ಬಿಜೆಪಿ ತಳಮಟ್ಟದಲ್ಲಿ ತಳಮಳ: ಪ್ರತಿಪಕ್ಷಗಳ ವೇಗಕ್ಕೆ ಕಾರ್ಯಕರ್ತರಲ್ಲಿ ಕಳವಳ; ರಾಜ್ಯಾಧ್ಯಕ್ಷರ ನಡೆಗೆ ಬೇಸರ

ಬಿಜೆಪಿ ತಳಮಟ್ಟದಲ್ಲಿ ತಳಮಳ: ಪ್ರತಿಪಕ್ಷಗಳ ವೇಗಕ್ಕೆ ಕಾರ್ಯಕರ್ತರಲ್ಲಿ ಕಳವಳ; ರಾಜ್ಯಾಧ್ಯಕ್ಷರ ನಡೆಗೆ ಬೇಸರ

ಮೃತ್ಯುಂಜಯ ಕಪಗಲ್ ಬೆಂಗಳೂರು

ಮುಂದಿನ ವಿಧಾನಸಭೆ ಚುನಾವಣೆಗೆ ಮುನ್ನ 'ಆಡಳಿತ ವಿರೋಧಿ ಅಲೆ' ತಗ್ಗಿಸಿ, ಸಕಾರಾತ್ಮಕ ವಾತಾವರಣ ಸೃಷ್ಟಿಸಲು ಪ್ರಧಾನಿ ನರೇಂದ್ರ ಮೋದಿ ನಿರಂತರ ರಾಜ್ಯ ಪ್ರವಾಸ ನೆರವಾಗಲಿದೆ ಎನ್ನುವುದು ಬಿಜೆಪಿ ರಾಜ್ಯ ಕಾರ್ಯಕರ್ತರ ನಿರೀಕ್ಷೆಯಾಗಿದೆ.

ಆದರೆ, ಈ ಅವಕಾಶವನ್ನು ಸಕಾರಾತ್ಮಕವಾಗಿ ಬಳಸಿಕೊಳ್ಳುವಲ್ಲಿ ಪಕ್ಷದ ರಾಜ್ಯಾಧ್ಯಕ್ಷರು ಹಿಂದೆ ಬಿದ್ದಿರುವುದು ತಳಮಟ್ಟದ ಕಾರ್ಯಕರ್ತರಲ್ಲಿ ತಳಮಳ ಸೃಷ್ಟಿಸಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಆದಿಯಾಗಿ ರಾಜ್ಯದ ಮುಂಚೂಣಿ ನಾಯಕರ ಮನವಿಗೆ ಪ್ರಧಾನಿ ಮೋದಿ ಸ್ಪಂದಿಸಿ, ರಾಜ್ಯಕ್ಕೆ ಬಂದು ಹೋಗುತ್ತಿದ್ದಾರೆ. ಆದರೆ ಮೋದಿ ಭೇಟಿಯು ಸರ್ಕಾರಿ ಕಾರ್ಯಕ್ರಮಗಳಿಗಷ್ಟೇ ಸೀಮಿತವಾಗಿದೆ. ಇದು, ಸಾಮಾನ್ಯ ಕಾರ್ಯಕರ್ತರನ್ನು ಅಚ್ಚರಿಗೆ ದೂಡಿದ್ದು, ವರಿಷ್ಠರ ತಂತ್ರಗಾರಿಕೆ ಅರ್ಥವಾಗದೆ ಸಂಘಟನೆಯ ಎರಡು ಹಾಗೂ ಮೂರನೇ ಹಂತದ ಮುಖಂಡರು ತಲೆಕೆಡಿಸಿಕೊಂಡಿದ್ದಾರೆ. ಮೋದಿ ರಾಜ್ಯಕ್ಕೆ ಬಂದಾಗಲೆಲ್ಲ ಜನರ ಗಮನಸೆಳೆಯುತ್ತಿದೆ. ಒಂದಿಷ್ಟು ಹವಾ ಎಬ್ಬಿಸಿದರೂ ರಾಜಕೀಯವಾಗಿ ಸಂಚಲನದ ಚರ್ಚೆಗೆ ಗ್ರಾಸವಾಗಿಲ್ಲ. ಮಿಷನ್ 150 ಗುರಿ ಸಾಧಿಸಲು ರಾಷ್ಟ್ರೀಯ ನಾಯಕತ್ವವನ್ನೇ ರಾಜ್ಯ ನೆಚ್ಚಿಕೊಂಡಿದೆ. ಪ್ರತಿಯೊಂದು ರಾಜಕೀಯ ನೀತಿ-ನಿರ್ಧಾರಗಳು ವರಿಷ್ಠರ ಹಂತದಲ್ಲೇ ಅಂತಿಮವಾಗುತ್ತಿವೆ. ನಿಗಮ-ಮಂಡಳಿಗಳ ನೇಮಕ ಸೇರಿ ಪ್ರತಿಯೊಂದನ್ನು ಅತ್ತಲೇ ಬೊಟ್ಟು ಮಾಡಿ ತೋರಿಸುತ್ತಿರುವುದು ಪಕ್ಷದ ಕೆಳಸ್ತರದಲ್ಲಿ ಇಂತಹ ಭಾವನೆ ಹುಟ್ಟಿಹಾಕಿದೆ ಎಂದು ಮೂಲಗಳು ತಿಳಿಸಿವೆ.

ಕೈಚೆಲ್ಲಿದ ಮುಂಚೂಣಿ ಘಟಕಗಳು: ಅಧಿಕೃತ ಕಾರ್ಯಕ್ರಮಗಳಲ್ಲಿ ಮೋದಿ ಪಾಲ್ಗೊಳ್ಳುವುದರಿಂದ ಕಾರ್ಯಕರ್ತರಿಗೆ ಹೆಚ್ಚಿನ ಕೆಲಸ ಇರುವುದಿಲ್ಲ, ಜನಾಭಿಪ್ರಾಯ ಹುಟ್ಟುಹಾಕುವಂಥ ಚರ್ಚೆಗೆ ನಿರ್ದಿಷ್ಟ ವಿಷಯಗಳೂ ಇಲ್ಲ. ಸರ್ಕಾರಿ ಕಾರ್ಯಕ್ರಮದ ವೇದಿಕೆ ರಾಜಕೀಯದ ಮಾತುಗಳನ್ನು ಆಡಲಾಗದು. ಜನವರಿಯಲ್ಲಿ ಮೋದಿ ಎರಡನೇ ಬಾರಿ ರಾಜ್ಯಕ್ಕೆ ಬರುತ್ತಿದ್ದಾರೆ. 19ರಂದು ಯಾದಗಿರಿ ಜಿಲ್ಲೆಯ ಕೊಡೆಕಲ್ ಹಾಗೂ ಕಲಬುರಗಿ ಜಿಲ್ಲೆಯ ಮಳಖೇಡದಲ್ಲಿ ಸರ್ಕಾರಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಕಾರ್ಯಕರ್ತರಿಗೆ ಹುಮ್ಮಸ್ಸು ಹೆಚ್ಚಿಸುವ ರೀತಿ ಯಾವುದಾದರೊಂದು ಸಂಘಟನಾ ಸಮಾವೇಶಕ್ಕೆ ಪ್ರಧಾನಿ ಕರೆತರುವ ಸುಳಿವು ಸಿಕ್ಕಿಲ್ಲ. ಅಧಿವೇಶನ, ರಾಷ್ಟ್ರೀಯ ನಾಯಕರ ಪ್ರವಾಸದ ನೆಪವೊಡ್ಡಿ ಜನಸಂಕಲ್ಪ ಯಾತ್ರೆ, ಸಂಘಟನಾ ಪ್ರವಾಸಗಳನ್ನು ಸಿಎಂ, ರಾಜ್ಯ ನಾಯಕರು ಆಗಾಗ್ಗೆ ಮೊಟಕುಗೊಳಿಸುತ್ತಿದ್ದಾರೆ. ಮೋರ್ಚಾಗಳ ಸಮಾವೇಶಗಳ ಅವಧಿಯನ್ನು ಚೂಯಿಂಗ್ ಗಮ್ಂತೆ ಎಳೆಯಲಾಗುತ್ತಿದ್ದು, ಯಾವುದೂ ರ್ತಾಕ ಅಂತ್ಯ ಕಾಣುತ್ತಿಲ್ಲ. ರಾಜಕೀಯ ಅಧಿಕಾರ ಹಂಚಿಕೆಯಲ್ಲೂ ಕಡೆಗಣನೆ ಬಗ್ಗೆ ಕಾರ್ಯಕರ್ತರಲ್ಲಿ ಬೇಗುದಿಯಿದೆ ಎಂದು ಮೂಲಗಳು ಹೇಳಿವೆ.

ಪ್ರತಿಪಕ್ಷಗಳಲ್ಲಿ ಹೆಚ್ಚಿದ ವೇಗ: ಕಾಂಗ್ರೆಸ್​ನ ಬಸ್ ಯಾತ್ರೆ, ಜೆಡಿಎಸ್ ಪಂಚರತ್ನ ಯಾತ್ರೆಯ ವೇಗ ಹೆಚ್ಚಿಸಿದ್ದು, ಜನರ ಮಾತುಗಳಲ್ಲಿ ಮೊದಲ ಸ್ಥಾನ ಪಡೆದುಕೊಳ್ಳುತ್ತಿವೆ. ಇಂತಹ ಕಾರ್ಯತಂತ್ರದಲ್ಲಿ ಬಿಜೆಪಿ ಹಿಂದೆಬಿದ್ದಿರುವ ತಳಮಳ ತಳಸ್ತರದಲ್ಲಿ ಹೆಚ್ಚತೊಡಗಿದೆ. ಕಾಂಗ್ರೆಸ್ ಆಶ್ವಾಸನೆಗಳ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಮುಗಿಬಿದ್ದಿರುವುದು ಪಕ್ಷಕ್ಕೆ ಪ್ಲಸ್ ಆಗುವ ಬದಲು ನಷ್ಟವೇ ಜಾಸ್ತಿ. ಇದರಿಂದ ಆಡಳಿತ ಪಕ್ಷ ದಿಗಿಲುಗೊಂಡಿದೆ ಎಂಬ ತಪುಪ ಸಂದೇಶ ಸಾರ್ವಜನಿಕರಿಗೆ ರವಾನೆಯಾಗಿದೆ. ಸಂಘಟನೆಯ ಯೋಜನೆಗಳು, ರಾಜಕೀಯ ಕಾರ್ಯಕ್ರಮಗಳ ಹೆಸರು ಕಾಗದದ ಮೇಲೆ ಅಂದ, ಚೆಂದ ಕಾಣುತ್ತಿದ್ದರೂ ಕಾರ್ಯಕ್ಷೇತ್ರದಲ್ಲಿ ನೀರಸವಾಗಿವೆ. ಜನರ ಮನ ಮುಟ್ಟುತ್ತಿಲ್ಲವೆಂದು ಕಾರ್ಯಕರ್ತರು ಗೊಣಗುತ್ತಿದ್ದಾರೆ.

ಕಳೆಗುಂದಿದ ಸಂಘಟನೆ: ಪಕ್ಷದ ರಾಜ್ಯಾಧ್ಯಕ್ಷ ಸಂಘಟನಾ ಪ್ರವಾಸ, ಕಾರ್ಯವೈಖರಿ ಬಗ್ಗೆಯೂ ಕಾರ್ಯಕರ್ತರಲ್ಲಿ ಬೇಸರವಿದೆ. ಅತಿ ಹೆಚ್ಚು ಜಿಲ್ಲೆಗಳಿಗೆ ಭೇಟಿ ನೀಡಿ ಕಡತಕ್ಕೊಂದು ಕಾರ್ಯಕ್ರಮ ರೀತಿ ಓಡಾಡುತ್ತಿದ್ದಾರೆ. ದೀರ್ಘಾವಧಿಯಿಂದ ಪಕ್ಷದ ಚುಕ್ಕಾಣಿ ಹಿಡಿದಿದ್ದಾರೆ. ದೂರದ ಜಿಲ್ಲೆಗಳ ಒಬ್ಬ ಹಿರಿಯ ಮುಖಂಡನ ಹೆಸರಿಡಿದು ಕರೆಯುವಷ್ಟು ಪರಿಚಯ ಬೆಳೆಸಿಕೊಂಡಿಲ್ಲ. ಭಾಷಣವಂತೂ ನಾಟಕೀಯ ಶೈಲಿಯಲ್ಲಿದ್ದು, ಜನರಿಗೆ ಹಿಡಿಸುವುದಿಲ್ಲ. ಅಭಿವೃದ್ಧಿ ಬಿಟ್ಟು ಲವ್ ಜಿಹಾದ್ ಬಗ್ಗೆ ಮಾತನಾಡಿ ಎಂಬ ಅವರ ಚಿಂತನೆಯು ಕಾರ್ಯಕರ್ತರನ್ನು ಗಾಬರಿಗೀಡು ಮಾಡಿದೆ. ಕಾಂಗ್ರೆಸ್​ನ ರಾಜ್ಯ ಉಸ್ತುವಾರಿ ರಣದೀಪ್​ಸಿಂಗ್ ಸುರ್ಜೆವಾಲ ಕರ್ನಾಟಕಕ್ಕೆ ಹೆಚ್ಚು ಕಾಲಾವಕಾಶ ನೀಡಿ, ಇಲ್ಲಿಯೇ ಬಿಡಾರ ಹೂಡಿದ್ದಾರೆ. ಆದರೆ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ರಾಜ್ಯದ ಪಾಲಿಗೆ 'ಫ್ಲೈಯಿಂಗ್ ವಿಸಿಟರ್' ಎಂಬ ಕುಹಕಕ್ಕೆ ಒಳಗಾಗಿದ್ದಾರೆ ಎಂದು ಮೂಲಗಳು ಹೇಳಿವೆ.