ಎಐಸಿಸಿ ಅಧ್ಯಕ್ಷಗಿರಿ ಚುನಾವಣೆ ಫಲಿತಾಂಶ ನಾಳೆಖರ್ಗೆ ಗೆಲುವು ನಿರೀಕ್ಷಿತ; ದಿಲ್ಲಿಗೆ ಹಾರಿದ ಕಾಂಗ್ರೆಸ್ ಮುಖಂಡರು

ಕಲಬುರಗಿ: ಅ.18:ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ನಿನ್ನೆ ನಡೆದ ಚುನಾವಣೆಯಲ್ಲಿ ಹಿರಿಯ ಮುತ್ಸದ್ಧಿ ಮಲ್ಲಿಕಾರ್ಜುನ ಖರ್ಗೆಯವರು ಗೆಲ್ಲುವ ಬಹುತೇಕ ಲಕ್ಷಣಗಳು ಗೋಚರಿಸುತ್ತಿರುವ ಹಿನ್ನೆಲೆಯಲ್ಲಿ ನಾಳೆ ಅವರಿಗೆ ಶುಭಾಶಯಗಳನ್ನು ಕೋರಲು ಕಲಬುರಗಿ ಜಿಲ್ಲೆಯ ಬಹುತೇಕ ಕಾಂಗ್ರೆಸ್ ಮುಖಂಡರು ದಿಲ್ಲಿಗೆ ತೆರಳಿದ್ದಾರೆ.
ಇದೇ ಮೊದಲ ಬಾರಿಗೆ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ನೆಹರೂ-ಗಾಂಧಿ ಕುಟುಂಬವನ್ನು ಹೊರತುಪಡಿಸಿದ ವ್ಯಕ್ತಿಯೊಬ್ಬರು ಅಧ್ಯಕ್ಷರಾಗಿ ಹೊರಹೊಮ್ಮುತ್ತಿರುವುದು ಒಂದೆಡೆಯಾದರೆ, ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಕಳೆದ 50 ವರ್ಷಗಳಿಂದ ಸಂಘಟಿಸುತ್ತಾ ಬಂದಿರುವ ಖರ್ಗೆ ಪಾಲಿಗೆ ಅಧ್ಯಕ್ಷ ಸ್ಥಾನ ಒಲಿಯುವುದು ಖಚಿತ ಎಂದು ಕಾಂಗ್ರೆಸ್ ಉನ್ನತ ಮೂಲಗಳು ವಿಶ್ವಾಸ ವ್ಯಕ್ತಪಡಿಸುತ್ತಿವೆ. ಈ ಹಿನ್ನೆಲೆಯಲ್ಲಿ ಮಲ್ಲಿಕಾರ್ಜುನ ಖರ್ಗೆಯವರನ್ನು ದಿಲ್ಲಿಯಲ್ಲಿ ಭೇಟಿ ಮಾಡಿ ಅವರಿಗೆ ಗೆಲುವಿನ ಶುಭಾಶಯಗಳನ್ನು ಸಲ್ಲಿಸಲು ದಿಲ್ಲಿಗೆ ಪ್ರಯಾಣಿಸುತ್ತಿರುವುದಾಗಿ ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಕಲಬುರಗಿ ಮಹಾನಗರ ಪಾಲಿಕೆಯ ಮಾಜಿ ಮೇಯರ್ ಶರಣಕುಮಾರ್ ಮೋದಿ ಹೇಳುತ್ತಾರೆ.
ಈ ಮಧ್ಯೆ, ಕಲಬುರಗಿ ಜಿಲ್ಲೆಯಿಂದ ಮಾಜಿ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಈಗಾಗಲೇ ದಿಲ್ಲಿ ತಲುಪಿದ್ದು, ಇಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಜೇವರ್ಗಿ ಶಾಸಕ ಡಾ.ಅಜಯ್‍ಸಿಂಗ್, ಅಫಜಲಪುರ ಶಾಸಕ ಎಂ.ವೈ.ಪಾಟೀಲ್, ವಿಧಾನ ಪರಿಷತ್ ಮಾಜಿ ಸದಸ್ಯರಾದ ಅಲ್ಲಮಪ್ರಭು ಪಾಟೀಲ್, ತಿಪ್ಪಣ್ಣಪ್ಪ ಕಮಕನೂರ್, ಜಿಪಂ ಮಾಜಿ ಸದಸ್ಯರಾದ ಅರುಣಕುಮಾರ್ ಪಾಟೀಲ್, ಮತಿನ್ ಪಟೇಲ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನೀಲಕಂಠರಾವ್ ಮುಲಗೆ ಸೇರಿದಂತೆ ಭಾಗಶಃ ಕಾಂಗ್ರೆಸ್ ನಾಯಕರು ಇಂದು ದಿಲ್ಲಿಗೆ ಪ್ರಯಾಣ ಆರಂಭಿಸಿದ್ದಾರೆ.
ಮತ್ತೊಂದೆಡೆ, ತಮ್ಮ ನೆಚ್ಚಿನ ನಾಯಕನಿಗೆ ಗೆಲುವಿನ ಶುಭಾಶಯಗಳನ್ನು ಸಲ್ಲಿಸಲು ಕೇವಲ ಕಲಬುರಗಿ ಮಾತ್ರವಲ್ಲ ಗ್ರಾಮೀಣ ಭಾಗದಿಂದಲೂ ನಾಯಕರ ದಂಡು ದಿಲ್ಲಿಗೆ ತೆರಳುತ್ತಿದೆ. ಈಗಾಗಲೇ ಅಫಜಲಪುರ ತಾಲೂಕಿನಿಂದ ಸಮಾಜ ಸೇವಕ ಹಾಗೂ ಜೆ.ಎಂ.ಕೊರಬು ಫೌಂಡೇಷನ್ ಸಂಸ್ಥಾಪಕ ಜೆ.ಎಂ.ಕೊರಬು ನೇತೃತ್ವದಲ್ಲಿ 20ಕ್ಕೂ ಅಧಿಕ ಮುಖಂಡರು ಹೈದರಾಬಾದ್ ಮೂಲಕ ನವದೆಹಲಿಗೆ ಪ್ರಯಾಣಿಸಿದ್ದಾರೆ.
ಕೊರಬು ಸೇರಿದಂತೆ ಕಾಂಗ್ರೆಸ್ ಹಿರಿಯ ಮುಖಂಡ ಮಕ್ಬುಲ್ ಪಟೇಲ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸಿದ್ದಯ್ಯ ಹಿರೇಮಠ ಕರಜಗಿ, ತಾಪಂ. ಮಾಜಿ ಅಧ್ಯಕ್ಷ ಭೀಮಾಶಂಕರ ಹೊನಕೇರಿ, ಭಾಷಾ ಪಟೇಲ್ ಹಸರಗುಂಡಗಿ, ನಾಗೇಶ್ ಹೊಸಮನಿ ಸೇರಿದಂತೆ ಇನ್ನಿತರರು ಹೈದರಾಬಾದಿಗೆ ತೆರಳಿ, ಅಲ್ಲಿಂದ ವಿಮಾನದ ಮೂಲಕ ದಿಲ್ಲಿಗೆ ಹಾರಿದ್ದಾರೆ.