ಮಾರ್ಚ್ 1ರಿಂದ ಶಿಕ್ಷಕರು ಕೆಲಸಕ್ಕೆ ಗೈರು

ಚಾಮರಾಜನಗರ: ನೌಕರರ ನ್ಯಾಯಯುತ ಬೇಡಿಕೆಯನ್ನು ಈಡೇರಿಸುವಂತೆ ರಾಜ್ಯ ಸರ್ಕಾರಿ ನೌಕರರು ಬುಧವಾರದಿಂದ (ಮಾರ್ಚ್ 1) ಕರೆ ನೀಡಿರುವ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಕರ್ನಾಟಕ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕ ಬೆಂಬಲ ಸೂಚಿಸಿದ್ದು, ಬುಧವಾರದಿಂದ ಪ್ರಾಥಮಿಕ ಶಾಲಾ ಶಿಕ್ಷಕರು ಕರ್ತವ್ಯಕ್ಕೆ ಹಾಜರಾಗದಿರಲು ನಿರ್ಧರಿಸಿದ್ದಾರೆ.
ನಗರದ ಭುವನೇಶ್ವರಿ ವೃತ್ತದ ಬಳಿ ಇರುವ ಶಿಕ್ಷಕರ ಭವನದಲ್ಲಿ ಸೋಮವಾರ ನಡೆದ ಸಭೆಯಲ್ಲಿ ಮಾತನಾಡಿದ ಸಂಘದ ಜಿಲ್ಲಾ ಅಧ್ಯಕ್ಷ ಕೆ.ಎಸ್.ಮಾದಪ್ಪ, 'ಸರ್ಕಾರಿ ನೌಕರರ ನ್ಯಾಯಯುತ ಬೇಡಿಕೆಗಳಾದ ವೇತನ ಭತ್ಯೆಗಳ ಪರಿಷ್ಕರಣೆ ಹಾಗೂ ಹಳೆ ಪಿಂಚಣಿ ಯೋಜನೆಯನ್ನು ಜಾರಿಗೊಳಿಸುವ ಸಂಬಂಧ ಫೆ.21 ರಂದು ನಡೆದ ರಾಜ್ಯ ಕಾರ್ಯಕಾರಣಿ ಸಭೆಯ ತೀರ್ಮಾನದಂತೆ ಮಾರ್ಚ್ 1 ರಿಂದ ಸರ್ಕಾರಿ ನೌಕರರು ಕರ್ತವ್ಯಕ್ಕೆ ಗೈರು ಹಾಜರಾಗಿ ಅನಿರ್ದಿಷ್ಟಾವಧಿ ಮುಷ್ಕರ ಕೈಗೊಂಡಿದ್ದು, ಈ ಹೋರಾಟಕ್ಕೆ ಶಿಕ್ಷಕರು ಬೆಂಬಲವಾಗಿ ನಿಲ್ಲಬೇಕು' ಎಂದರು.
'ರಾಜ್ಯದಾದ್ಯಂತ ಲಕ್ಷಾಂತರ ನೌಕರರು ಪ್ರತಿಭಟನೆಗೆ ಇಳಿದಿದ್ದಾರೆ. ಇದು ನಮ್ಮ ಅಳಿವು, ಉಳಿವಿನ ಪ್ರಶ್ನೆ. ಈ ಸಂದರ್ಭವನ್ನು ನಾವು ಸದುಪಯೋಗ ಪಡಿಸಿಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ನಮಗೆ ಸಂಕಷ್ಟ ಎದುರಾಗಲಿದೆ. ಯಾವ ಶಿಕ್ಷಕರೂ ಭಯ ಪಡುವ ಅಗತ್ಯವಿಲ್ಲ. ನಮ್ಮ ನ್ಯಾಯಯುತವಾದ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಸಂಘಟಿತವಾಗಿ ಮುಷ್ಕರದಲ್ಲಿ ಭಾಗವಹಿಸೋಣ' ಎಂದರು.
'ಬುಧವಾರದಿಂದ ಶಾಲೆ ಹಾಗೂ ಬಿಸಿಯೂಟ ಸ್ಥಗಿತವಾಗಬೇಕು. ಸರ್ಕಾರಿ ನೌಕರರು ಪ್ರತಿಭಟನೆ ಮಾಡುವಂತಿಲ್ಲ ಎಂಬ ಮಾನದಂಡಗಳು ಅನ್ವಯವಾಗುವಂತೆ ಶಾಲೆಗೆ ಗೈರು ಹಾಜರಾಗಿ, ಸರ್ಕಾರದ ವಿರುದ್ಧ ಭಿನ್ನ ಹೇಳಿಕೆ ನೀಡದೆ ಶಾಂತಿಯುತವಾಗಿ ಈ ಮುಷ್ಕರದಲ್ಲಿ ಶಿಕ್ಷಕ ವರ್ಗ ಭಾಗಿಯಾಗಬೇಕು. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಈ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡಬೇಕು' ಎಂದು ತಿಳಿಸಿದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಮಹಾದೇವಸ್ವಾಮಿ ಮಾತನಾಡಿ, 'ಪ್ರಜಾಪ್ರಭುತ್ವದ ಅಡಿಯಲ್ಲಿ ನ್ಯಾಯಯುತವಾಗಿ ನಮ್ಮ ಬೇಡಿಕೆಗಳ ಈಡೇರಿಕೆಗೆ ಮುಷ್ಕರ ನಡೆಸೋಣ. ಇದು ಎಲ್ಲಾ ಸರ್ಕಾರಿ ಅಧಿಕಾರಿಗಳಿಗೂ ಅನುಕೂಲವಾಗುತ್ತದೆ. ಬುಧವಾರದಿಂದ ಶಾಲೆಯ ಬೀಗಗಳನ್ನು ಶಿಕ್ಷಕರು ತೆಗೆಯುವುದಿಲ್ಲ, ಈ ಮುಷ್ಕರವನ್ನು ಸಂಪೂರ್ಣವಾಗಿ ಯಶಸ್ವಿಗೊಳಿಸೋಣ' ಎಂದರು.
ಜಿಲ್ಲಾ ಖಜಾಂಚಿ ಸಲೀನಾ, ಜಿಲ್ಲಾ ಪದಾಧಿಕಾರಿಗಳಾದ ನಾಗಸುಂದರ, ಮಹಾದೇವಸ್ವಾಮಿ, ಗೀತಾ, ಮಂಜುಳಾ, ತಾಲ್ಲೂಕು ಅಧ್ಯಕ್ಷರಾದ ಲಾಲಿಂಗಸ್ವಾಮಿ, ಶ್ರೀಧರ್, ಗಿರೀಶ್, ಸೋಮಣ್ಣ, ಶಿವಪ್ರಸಾದ್, ಭರತ್ ಭೂಷಣ್, ನಾಗರಾಜ್, ನಂದೀಶ್, ಸಿ.ಮಲ್ಲಿಕಾರ್ಜುನ್ ಸ್ವಾಮಿ, ನಟರಾಜ್ ಹಾಗೂ ಸಂಘದ ಪದಾಧಿಕಾರಿಗಳು, ನಾಮನಿರ್ದೇಶಿತ ಸದಸ್ಯರು ಇದ್ದರು.
ಬೆಂಬಲ ನೀಡುವಂತೆ ಡಿ.ಸಿಗೆ ಮನವಿ
ಈ ಮಧ್ಯೆ, ಬುಧವಾರದಿಂದ ಹಮ್ಮಿಕೊಂಡಿರುವ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಬೆಂಬಲ ನೀಡುವಂತೆ ಸರ್ಕಾರಿ ನೌಕರರ ಜಿಲ್ಲಾ ಘಟಕದ ಪದಾಧಿಕಾರಿಗಳು ಸೋಮವಾರ ಜಿಲ್ಲಾಧಿಕಾರಿ ಡಿ.ಎಸ್.ರಮೇಶ್ ಅವರಿಗೆ ಮನವಿ ಮಾಡಿದ್ದಾರೆ.
ಸಂಘದ ಜಿಲ್ಲಾಧ್ಯಕ್ಷ ಚಂದ್ರಶೇಖರ್ ನೇತೃತ್ವದ ನಿಯೋಗ ಜಿಲ್ಲಾಧಿಕಾರಿಯವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದರು.
'ಸರ್ಕಾರಿ ನೌಕರರ ನ್ಯಾಯಯುತ ಬೇಡಿಕೆಗಳಾದ ವೇತನ-ಭತ್ಯೆಗಳ ಪರಿಷ್ಕರಣೆ ಹಾಗೂ ಹಳೆ ಪಿಂಚಣಿ ಯೋಜನೆಯನ್ನು ಜಾರಿಗೊಳಿಸುವ ಸಂಬಂಧ ಫೆ.21 ರಂದು ನಡೆದ ರಾಜ್ಯ ಕಾರ್ಯರಣಿ ಮತ್ತು ವೃಂದ ಸಂಘಗಳ ಸಭೆಯಲ್ಲಿ ಕೈಗೊಂಡ ಸರ್ವಾನುಮತದ ತೀರ್ಮಾನದಂತೆ ರಾಜ್ಯದ ಸಮಸ್ತ ಸರ್ಕಾರಿ ಅಧಿಕಾರಿಗಳು ಹಾಗೂ ನೌಕರರು ಬುಧವಾರ ದಿಂದ ಕರ್ತವ್ಯಕ್ಕೆ ಗೈರುಹಾಜರಾಗಿ ಅನಿರ್ದಿಷ್ಟಾವದಿ ಮುಷ್ಕರವನ್ನು ಯಶಸ್ವಿಗೊಳಿಸಲು ಬೆಂಬಲ ನೀಡಬೇಕು' ಎಂದರು.
ಎಸ್‌ಪಿ, ಜಿಲ್ಲಾ ಪಂಚಾಯಿತಿ ಸಿಇಒ, ಅಬಕಾರಿ ಉಪ ಆಯುಕ್ತ ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳಿಗೂ ಮನವಿ ಸಲ್ಲಿಸಿದ್ದೇವೆ ಎಂದು ಹೇಳಿದರು.
ಸಂಘದ ಪ್ರಧಾನ ಕಾರ್ಯದರ್ಶಿ ಮಹದೇವಸ್ವಾಮಿ, ಖಜಾಂಚಿ ಮಹದೇವಯ್ಯ, ರಾಜ್ಯ ಪರಿಷತ್ ಸದಸ್ಯರಾದ ಮಲ್ಲಿಕಾರ್ಜುನ್ ಕುಂಟೋಜಿ, ಗೌರವಾಧ್ಯಕ್ಷ ಶಿವಮೂರ್ತಿ, ಸದಸ್ಯರಾದ ಸಿದ್ದರಾಜು, ಮಲ್ಲಿಕಾರ್ಜುನ್, ಕೃಷ್ಣಮೂರ್ತಿ, ಶೈಲೇಂದ್ರ, ಯೋಗೇಶ್‌ಗೌಡ, ಸೈಮನ್, ಹಾಗೂ ಸಂಘದ ಪದಾಧಿಕಾರಿಗಳು ಇದ್ದರು.