್ತು ಶಾಂಪೆನ್ ಹಾರಿಸೋದನ್ನು ಕೊಡವ ಸಮಾಜಗಳು ನಿಷೇಧಿಸುತ್ತಿರುವುದಾದರೂ ಏಕೆ? ಹೌದು ಕೊಡವರು ಪ್ರಕೃತಿ ಆರಾಧಕರು. ಅವರ ಸಂಸ್ಕೃತಿಯೇ ವಿಶಿಷ್ಟ. ಅಷ್ಟಕ್ಕೂ ವಿವಾಹಕ್ಕೆ ನಿಶ್ಚಿತಾರ್ಥ ಆಯಿತ್ತೆಂದರೆ ಬಳಿಕ ಯುವಕ ಗಡ್ಡ ಬೋಳಿಸುವಂತಿಲ್ಲ. ಮದುವೆ ದಿನ ಗಡ್ಡ ತೆಗೆದು ವಿವಾಹಕ್ಕೆ ಸಿದ್ಧವಾಗಬೇಕು. ಮದುವೆಯ ದಿನ ಗಡ್ಡವನ್ನು ಬಿಡುವಂತಿಲ್ಲ.
ಅಷ್ಟೇ ಏಕೆ ವಧು ವರರಿಗೆ ಆಶಿರ್ವದಿಸಲು ಬರುವ ಮಹಿಳೆಯರು ಬಿಚ್ಚು ತಲೆಯಲ್ಲಿ ಆಶಿರ್ವದಿಸುವಂತಿಲ್ಲ. ಬಿಚ್ಚು ತಲೆಯಲ್ಲಿ ಇರೋದು ಅಶುಭದ ಸಂಕೇತ. ಅದರಲ್ಲೂ ಶೋಕದ ಸಂದರ್ಭದಲ್ಲಿ ಮಹಿಳೆಯರು ಬಿಚ್ಚುತಲೆಯಲ್ಲಿ ಇರುತ್ತಾರೆ ಎನ್ನೋದು ಕೊಡವ ಮುಖಂಡ ಎಂ. ಬಿ ದೇವಯ್ಯ ಅವರ ಅಭಿಪ್ರಾಯ. ಆದರೆ ಇತ್ತೀಚೆಗೆ ಆಧುನಿಕ ಜೀವನ ಶೈಲಿಗೆ ಮಾರುಹೋಗಿರುವ ಕೆಲ ಯುವಕರು ಉದ್ದದ ಗಡ್ಡವನ್ನು ಬಿಟ್ಟುಕೊಂಡೇ ವಿವಾಹವಾಗುತ್ತಿದ್ದಾರೆ. ಇನ್ನು ಮಹಿಳೆಯರು ಕೂಡ ಬಿಚ್ಚು ತಲೆಯಲ್ಲಿ ವಧು ವರರಿಗೆ ಆಶಿರ್ವದಿಸುತ್ತಿದ್ದಾರೆ ಎಂದು ಪೊನ್ನಂಪೇಟೆ ಕೊಡವ ಸಮಾಜದ ಅಧ್ಯಕ್ಷ ರಾಜೀವ್ ಬೋಪಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ಕೇಕ್ ಕತ್ತರಿಸೋದು ಶಾಂಪೇನ್ ಹಾರಿಸೋದು ಕೊಡವ ಸಂಸ್ಕೃತಿಯೇ ಅಲ್ಲ. ಅದು ಬ್ರಿಟೀಷರ ಅಥವಾ ಕ್ರೈಸ್ತರ ಸಂಸ್ಕೃತಿ. ಬ್ರಿಟೀಷರು ಭಾರತವನ್ನು ಬಿಟ್ಟು ಹೋಗಿ 8 ದಶಕಗಳಾಗುತ್ತಾ ಬಂದರು ಅವರ ಸಂಸ್ಕೃತಿಯನ್ನು ಮತ್ತೆ ನಾವು ಅಳವಡಿಕೊಳ್ಳುತ್ತಾ ಬಂದರೆ ನಮ್ಮ ಸಂಸ್ಕೃತಿ ಮೂಲೆ ಗುಂಪಾಗುತ್ತದೆ. ಹೀಗಾಗಿ ಶೇಷ್ಠವಾದ ನಮ್ಮ ಸಂಸ್ಕೃತಿಯನ್ನೇ ಉಳಿಸಿ ಬೆಳೆಸಬೇಕಾದ ನಾವು ಬೇರೆಯವರ ಸಂಸ್ಕೃತಿಯನ್ನು ಆಚರಿಸಿ ನಮ್ಮ ಸಂಸ್ಕೃತಿಗೆ ಧಕ್ಕೆ ತರಬಾರದು ಎನ್ನೋದು ಹಲವರ ಅಭಿಪ್ರಾಯ.
ಹೀಗಾಗಿ ಪೊನ್ನಂಪೇಟೆ ಅಥವಾ ವಿರಾಜಪೇಟೆ ಕೊಡವ ಸಮಾಜಗಳು ಅಷ್ಟೇ ಅಲ್ಲ, ಉಳಿದ ಎಲ್ಲಾ ಕೊಡವ ಸಮಾಜಗಳು ವಿವಾಹ ಸಮಾರಂಭದಲ್ಲಿ ಕೇಕ್ ಕತ್ತರಿಸುವುದು ಮತ್ತು ಶಾಂಪೇನ್ ಹಾರಿಸೋದನ್ನು ನಿಷೇಧಿಸಲು ನಿರ್ಧರಿಸಬೇಕು ಎಂದು ಎಂ. ಬಿ ದೇವಯ್ಯ ಒತ್ತಾಯಿಸಿದ್ದಾರೆ.