'ವಿಕ್ರಾಂತ್ ರೋಣ'ದ ಜಾಕ್ವೆಲಿನ್ ಫರ್ನಾಂಡಿಸ್ ಫಸ್ಟ್ ಲುಕ್ ರಿಲೀಸ್..!

ಬೆಂಗಳೂರು: ಕನ್ನಡ ಚಿತ್ರರಂಗದ ಬಹುನಿರೀಕ್ಷಿತ ಚಿತ್ರ 'ವಿಕ್ರಾಂತ್ ರೋಣ' ಭಾರೀ ನಿರೀಕ್ಷೆಯನ್ನು ಹುಟ್ಟುಹಾಕಿದೆ. ಈಗಾಗಲೇ ಟೀಸರ್, ವಿಭಿನ್ನ ಪೋಸ್ಟರ್ಗಳ ಮೂಲಕ ಗಮನ ಸೆಳೆದಿರುವ 'ವಿಕ್ರಾಂತ್ ರೋಣ' ಚಿತ್ರವನ್ನು ತೆರೆ ಮೇಲೆ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಸಂಪೂರ್ಣವಾಗಿ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಇದೀಗ ಸಿನಿಮಾ ರಿಲೀಸ್ ಮಾಡುವತ್ತ ಗಮನಹರಿಸಿದೆ.
ಕೋವಿಡ್-19 ಕಾರಣದಿಂದ 'ವಿಕ್ರಾಂತ್ ರೋಣ' (Vikranth Rona) ಸಿನಿಮಾ ಶೂಟಿಂಗ್ ಕೆಲದಿನ ಸ್ಥಗಿತವಾಗಿತ್ತು. ಕೇವಲ ಒಂದು ಹಾಡಿನ ಚಿತ್ರೀಕರಣವಷ್ಟೇ ಬಾಕಿ ಇತ್ತು. ಇತ್ತೀಚೆಗೆ ಅದನ್ನೂ ಕೂಡ ಚಿತ್ರತಂಡ ಪೂರ್ಣಗೊಳಿಸಿದ್ದು, ಮುಂದಿನ ಕೆಲಸಗಳಲ್ಲಿ ತೊಡಗಿಸಿಕೊಂಡಿದೆ. ಕಿಚ್ಚ ಸುದೀಪ್ ಜೊತೆ ಖ್ಯಾತ ಬಾಲಿವುಡ್ ತಾರೆ ಜಾಕ್ವೆಲಿನ್ ಫರ್ನಾಂಡಿಸ್(Jacqueline Fernandez) ಹೆಜ್ಜೆ ಹಾಕುವ ಮೂಲಕ ಅಧಿಕೃತವಾಗಿ ಸ್ಯಾಂಡಲ್ ವುಡ್ ಪ್ರವೇಶಿಸಿದ್ದಾರೆ.
ಬಹುವೆಚ್ಚದ ಸಿನಿಮಾ ಕುರಿತು ಚಿತ್ರತಂಡ ಆಗಾಗ ಮಾಹಿತಿ ನೀಡುತ್ತಿತ್ತು. ಜಾಕ್ವೆಲಿನ್ ಪಾತ್ರದ ಕುರಿತು ಶೀಘ್ರವೇ ತಿಳಿಸುವುದಾಗಿ ಚಿತ್ರದ ನಿರ್ದೇಶಕ ಅನೂಪ್ ಭಂಡಾರಿ(Anup Bhandari) ಈ ಹಿಂದೆ ತಿಳಿಸಿದ್ದರು. ಅದರಂತೆ ತಮ್ಮ ಟ್ವೀಟರ್ ಖಾತೆಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಆಕರ್ಷಕ ಪೋಸ್ಟರ್ ವೊಂದನ್ನು ಶೇರ್ ಮಾಡಿಕೊಂಡಿರುವ ಅವರು 'ವಿಕ್ರಾಂತ್ ರೋಣ'ದಲ್ಲಿ ಜಾಕ್ವೆಲಿನ್ ಫರ್ನಾಂಡಿಸ್ 'ಜಿಆರ್' ಆಗಿ ಕಾಣಿಸಿಕೊಳ್ಳಲಿದ್ದಾರೆ ಅಂತಾ ಹೇಳಿದ್ದಾರೆ. ಜಾಕ್ವೆಲಿನ್ ಪಾತ್ರದ ಫಸ್ಟ್ ಲುಕ್ ಜುಲೈ 31ರಂದು ರಿಲೀಸ್ ಆಗಲಿದೆ. ಅಂದಿನಿಂದ 'ಜಿಆರ್'ಅನ್ನೋ ಹೆಸರು ಚಾಲ್ತಿಗೆ ಬರಲಿದೆ ಎಂದು ಬರೆದುಕೊಂಡಿದ್ದಾರೆ.
Jaqueline Fernandez as GR in VR. @Asli_Jacqueline 's first look in @VikrantRona on July 31-ರಿಂದ ಜಿ.ಆರ್ ಅನ್ನೋ ಹೆಸರು ಚಾಲ್ತಿಗೆ ಬರುತ್ತೆ! #JacquelineVikrantRonaLook @KicchaSudeep @JackManjunath @nirupbhandari @neethaofficial @Alankar_Pandian @shaliniartss @kaanistudio @The_BigLittle pic.twitter.com/s5KBCu3Izy
— Anup Bhandari (@anupsbhandari) July 28, 2021
ನಟ ಕಿಚ್ಚ ಸುದೀಪ್ ಜೊತೆ ಜಾಕ್ವೆಲಿನ್ ಅವರು 'ವಿಕ್ರಾಂತ್ ರೋಣ'ದಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆಂದು ಚಿತ್ರತಂಡ ಹೇಳಿತ್ತು. ಅದರಂತೆ ಜಾಕ್ವೆಲಿನ್ ಅವರ 'ಜಿಆರ್' ಎಂಬ ಪಾತ್ರದ ಪರಿಚಯವನ್ನು ಅನೂಪ್ ಭಂಡಾರಿ ತಿಳಿಸಿದ್ದಾರೆ. ಫಸ್ಟ್ ಲುಕ್ ಬಗ್ಗೆ ಮಾಹಿತಿ ನೀಡಿರುವುದು ಕಿಚ್ಚ ಸುದೀಪ್ ಅಭಿಮಾನಿಗಳ ಮೊಗದಲ್ಲಿ ಸಂತಸ ಮೂಡಿಸಿದೆ.
ದುಬೈನ ಬುರ್ಜ್ ಖಲೀಫಾದಲ್ಲಿ 'ವಿಕ್ರಾಂತ್ ರೋಣ' ಸಿನಿಮಾದ ಟೀಸರ್ ರಿಲೀಸ್ ಮಾಡಲಾಗಿತ್ತು. 3D ರೂಪದಲ್ಲಿ 'ವಿಕ್ರಾಂತ್ ರೋಣ' ಸಿನಿಮಾ ರಿಲೀಸ್ ಮಾಡಲು ನಿರ್ಮಾಪಕರು ನಿರ್ಧರಿಸಿದ್ದಾರೆ. ಹೈದರಾಬಾದ್, ಬೆಂಗಳೂರು, ಕೇರಳ ಸೇರಿದಂತೆ ಅನೇಕ ಸ್ಥಳಗಳಲ್ಲಿ ಸಿನಿಮಾದ ಶೂಟಿಂಗ್ ನಡೆದಿದೆ. ಕಿಚ್ಚ ಸುದೀಪ್, ಜಾಕ್ವೆಲಿನ್ ಅಲ್ಲದೆ ನಿರೂಪ್ ಭಂಡಾರಿ, ನೀತಾ ಅಶೋಕ್ ಮುಂತಾದವರು ಅಭಿನಯಿಸಿದ್ದಾರೆ. ಶಾಲಿನಿ ಜ್ಯಾಕ್ ಮಂಜು ಮತ್ತು ಅಲಂಕಾರ್ ಪಾಂಡಿಯನ್ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ಮಾಹಿತಿಗಳ ಪ್ರಕಾರ ಆಗಸ್ಟ್ ತಿಂಗಳಿನಲ್ಲಿ 'ವಿಕ್ರಾಂತ್ ರೋಣ' ರಿಲೀಸ್ ಆಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.