ಫೆ.6 ರಿಂದ ಬೆಂಬಲ ಬೆಲೆಯಲ್ಲಿ ಉಂಡೆಕೊಬ್ಬರಿ ಖರೀದಿಗೆ ನೊಂದಣಿ ಪ್ರಾರಂಭ

ಫೆ.6 ರಿಂದ ಬೆಂಬಲ ಬೆಲೆಯಲ್ಲಿ ಉಂಡೆಕೊಬ್ಬರಿ ಖರೀದಿಗೆ ನೊಂದಣಿ ಪ್ರಾರಂಭ

ಚಿತ್ರದುರ್ಗ : ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಎಫ್‍ಎಕ್ಯೂ ಗುಣಮಟ್ಟದ ಉಂಡೆಕೊಬ್ಬರಿಯನ್ನು ಜಿಲ್ಲೆಯಲ್ಲಿ ರೈತರಿಂದ ಖರೀದಿಸಲು ಫೆ. 06 ರಿಂದ ನೊಂದಣಿಯನ್ನು ಪ್ರಾರಂಭಿಸಿ, ಹೊಸದುರ್ಗ ಮತ್ತು ಹಿರಿಯೂರಿನಲ್ಲಿ ಖರೀದಿ ಕೇಂದ್ರ ತೆರೆಯಲು ಅಗತ್ಯ ಸಿದ್ಧತೆ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ.

ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬೆಂಬಲ ಬೆಲೆಯಲ್ಲಿ ಉಂಡೆಕೊಬ್ಬರಿಯನ್ನು ಖರೀದಿಸುವುದಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಗುರುವಾರ ಏರ್ಪಡಿಸಲಾದ ಜಿಲ್ಲಾ ಕಾರ್ಯಪಡೆ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಬೆಂಬಲ ಬೆಲೆ ಮಾರ್ಗಸೂಚಿಯನ್ವಯ ಎಫ್‍ಎಕ್ಯೂ ಗುಣಮಟ್ಟದ ಉಂಡೆ ಕೊಬ್ಬರಿಗೆ ಕೇಂದ್ರ ಸರ್ಕಾರ ಪ್ರತಿ ಕ್ವಿಂಟಾಲ್‍ಗೆ 11,750 ರೂ. ಗಳ ಬೆಂಬಲ ಬೆಲೆ ಘೋಷಿಸಿದ್ದು, ರೈತರಿಂದ ನಾಫೆಡ್ ಸಂಸ್ಥೆ ಮೂಲಕ ಕನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳ ನಿಯಮಿತ ಇವರು ಖರೀದಿ ಕೇಂದ್ರವನ್ನು ಹೊಸದುರ್ಗ ಹಾಗೂ ಹಿರಿಯೂರಿನ ಎಪಿಎಂಸಿ ಆವರಣದಲ್ಲಿ ಖರೀದಿ ಕೇಂದ್ರ ತೆರೆಯಬೇಕು. ಮಾರ್ಗಸೂಚಿಯಂತೆ ಪ್ರತಿ ಎಕರೆಗೆ ಗರಿಷ್ಠ 06 ಕ್ವಿಂ. ನಂತೆ, ಪ್ರತಿ ರೈತರಿಂದ ಗರಿಷ್ಠ 20 ಕ್ವಿಂ. ಉಂಡೆ ಕೊಬ್ಬರಿಯನ್ನು ಖರೀದಿಸಲು ಅವಕಾಶವಿದೆ. ಫ್ರೂಟ್ಸ್ ತಂತ್ರಾಂಶದಲ್ಲಿ ರೈತರು ನೊಂದಣಿ ಮಾಡಿಸಿರಬೇಕು. ಉಂಡೆಕೊಬ್ಬರಿಯನ್ನು ಬೆಂಬಲ ಬೆಲೆಯಲ್ಲಿ ಮಾರಾಟ ಮಾಡಲು ಆಸಕ್ತಿ ಇರುವ ರೈತರು ಫೆ. 06 ರಿಂದ ನೊಂದಣಿ ಮಾಡಿಸಬಹುದಾಗಿದೆ. ರೈತರ ನೊಂದಣಿಗೆ ಮಾರ್ಚ್ 12 ರವರೆಗೆ ಅವಕಾಶ ಕಲ್ಪಿಸಲಾಗಿದೆ. ಹದಿನೈದು ದಿನಗಳ ಒಳಗಾಗಿ ಹೊಸದುರ್ಗ ಹಾಗೂ ಹಿರಿಯೂರಿನಲ್ಲಿ ಉಂಡೆಕೊಬ್ಬರಿ ಖರೀದಿ ಕಾರ್ಯ ಪ್ರಾರಂಭಿಸಬೇಕು. ಖರೀದಿ ಪ್ರಕ್ರಿಯೆ ಆರು ತಿಂಗಳವರೆಗೆ ಅಂದರೆ ಜುಲೈ 27 ರವರೆಗೂ ಮುಂದುವರೆಯಲಿದೆ. ಖರೀದಿಗಾಗಿ ಅಗತ್ಯ ಗ್ರೇಡರ್ ಹಾಗೂ ಇನ್ನಿತರ ವ್ಯವಸ್ಥೆಯನ್ನು ಅಧಿಕಾರಿಗಳು ಕೈಗೊಳ್ಳಬೇಕು. ರೈತರ ನೊಂದಣಿ, ಎಫ್‍ಎಕ್ಯೂ ಗುಣಮಟ್ಟ ಹಾಗೂ ಖರೀದಿ ಪ್ರಕ್ರಿಯೆಯಲ್ಲಿ ರೈತರಿಗೆ ಯಾವುದೇ ಗೊಂದಲ ಉಂಟಾಗದಂತೆ ವ್ಯಾಪಕ ಜಾಗೃತಿ ಮೂಡಿಸಬೇಕು. ರೈತರ ಹೆಸರಿನ ಆಧಾರ್ ಸಂಖ್ಯೆ ಜೋಡಣೆಗೊಂಡ ಬ್ಯಾಂಕ್ ಖಾತೆಗೆ ಮಾತ್ರ ನೇರನಗದು ಪಾವತಿ ಮೂಲಕ ಹಣ ಜಮಾ ಮಾಡಬೇಕು. ರೈತರಿಂದ ಮಾತ್ರ ಉಂಡೆ ಕೊಬ್ಬರಿ ಖರೀದಿಸಬೇಕು, ಇದರಲ್ಲಿ ಯಾವುದೇ ದುರುಪಯೋಗ ಆಗದಂತೆ ಎಚ್ಚರಿಕೆ ವಹಿಸಬೇಕು. ಒಟ್ಟಾರೆ ಬೆಂಬಲ ಬೆಲೆಯಲ್ಲಿ ಉಂಡೆಕೊಬ್ಬರಿ ಖರೀದಿ ಪ್ರಕ್ರಿಯೆ ಸುಗಮವಾಗಿ ನಡೆಯುವಂತೆ ಸಿದ್ಧತೆ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.