ಭಾರೀ ವಿವಾದಕ್ಕೆ ಕಾರಣವಾಯ್ತು ಕಾಂತಾರ ಚಿತ್ರ ಕುರಿತ ನಟ ಚೇತನ್ ಹೇಳಿಕೆ

ಬೆಂಗಳೂರು,ಅ.19- ಕರ್ನಾಟಕ ಮಾತ್ರವಲ್ಲದೆ ದೇಶ ವಿದೇಶದಲ್ಲೂ ಭರ್ಜರಿ ಸದ್ದು ಮಾಡುತ್ತಿರುವ ರಿಷಬ್ ಶೆಟ್ಟಿ ಅವರ ನಟನೆ ಹಾಗೂ ನಿರ್ದೇಶನದ ಕಾಂತಾರ ಚಿತ್ರಕ್ಕೆ ನಟ ಚೇತನ್ ಅಹಿಂಸಾ ಮಾಡಿರುವ ಟ್ವೀಟ್ ಭಾರೀ ವಿವಾದವನ್ನು ಸೃಷ್ಟಿಸಿದೆ.
ಕಾಂತಾರ ಚಿತ್ರದ ಭೂತಕೋಲ ಹಿಂದೂ ಸಂಸ್ಕøತಿಗೆ ಸೇರಿಲ್ಲ ಎಂದು ಟ್ವೀಟ್ ಮಾಡಿರುವುದು ಆಕ್ರೋಶಕ್ಕೆ ಕಾರಣವಾಗಿದೆ.
ತಮ್ಮ ಟ್ವೀಟ್‍ನಲ್ಲಿ ಚೇತನ್ ಅವರು, ನಮ್ಮ ಕನ್ನಡದ ಚಲನಚಿತ್ರ ಕಾಂತಾರವು ರಾಷ್ಟ್ರಮಟ್ಟದಲ್ಲಿ ಸದ್ದು ಮಾಡುತ್ತಿರುವುದು ಖುಷಿಯ ಸಂಗತಿ. ಭೂತಕೋಲವು ಹಿಂದೂ ಸಂಸ್ಕೃತಿಗೆ ಸೇರುತ್ತದೆ ಎಂದು ನಿರ್ದೇಶಕ ರಿಷಬ್ ಶೆಟ್ಟಿಯವರು ಹೇಳಿದ್ದಾರೆ.
ಇದು ನಿಜವಲ್ಲ. ನಮ್ಮ ಪಂಬದ/ನಲಿಕೆ/ಪರವರ ಬಹುಜನ ಸಂಪ್ರದಾಯಗಳು, ವೈದಿಕ-ಬ್ರಾಹ್ಮಣ್ಯದ ಹಿಂದೂ ಧರ್ಮಕ್ಕಿಂತ ಹಿಂದಿನಿಂದ ಇರುವವು. ಮೂಲನಿವಾಸಿ ಸಂಸ್ಕೃತಿಗಳನ್ನು ಪರದೆಯ ಮೇಲೆಯಾಗಲಿ, ಅದರಾಚೆಯಾಗಲಿ, ಸತ್ಯ ಸಂಗತಿಗಳೊಂದಿಗೆ ತೋರಿಸಬೇಕೆಂದು ನಾವು ಕೇಳುತ್ತೇವೆ ಎಂದು ತಮ್ಮ ಫೇಸ್‍ಬುಕ್ ಪುಟದಲ್ಲಿ ಬರೆದುಕೊಂಡಿದ್ದಾರೆ.
ಆದರೆ ಚೇತನ್ ಅವರ ಈ ಟ್ವೀಟ್‍ಗೆ ನೆಟ್ಟಿಗರು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಅನೇಕರು ಪ್ರತಿಕ್ರಿಯೆ ನೀಡಿದ್ದು, ಒಂದು ಚಿತ್ರಕ್ಕೆ ಜಾತಿ, ಧರ್ಮ ಲೇಪ ಮಾಡುವುದು ಚೇತನ್‍ನಂತವರಿಗೆ ಮಾತ್ರ ಬರುತ್ತದೆ ಎಂದು ತಿರುಗೇಟು ಕೊಟ್ಟಿದ್ದಾರೆ.
ಕಾಂತಾರ ಸಿನಿಮಾ ದೇಶಾದ್ಯಂತ ಜನಪ್ರಿಯತೆ ಗಳಿಸಿದೆ. ಸಿನಿಮಾವನ್ನು ಸ್ಟಾರ್ ಕಲಾವಿದರು ಕೂಡ ನೋಡಿದ್ದಾರೆ, ನೋಡಲು ಕಾಯುತ್ತಿದ್ದಾರೆ. ಬಾಲಿವುಡ್ ಖ್ಯಾತ ನಟಿ ಕಂಗನಾ ರಣಾವತ್ ಕೂಡ ಕಾಂತಾರ ಸಿನಿಮಾ ನೋಡುವುದಾಗಿ ಹೇಳಿದ್ದಾರೆ.