ಕಾಬೂಲ್ ಸ್ಪೋಟದ ಸಾವಿನ ಸಂಖ್ಯೆ 169ಕ್ಕೆ ಏರಿಕೆ

ಕಾಬೂಲ್ ಸ್ಪೋಟದ ಸಾವಿನ ಸಂಖ್ಯೆ 169ಕ್ಕೆ ಏರಿಕೆ

ವಾಷಿಂಗ್ಟನ್, ಆ.28- ಅಮೆರಿಕಾದ 13 ಮಂದಿ ಯೋಧರು ಸೇರಿದಂತೆ 169 ಮಂದಿಯ ಹತ್ಯೆಗೆ ಕಾರಣವಾದ ಕಾಬೂಲ್ ಸ್ಫೋಟದ ಮಾನವ ಬಾಂಬರ್ ಕನಿಷ್ಟ 25 ಕೆಜಿ ಸ್ಫೋಟಕವನ್ನು ತನ್ನೊಂದಿಗೆ ತೆಗೆದುಕೊಂಡು ಹೋಗಿದ್ದ ಎಂದು ಅಮೆರಿಕಾದ ಅಧಿಕಾರಿಗಳು ತಿಳಿಸಿದ್ದಾರೆ. ಸಾಮಾನ್ಯವಾಗಿ ಮಾನವ ಬಾಂಬರ್‍ಗಳು ಐದರಿಂದ 10 ಕೆಜಿ ಸ್ಫೋಟವನ್ನು ತೆಗೆದುಕೊಂಡು ಹೋಗುತ್ತಾರೆ. ಆದರೆ ಕಾಬೂಲ್‍ನಲ್ಲಿ ಸ್ಫೋಟಿಸಿಕೊಂಡ ಬಾಂಬರ್‍ಗಳು ತಮ್ಮೊಂದಿಗೆ 25 ಕೆಜಿಗೂ ಹೆಚ್ಚಿನ ಸ್ಫೋಟಕವನ್ನು ತೆಗೆದುಕೊಂಡು ಹೋಗಿದ್ದರು ಎಂದು ಅಮೆರಿಕಾದ ಅಧಿಕಾರಿಗಳು ವಿವರಿಸಿದ್ದಾರೆ.

ಜನ ಸಂದಣಿಯ ನಡುವೆ ಭಾರೀ ಪ್ರಮಾಣದ ಸ್ಫೋಟ ಬಳಸಿದ್ದರಿಂದಾಗಿ ಸಾವು-ನೋವಿನ ಸಂಖ್ಯೆ ಹೆಚ್ಚಾಗಿದೆ ಎಂದು ವಿವರಿಸಲಾಗಿದೆ. ಆಫ್ಘಾನಿಸ್ತಾನದಲ್ಲಿ ಆತಂಕಕಾರಿ ಸನ್ನಿವೇಶದ ಹೊರತಾಗಿಯೂ ಅಮೆರಿಕಾ ಆಗಸ್ಟ್ 31ರ ಒಳಗೆ ತನ್ನ ಸೇನೆಯನ್ನು ವಾಪಾಸ್ ಪಡೆಯಲಿದೆ ಎಂದು ಸ್ಪಷ್ಟಪಡಿಸಲಾಗಿದೆ. ಇದು ಶತ್ರುಗಳನ್ನು ಹಿಮ್ಮೆಟ್ಟಿಸುವ, ಮುಂದಡಿ ಇಡುವ ಹಾಗೂ ಬೆದರಿಕೆಯನ್ನು ಮಣಿಸುವ ಸಮಯ ಎಂದು ನಿತ್ಯದ ಪತ್ರಿಕಾಗೋಷ್ಠಿಯಲ್ಲಿ ಜೆನ್ ಪಕ್ಸಿ ಹೇಳಿದ್ದಾರೆ.

ತಾಲಿಬಾನಿಗಳ ಬೆದರಿಕೆ ಹೊರತಾಗಿಯೂ ನಾವು ನಮ್ಮ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ. ಈ ಮೊದಲು ನಾವು ನಿಗದಿ ಪಡಿಸಿದಂತೆ ಆಗಸ್ಟ್ 31ರ ಒಳಗೆ ಸೇನೆಯನ್ನು ಹಿಂಪಡೆಯುತ್ತೇವೆ ಎಂದು ಸ್ಪಷ್ಟ ಪಡಿಸಿದ್ದಾರೆ. ಅನಿಶ್ಚಿತತೆಗೆ ಸಿಲುಕಿದ್ದ ಆಫ್ಘಾನಿಸ್ತಾನದಿಂದ ಈವರೆಗೂ 1.05 ಲಕ್ಷ ಮಂದಿಯನ್ನು ಸ್ಥಳಾಂತರಿಸಲಾಗಿದೆ. ಪ್ರಾನ್ಸ್ ಕೂಡ ಶುಕ್ರವಾರ ತನ್ನ 3 ಸಾವಿರ ಮಂದಿಯನ್ನು ಸ್ಥಳಾಂತರಿಸಿದೆ. ತಾಲಿಬಾನಿಗಳ ಆಡಳಿತಕ್ಕೆ ಬೆಂಬಲ ನೀಡಿರುವ ಟರ್ಕಿ ಕೂಡ ತನ್ನ ಪ್ರಜೆಗಳನ್ನು ಸ್ಥಳಾಂತರಿಸುತ್ತಿದೆ.

ಆಫ್ಘಾನಿಸ್ತಾನದಿಂದ ಸ್ಥಳೀಯರು ಹಾಗೂ ವಿದೇಶಿ ಪ್ರಜೆಗಳ ಸ್ಥಳಾಂತರಕ್ಕೆ ವಿರೋಧ ವ್ಯಕ್ತ ಪಡಿಸಿ ಇಸ್ಲಾಮಿಕ್ ಸ್ಟೇಟ್ ಖೂರಸನ್ ಸಂಘಟನೆ ಕಾಬೂಲ್‍ನಲ್ಲಿ ಸರಣಿ ಸ್ಪೋಟ ನಡೆಸಿತ್ತು. ಅದರಲ್ಲಿ 169 ಮಂದಿ ಮೃತಪಟ್ಟಿದ್ದು, ನೂರಾರು ಮಂದಿ ಗಾಯಗೊಂಡಿದ್ದಾರೆ. ಆದಗ್ಯೂ ನ್ಯಾಟೋ ಪಡೆಗಳು ಬಿಗಿ ಭದ್ರತೆಯಲ್ಲಿ ಸ್ಥಳಾಂತರ ಪ್ರಕ್ರಿಯೆಯನ್ನು ಮುಂದುವರೆಸಿವೆ.