ಹುಬ್ಬಳ್ಳಿ: ಗೊಂದಲದ ಗೂಡಾದ ಪಾಲಿಕೆಯ ಅವಧಿ: ಚುನಾವಣೆ ಮುಗಿದು 3 ತಿಂಗಳಾದರೂ ಬಗೆಹರಿಯದ ಸಮಸ್ಯೆ
ಹುಬ್ಬಳ್ಳಿ: ಎರಡೂವರೆ ವರ್ಷ ಬಳಿಕ ಹು-ಧಾ ಮಹಾನಗರ ಪಾಲಿಕೆಗೆ ಚುನಾಯಿತ ಮಂಡಳಿ ಆಸ್ತಿತಕ್ಕೆ ಬಂದಿದ್ದು, ಚುನಾವಣೆ ಮುಗಿದು 4 ತಿಂಗಳು ಸಮೀಪಿಸಿದರೂ ಹೊಸ ಮೇಯರ್-ಉಪಮೇಯರ್ ಆಯ್ಕೆಗೆ ಇನ್ನೂ ಕಾಲ ಕೂಡಿ ಬಂದಿಲ್ಲ. ಈ ಮಧ್ಯೆ ಮೇಯರ್ -ಉಪಮೇಯರ್ ಹುದ್ದೆಗಳ ಮೀಸಲು ಬಗೆಗೆ ಪಾಲಿಕೆ ಅಧಿಕಾರಿಗಳಲ್ಲೂ ಗೊಂದಲ ಸೃಷ್ಟಿಯಾಗಿದೆ.
ಹೌದು.. ಹು-ಧಾ ಮಹಾನಗರ ಪಾಲಿಕೆಗೆ 2019 ಮಾರ್ಚ್ ದಿಂದ 2021 ವರೆಗೆ ಚುನಾಯಿತ ಮಂಡಳಿ ಇರಲಿಲ್ಲ. 2019ರಲ್ಲಿ ಕೊನೆಗೊಂಡ ಹಿಂದಿನ ಮೇಯರ್ -ಉಪಮೇಯರ್ (ಸಾಮಾನ್ಯ ಮತ್ತು ಹಿಂದುಳಿದ ಆ ಮಹಿಳೆ) ಸ್ಥಾನಗಳನ್ನು 20ನೇ ಅವಧಿಯದ್ದು ಎಂದು ನಗರಾಭಿವೃದ್ಧಿ ಇಲಾಖೆ 1-1-2018ರಂದು ಮೀಸಲಾತಿ ಕುರಿತು ಹೊರಡಿಸಿರುವ ಗೆಜೆಟ್‌ನಲ್ಲಿ ಸಷ್ಟಪಡಿಸಲಾಗಿದೆ.
ಹಾಗೆಯೇ ಇಲಾಖೆಯು 3-9-2018 ರಂದು ರಾಜ್ಯ ಪತ್ರ ದಲ್ಲಿ 21 ನೇ ಅವಧಿಗೆ ಮೇಯರ್-ಉಪಮೇಯರ್ ಸ್ಥಾನಗಳನ್ನು (ಸಾಮಾನ್ಯಹಾಗೂ ಸಾಮಾನ್ಯ ಮಹಿಳೆ) ನಿಗದಿಪಡಿಸಿದೆ. ಏತನ್ಮಧ್ಯೆ ನಗರಾಭಿವೃದ್ಧಿ ಇಲಾಖೆಯು ಕಳೆದ 11 ಫೆಬ್ರವರಿ 2021ರಂದು ಹೊರಡಿಸಿದ ಗೆಜೆಟ್‌ನಲ್ಲಿ 23ನೇ ಅವಧಿಯ ಮೇಯರ್ ಸ್ಥಾನವನ್ನು ಹಿಂದುಳಿದ ಅ ವರ್ಗ ಹಾಗೂ ಉಪಮೇಯರ್ ಹುದ್ದೆಯನ್ನು ಪರಿಶಿಷ್ಟ ಜಾತಿ(ಮಹಿಳೆ)ಗೆ ಮೀಸಲಿರಿಸಿ ಆದೇಶ ಹೊರಡಿಸಿದೆ.
ಇನ್ನೂ ಮೇಯರ್ -ಉಪಮೇಯರ್ ಆಯ್ಕೆಗೆ ಸರಕಾರದಿಂದ ಅಧಿಸೂಚನೆ ಹೊರಬಿದ್ದಿಲ್ಲ. 11 ಫೆಬ್ರವರಿ 2021ರಂದು ಗೆಜೆಟ್‌ನಲ್ಲಿ ಪ್ರಕಟಗೊಂಡ ಮೀಸಲು ಪ್ರಕಾರ 23 ನೇ ಅವಧಿ ಎಂದು ಸಷ್ಟಪಡಿಸಲಾಗಿದೆ. 2019-20 ಹಾಗೂ 2020-21 ಸಾಲಿನಲ್ಲಿ ಚುನಾಯಿತ ಮಂಡಳಿ ಇಲ್ಲದ್ದರಿಂದ ಮೇಯರ್-ಉಪಮೇಯರ್ ಆಯ್ಕೆಗೆ ಪ್ರಮೇಯವೇ ಇರಲಿಲ್ಲ. ಹಾಗಾಗಿ ಈ ಎರಡು ವರ್ಷಗಳ ಅವಧಿಯನ್ನು ಶೂನ್ಯ ಎಂದು ಪರಿಗಣಿಸಲಾಗುತ್ತಿದೆಯೋ ಅಥವಾ ಮುಂದುವರಿದ ಅವಧಿಗಳು ಎಂದು ಗಣನೆಗೆ ತೆಗೆದುಕೊಳ್ಳಲಾಗುತ್ತದೆಯೇ ? ಇದೇ ಅವಧಿ ಯಲ್ಲಿ ಆಯ್ಕೆಯಾಗಿರುವ ಹೊಸ ಚುನಾಯಿತ ಮಂಡಳಿಗೆ ಯಾವ ಅವಧಿಯದ್ದು ಎಂದು ಪರಿಗಣಿಸಬೇಕೆಂದು ಕೂಡ ಪ್ರಶ್ನೆ ಉದ್ಭವಿಸಿದೆ.ಈ ಹಿನ್ನೆಲೆಯಲ್ಲಿ ಸ್ಪಷ್ಟ ಮಾಹಿತಿ ನೀಡುವಂತೆ ಪಾಲಿಕೆ ಆಯುಕ್ತ ಡಾ. ಸುರೇಶ ಇಟ್ನಾಳ್ ಅವರು ನಗರಾಭಿವೃದ್ಧಿ ಇಲಾಖೆಗೆ ಪತ್ರ ಬರೆದಿದ್ದಾರೆ.
ಎರಡು ವರ್ಷಗಳ ಬಳಿಕ ಚುನಾಯಿತ ಮಂಡಳಿ ಅಸ್ತಿತ್ವಕ್ಕೆ ಬಂದಿದ್ದು, ಇದೀಗ ಮೇಯರ್ - ಉಪಮೇಯರ್ ಸ್ಥಾನವನ್ನು 21ನೇ ಅವಧಿ ಎಂದು ಕರೆಯಬೇಕೋ ಅಥವಾ 23ನೇ ಅವಧಿ ಎಂದು ಪರಿಗಣಿಸಬೇಕೆ ಎಂಬುದು ಗೊಂದಲ ಇದೆ. ಈ ಬಗ್ಗೆ ಸ್ಪಷ್ಟಿಕರಣ ನೀಡುವಂತೆ ನಗರಾಭಿವೃದ್ಧಿ ಇಲಾಖೆಗೆ ಪತ್ರ ಬರೆಯಲಾಗಿದೆ. 21ನೇ ಅವಧಿ ಎಂದು ಪರಿಗಣಿಸಬೇಕೆಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ಸ್ಪಷ್ಟಿಕರಣ ಕಳಿಸುವಂತೆ ಆಯುಕ್ತರು ಮನವಿ ಮಾಡಿದ್ದಾರೆ.