ಜಾಲತಾಣ ಮೂಲಕ ರಂಗಗೀತೆ

ಜಾಲತಾಣ ಮೂಲಕ ರಂಗಗೀತೆ
ಧಾರವಾಡ: ಕೋವಿಡ್ ಮಹಾಮಾರಿಯಿಂದಾಗಿ ನಿಂತುಹೋಗಿದ್ದ ರಂಗಾಯಣದ ಚಟುವಟಿಕೆಗಳು ಇದೀಗ ವಿನೂತನ ಪ್ರಯತ್ನದಿಂದಾಗಿ ರಂಗಾಸಕ್ತರನ್ನು ತಣಿಸಲು ಸಜ್ಜಾಗಿದೆ ಎಂದು ರಂಗಾಯಣದ ನಿರ್ದೇಶಕ ರಮೇಶ ಪರವಿನಾಯ್ಕರ ಹೇಳಿದರು.
ರಂಗಾಯಣದ ಸುವರ್ಣ ಸಾಂಸ್ಕೃತಿಕ ಸಮುಚ್ಛಯ ಸಭಾಭವನದಲ್ಲಿ ಫೇಸ್‌ಬುಕ್ ಮೂಲಕ ಇಂದು ಹಮ್ಮಿಕೊಂಡಿದ್ದ ವಿಶ್ವ ರಂಗಸಂಗೀತ ಹಾಗೂ ಯೋಗ ದಿನಾಚರಣೆಯನ್ನು ಉದ್ದೇಶಿಸಿ, ಅವರು ಮಾತನಾಡಿದರು.
ಕೋವಿಡ್ ನಿಯಂತ್ರಣದ ಲಾಕ್‌ಡೌನ್ ಹಿನ್ನೆಲೆ ಕಳೆದ ಎರಡು ತಿಂಗಳುಗಳಿಂದ ಚಟುವಟಿಕೆಗಳು ಸ್ಥಗಿತಗೊಂಡಿದ್ದವು. ಈಗ ರಂಗಾಯಣದ ಫೇಸ್‌ಬುಕ್‌ ಖಾತೆಯ ನೇರಪ್ರಸಾರದಲ್ಲಿ ರಂಗಸಂಗೀತ ಕಾರ್ಯಕ್ರಮವನ್ನು ಆಯೋಜಿಸುವ ಮೂಲಕ ರಂಗಾಸಕ್ತರಿಗೆ ಸಂಗೀತದ ಸವಿಯನ್ನು ನೀಡಲಾಗುತ್ತಿದೆ ಎಂದು ಹೇಳಿದರು.
ಸಿ. ಬಸವಲಿಂಗಯ್ಯ ರಚನೆಯ ಅನಿಮಲ್ ಫಾರ್ಮ ನಾಟಕದ "ದುಡಿಯಿರಿ ಮೈ ಮುರಿದು ದುಡಿಯಿರಿ", ಸಾಹೇಬರು ಬರುತ್ತಾರೆ ನಾಟಕದ "ಬರ್ತಾರಂತೆ ಹುಷಾರ್‌" ಪ್ರಸನ್ನ ರಚನೆಯ ಆಚಾರ್ಯ ಪ್ರಹಸನ ನಾಟಕದ "ಎಂಥಾ ಸುಖವಲ್ತೆ ಕಾಣೆ.. ನೀ ನಿರುವಲ್ಲಿ", ಮಂಜುನಾಥ ಬೆಳಕೆರೆ ರಚಿಸಿದ ಕುಹೂ ಕುಹೂ ಕೋಗಿಲೆ ನಾಟಕದ "ಆದಿ ದೇವಾ ದಿ ದೇವಾ" ಎನ್ .ಎಸ್ .ಲಕ್ಷ್ಮೀನಾರಾಯಣ ಭಟ್ ರಚಿಸಿ, ಬಿ,ವ್ಹಿ, ಕಾರಂತರು ಸಂಯೋಜಿಸಿರುವ ಇಸ್ಪೀಟ್ ರಾಜಾ ನಾಟಕದ "ಹೇಳು ಸಖಿ ಹೇಳೆಯಾ" ಸೇರಿದಂತೆ ಪೌರಾಣಿಕ ಹಾಗೂ
ಆಧುನಿಕ ರಂಗಗೀತೆಗಳಿಗೆ ರಾಘವ ಕಮ್ಮಾರ ಸಂಗೀತ ಸಂಯೋಜಿಸಿದ್ದರು.ಅನಿಲ ಮೇತ್ರಿ ತಬಲಾ ಸಾಥ್ ನೀಡಿದರು. ರಂಗಾಯಣ ರೆಪರ್ಟರಿ ಕಲಾವಿದರು ಕಾರ್ಯಕ್ರಮ ಪ್ರಸ್ತುತಪಡಿಸಿ, ಸಂಗೀತ ಪ್ರಿಯರ ಮನತಣಿಸಿದರು.
ಈ ಸಂದರ್ಭದಲ್ಲಿ ಸಿಬ್ಬಂದಿಗಳಾದ ಕೇಶವ ಬಡಿಗೇರ, ಯಮನಪ್ಪ ಜಾಲಗಾರ,ಫಕ್ಕೀರಪ್ಪ ಮಾಧನಭಾವಿ ಸೇರಿದಂತೆ ಇತರರು ಇದ್ದರು.