ಬೆಳಗಾವಿಯಲ್ಲಿ ಕನ್ನಡ ಬಾವುಟಕ್ಕೆ ಅವಮಾನ | Belagavi |

ಬೆಳಗಾವಿ ಜಿಲ್ಲೆಯ ಘಟಪ್ರಭಾ ಪಟ್ಟಣದಲ್ಲಿ ರಾಜ್ಯೋತ್ಸವದ ನಿಮಿತ್ಯ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು. ಆದರೆ ಕೆಲವು ಸಂಘಟನೆಗಳು ಕನ್ನಡ ಧ್ವಜದ ಮೇಲೆ ಇಂಗ್ಲಿಷ್ ಭಾಷೆಯಲ್ಲಿ ಹಾಗೂ ತಮ್ಮ ಸಂಘಟನೆಗಳ ಹೆಸರನ್ನು ವಿಕಾರವಾಗಿ ಬರೆದು ಅವಮಾನಿಸಿರುವ ಘಟನೆ ನಿನ್ನೆ ನಡೆದಿದೆ. ಕನ್ನಡವೇ ಸತ್ಯ ಕನ್ನಡವೇ ನಿತ್ಯ, ಕನ್ನಡವೇ ನಮ್ಮ ಉಸಿರು ಅಂತ ಕರವೇ ಸಂಘಟನೆಗಳು ಹೇಳಿಕೊಳ್ಳುತ್ತವೆ. ಆದರೆ ಇದಕ್ಕೆ ಅಪವಾದ ಎಂಬಂತೆ ನಿನ್ನೆ ಗೋಕಾಕ್ ತಾಲೂಕಿನ ಘಟಪ್ರಭಾ ಪಟ್ಟಣದಲ್ಲಿ ನಿನ್ನೆ ನಡೆದ ಘಟನೆ ಸಾಕ್ಷಿ. ಶಿಂಧಿಕುರಬೇಟ್ ಗೆಳೆಯರ ಬಳಗ ಹಾಗೂ EDM ಗ್ಯಾಂಗಸ್ಟರ್ ಹೆಸರಿನ ಸಂಘಟನೆಗಳು ಕನ್ನಡ ಬಾವುಟದ ಮೇಲೆ ತಮ್ಮ ಹೆಸರನ್ನು ಬರೆದು ಪಟ್ಟಣದ ತುಂಬ ಮೆರವಣಿಗೆ ನಡೆಸಿದ್ದಾರೆ. ವಿಪರ್ಯಾಸ ಎಂದರೆ ಸ್ಥಳಿಯ ಸರ್ಕಾರಿ ಅಧಿಕಾರಿಗಳು ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ಕನ್ನಡ ಜಾಥಾ ನಡೆದಿದೆ. ಆದರೆ ಯಾವೊಬ್ಬ ಅಧಿಕಾರಿಯೂ ಈ ಅನಾಹುತವನ್ನು ತಡೆಯದೇ ಜಾಣ ಕುರುಡರಂತೆ ವರ್ತಿಸಿದ್ದಾರೆ. ಈ ವಿಷಯ ಕೆಲವು ಕರವೇ ರಕ್ಷಕರ ಗಮನಕ್ಕೆ ಬಂದಾಗ ಕನ್ನಡ ಧ್ವಜಕ್ಕೆ ಅವಮಾನಿಸಿ ಮೆರವಣಿಗೆ ನಡೆಸುವುದು ಬೇಡ ಅಂತ ಪಟ್ಟು ಹಿಡಿದಾಗ ಎರಡು ಗುಂಪುಗಳ ಮದ್ಯೆ ಕೆಲ ಕಾಲ ಮಾತಿನ ಚಕಮಕಿ ನಡೆದು ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿತ್ತು . ಪರಿಸ್ಥಿತಿ ಅರಿತ ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ. ಬೆಳಗಾವಿ ಜಿಲ್ಲಾದ್ಯಂತ ಈ ಸುದ್ದಿ ಹಬ್ಬುತ್ತಿದ್ದಂತೆ ಸುಮಾರು 18 ಕನ್ನಡ ಪರ ಸಂಘಟನೆಗಳು ಕನ್ನಡ ಬಾವುಟಕ್ಜೆ ಅವಮಾನಿಸಿರುವದನ್ನು ಖಂಡಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ದೂರು ನೀಡಿವೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಘಟಪ್ರಭಾ ಪೊಲೀಸರು ತನಿಖೆ ಆರಂಭಿಸಿದ್ದಾರೆ.