"ವಾರೆ ನೋಟ" ವೈರಲ್ ವಿಡಿಯೋ ಬಗ್ಗೆ ನಗುತ್ತಲೇ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ

ಬಾಗಲಕೋಟೆ: ಇತ್ತೀಚೆಗೆ ನಡೆದ 'ನಾ ನಾಯಕಿ' ಕಾರ್ಯಕ್ರಮ ಮುಕ್ತಾಯವಾಗುತ್ತಿದ್ದಂತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಫೇಸ್ಬುಕ್ ಸ್ಟೋರಿ, ವಾಟ್ಸ್ಆಯಪ್ ಸ್ಟೇಟಸ್ ಹಾಗೂ ಇನ್ಸ್ಟಾಗ್ರಾಂ ಸ್ಟೋರಿ… ಎಲ್ಲಿ ನೋಡಿದರು ಸಿದ್ದರಾಮಯ್ಯ ಅವರ ವಿಡಿಯೋ ಟ್ರೋಲ್ ಆಗಿ ಹರಿದಾಡುತ್ತಿತ್ತು.
ಇದೀಗ ಈ ವೈರಲ್ ವಿಡಿಯೋ ವಿಚಾರವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ. ಬಾಗಲಕೋಟೆಯಲ್ಲಿ ಮಾತನಾಡುತ್ತಾ, ಟ್ರೋಲ್ ಆಗಿರುವ ವಿಡಿಯೋ ಬಗ್ಗೆ ಮಾತನಾಡುತ್ತಾ ಚರ್ಚೆ ಮಾಡಬಾರದು. ಸಮಾಜಕ್ಕೆ ಯಾವುದು ಅಗತ್ಯ ಇದೆಯೋ ಅದರ ಬಗ್ಗೆ ಚರ್ಚೆ ಮಾಡಬೇಕು. ನನ್ನ ಬಗ್ಗೆ ಋಣಾತ್ಮಕ ವಿಚಾರಗಳನ್ನೇ ಹಬ್ಬಿಸಲು ಕೆಲವರು ಪ್ರಯತ್ನಿಸುತ್ತಿದ್ದಾರೆ ಎಂದು ಪ್ರತಿಕ್ರಿಸಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಕಾಂಗ್ರೆಸ್ ಮಹಿಳಾ ಸಮಾವೇಶದಲ್ಲಿ ವೇದಿಕೆ ಮೇಲಿಂದ ಕೆಳಗೆ ಇಳಿಯುವಾಗ ಸಿದ್ದರಾಮಯ್ಯ ಅವರು ಕಾರ್ಯಕ್ರಮ ನಿರೂಪಣೆ ಮಾಡುತ್ತಿದ್ದ ಕಾಂಗ್ರೆಸ್ ವಕ್ತಾರೆ ಲಾವಣ್ಯ ಬಲ್ಲಾಳ್ ಅವರನ್ನು ವಾರೆಗಣ್ಣಿಂದ ನೋಡಿದ್ದರು. ನಿರೂಪಕಿಯನ್ನು ನೋಡಿಕೊಂಡೇ ವೇದಿಕೆಯಿಂದ ಹೊರ ನಡೆದ ಸಿದ್ದರಾಮಯ್ಯ ಅವರ ವಿಡಿಯೋ ರೀಲ್ಸ್ ಮುಖಾಂತರ ಸಾಕಷ್ಟು ವೈರಲ್ ಆಗಿತ್ತು.
'ಸಾಮಾಜಿಕ ಜಾಲತಾಣಗಳ ಬಳಕೆಯಲ್ಲಿ ಎಲ್ಲರಿಗೂ ಸ್ವಾತಂತ್ರ್ಯ ಇದೆ. ನಿಮ್ಮ ಸ್ವಾತಂತ್ರ್ಯಕ್ಕೆ ನಾನೇಕೆ ಅಡ್ಡಿ ಪಡಿಸಲಿ. ನನ್ನ ಸ್ವಾಭಿಮಾನಕ್ಕೆ, ಅವಮಾನ ಮಾಡಿದ್ರೆ ಪ್ರಶ್ನೆ ಮಾಡುವ ಅಧಿಕಾರ ನನಗಿದೆ. ಉದ್ದೇಶಪೂರ್ವಕವಾಗಿ ಮಾನಹಾನಿ ಮಾಡಿದರೆ ಕೋರ್ಟ್ನಲ್ಲಿ ಪ್ರಶ್ನೆ ಮಾಡೋ ಅಧಿಕಾರ ಇದೆ' ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ವೈರಲ್ ಆಗಿರುವ ವಿಡಿಯೋ ಬಗ್ಗೆ ಕಾಂಗ್ರೆಸ್ ವಕ್ತಾರೆ ಲಾವಣ್ಯ ಬಲ್ಲಾಳ್ ಪ್ರತಿಕ್ರಿಯಿಸಿ, ಸಿದ್ದರಾಮಯ್ಯ ಅವರು ವೇದಿಕೆ ಬಂದಾಗ ನಾನು ನಿರೂಪಣೆ ಮಾಡುತ್ತಿದ್ದೆ. ಈ ವೇಳೆ ಸಿದ್ದರಾಮಯ್ಯ ಅವರನ್ನು ತುಂಬಾ ಜನ ಸುತ್ತುವರಿದಿದ್ದರೂ ನಿರೂಪಣೆ ಯಾರು ಮಾಡುತ್ತಿದ್ದಾರೆ ಎಂಬ ಕುತೂಹಲದಿಂದ ನನ್ನನ್ನು ನೋಡಿದ್ದಾರೆ. ನೋಡಿದ ಬಳಿಕ ಇವಳೇನಾ ಅಂತಾ ಅಲ್ಲಿಂದ ಹೊರಟರು ಎಂದು ಸ್ಪಷ್ಟನೆ ನೀಡಿದ್ದಾರೆ.