ಡಿ.3ರಂದು ಬೆಂಗಳೂರಿನಲ್ಲಿ ಗಣಿ ಹೂಡಿಕೆದಾರರ ಸಮಾವೇಶ : ಸಚಿವ ಪ್ರಹ್ಲಾದ್ ಜೋಶಿ

ಡಿ.3ರಂದು ಬೆಂಗಳೂರಿನಲ್ಲಿ ಗಣಿ ಹೂಡಿಕೆದಾರರ ಸಮಾವೇಶ : ಸಚಿವ ಪ್ರಹ್ಲಾದ್ ಜೋಶಿ

ಬೆಂಗಳೂರು: ಇದೇ ತಿಂಗಳ 3ರಂದು ಬೆಂಗಳೂರಿನಲ್ಲಿ ಹೂಡಿಕೆದಾರರ ಸಮಾವೇಶ ನಡೆಯಲಿದೆ ಎಂದು ಕೇಂದ್ರ ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.

ಮುಂಬೈನಲ್ಲಿ ಇಂದು ಕಲ್ಲಿದ್ದಲು ಹೂಡಿಕೆದಾರರ ಸಮಾವೇಶದಲ್ಲಿ ಮಾತನಾಡಿದ ಅವರು, ಮುಂಬೈನಲ್ಲಿ‌  ನಡೆದ ಕಲ್ಲಿದ್ದಲು ಹೂಡಿಕೆದಾರರ ಸಮಾವೇಶ ಯಶಸ್ವಿಯಾಗಿದ್ದು, ಇದೇ ಶನಿವಾರ ಬೆಂಗಳೂರಿನಲ್ಲಿ ಗಣಿಗಾರಿಕೆ ಕುರಿತಂತೆ ಹೂಡಿಕೆದಾರರ ಸಮಾವೇಶ ಆಯೋಜಿಸಲಾಗಿದೆ. ಆಸಕ್ತರು ಸಮಾವೇಶದಲ್ಲಿ ಭಾಗವಹಿಸುವಂತೆ ಕೇಂದ್ರ ಸಚಿವ ಹೂಡಿಕೆದಾರರಿಗೆ ಆಹ್ವಾನಿಸಿದ್ದಾರೆ. ಮುಂಬೈ, ಬೆಂಗಳೂರಿನ ಹೂಡಿಕೆದಾರರ ಸಮಾವೇಶಗಳು ಭಾರತದಲ್ಲಿನ ಗಣಿಗಾರಿಕೆ ಕ್ಷೇತ್ರದ ಸಾಮರ್ಥ್ಯವನ್ನು ಅರಿತುಕೊಳ್ಳಲು ಸಹಾಯ ಮಾಡುತ್ತದೆ ಎಂದು ಇದೇ ವೇಳೆ ಅಭಿಪ್ರಾಯಪಟ್ಟರು.

ವಾಣಿಜ್ಯ ಗಣಿ ಹರಾಜು ಮತ್ತು ದೇಶದ ಗಣಿಗಾರಿಕೆ ವಲಯದಲ್ಲಿ ವಿವಿಧ ಅವಕಾಶಗಳ ಕುರಿತು ಸಮಾವೇಶವನ್ನು ನಡೆಸಲಾಗುತ್ತಿದೆ. ಸಮಾರಂಭದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಭಾಗವಹಿಸಲಿದ್ದು, ವಿವಿಧ ವಾಣಿಜ್ಯ ಗಣಿಗಳ ಮೆಗಾ ಹರಾಜು ಕುರಿತು ಹೂಡಿಕೆದಾರರಿಗೆ ಮಾಹಿತಿ ಒದಗಿಸುವುದಾಗಿ ತಿಳಿಸಿದರು.

ಭಾರತವು ವಿಶ್ವದಲ್ಲಿ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗಳಲ್ಲಿ ಒಂದಾಗಿದೆ ಮತ್ತು ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸಲು ವಿದ್ಯುತ್ ಉತ್ಪಾದನೆ ಅವಶ್ಯಕವಾಗಿದೆ. ವಿದ್ಯುತ್ ಉತ್ಪಾದನೆಗೆ ಬೇಕಾದ ಕಲ್ಲಿದ್ದಲು ಉತ್ಪಾದನೆ ಹೆಚ್ಚಳಕ್ಕೆ ವಿಶೇಷ ಒತ್ತು ನೀಡಲಾಗುತ್ತಿದೆ. ಮುಂಬೈನಲ್ಲಿ ನಡೆದ ಸಮಾವೇಶದಲ್ಲಿ ಮಹಾರಾಷ್ಟ್ರಕ್ಕೆ 13 ಕಲ್ಲಿದ್ದಲು ಬ್ಲಾಕ್ಸ್‌ಗಳನ್ನು ನೀಡಲಾಗಿದೆ. ಇದರಲ್ಲಿ 5 ಗಣಿ ಬ್ಲಾಕ್ಸ್‌ಗಳು ಸಂಪೂರ್ಣವಾಗಿ ಅನ್ವೇಷಿಸಲಾಗಿದೆ ಎಂದು ಹೇಳಿದರು.

ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢದ ಉಷ್ಣ ವಿದ್ಯುತ್ ಸ್ಥಾವರಗಳಿಗೆ ಕಲ್ಲಿದ್ದಲು ಬಳಕೆಯನ್ನು ಇನ್ನಷ್ಟು ಸುಧಾರಿಸುವ ಮಾರ್ಗಗಳ ಅಧಿಕಾರಿಗಳೊಂದಿಗೆ ಇದೇ ವೇಳೆ ಜೋಶಿ ಸಭೆ ನಡೆಸಿದರು. ಕಲ್ಲಿದ್ದಲು ವ್ಯಾಗನ್‌ಗಳ ಇಳಿಸುವಿಕೆಯ ಸಮಯವನ್ನು ಸುಧಾರಿಸಲು ಒತ್ತು ಸೇರಿದಂತೆ, ದೀರ್ಘಾವಧಿಯ ಕಲ್ಲಿದ್ದಲು ದಾಸ್ತಾನು ನಿರ್ಮಿಸಲು ಆರ್‌ಎಸ್‌ಆರ್ (ರೈಲ್ ಕಮ್ ಸೀ) ಮೋಡ್ ಅನ್ನು ಅನ್ವೇಷಿಸಲು ಸೂಚನೆ ನೀಡಿದರು. ಜೊತೆಗೆ ರೋಡ್ ಮೋಡ್ ಮತ್ತು ರೋಪ್‌ವೇ ಮೂಲಕ 40,000 TPD ಕಲ್ಲಿದ್ದಲನ್ನು ಎತ್ತಬಹುದಾಗಿದ್ದು, ಈ ನಿಟ್ಟಿನಲ್ಲಿ ಕಾರ್ಯನಿರತರಾಗುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.