ವಿಜಯ್ ದೇವರಕೊಂಡ ಜೊತೆ ಸೇರಿಕೊಂಡು ಸೈಲೆಂಟಾಗಿ ಮತ್ತೊಂದು ಸಾಧನೆ ಮಾಡಿದ ರಶ್ಮಿಕಾ ಮಂದಣ್ಣ
ಟಾಲಿವುಡ್ನಲ್ಲಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರದ್ದು ಹಿಟ್ ಜೋಡಿ ಎಂಬುದು ಸಾಬೀತಾಗಿದೆ. ಗೀತ ಗೋವಿಂದಂ ಹಾಗೂ ಡಿಯರ್ ಕಾಮ್ರೇಡ್ ಸಿನಿಮಾಗಳಲ್ಲಿ ಜೊತೆಯಾಗಿ ನಟಿಸಿದ್ದ ಈ ಜೋಡಿಗೆ ಅಭಿಮಾನಿಗಳು ಫಿದಾ ಆಗಿದ್ದರು. ಅಲ್ಲದೆ, ರಿಯಲ್ ಲೈಫ್ನಲ್ಲಿಯೂ ಅವರು ಜೋಡಿಯಾಗಲಿ ಎಂದು ಆಸೆಪಟ್ಟ ಅಭಿಮಾನಿಗಳು ಹಲವರಿದ್ದಾರೆ. ಅದೇನೇ ಇರಲಿ, ಈಗ ಇವರಿಬ್ಬರು ಹಿಂದಿಯಲ್ಲಿ ಒಂದು ಮೈಲಿಗಲ್ಲು ಮುಟ್ಟಿದ್ದಾರೆ. ಏನದು? ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಜೊತೆಯಾಗಿ ನಟಿಸಿದ್ದ 'ಡಿಯರ್ ಕಾಮ್ರೇಡ್' ಸಿನಿಮಾದ ಹಿಂದಿ ವರ್ಷನ್ ಯೂಟ್ಯೂಬ್ನಲ್ಲಿ 250 ಮಿಲಿಯನ್ (25 ಕೋಟಿ) ವೀಕ್ಷಣೆ ಕಂಡಿದೆ.
2019ರ ಜುಲೈ 26ರಂದು ಡಿಯರ್ ಕಾಮ್ರೇಡ್ ಸಿನಿಮಾ ತೆರೆಕಂಡಿತ್ತು. ಭರತ್ ಕಮ್ಮ ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದರು. ತೆಲುಗಿನಲ್ಲಿ ತಯಾರಾದ ಈ ಸಿನಿಮಾ ಕನ್ನಡ, ಮಲಯಾಳಂ ಮತ್ತು ತಮಿಳಿಗೂ ಡಬ್ ಆಗಿ ರಿಲೀಸ್ ಆಗಿತ್ತು. ಚಿತ್ರಮಂದಿರದಲ್ಲಿ ಹೇಳಿಕೊಳ್ಳುವಷ್ಟು ಯಶಸ್ಸನ್ನು 'ಡಿಯರ್ ಕಾಮ್ರೇಡ್' ಪಡೆದುಕೊಳ್ಳಲಿಲ್ಲ. ಬಳಿಕ 2020ರ ಜ.19ರಂದು ಈ ಚಿತ್ರದ ಹಿಂದಿ ಅವತರಣಿಕೆಯನ್ನು ಯೂಟ್ಯೂಬ್ನಲ್ಲಿ ಬಿಡುಗಡೆ ಮಾಡಲಾಗಿತ್ತು. ಈವರೆಗೆ ಬರೋಬ್ಬರಿ 250 ಮಿಲಿಯನ್ ಬಾರಿ ವೀಕ್ಷಣೆ ಕಂಡಿರುವುದು ರಶ್ಮಿಕಾ ಸಂತಸಕ್ಕೆ ಕಾರಣ ಆಗಿದೆ.
'ಈ ಚಿತ್ರಕ್ಕೆ ಅಂತಹ ಸಾಮರ್ಥ್ಯ ಇದೆ. ಇದು ಜನರ ಕಥೆಯುಳ್ಳ ಸಿನಿಮಾ. ದೇಶಾದ್ಯಂತ ಜನರು ಈ ಸಿನಿಮಾಗೆ ತೋರಿಸುತ್ತಿರುವ ಪ್ರೀತಿ ನೋಡಿ ಖುಷಿ ಆಗುತ್ತದೆ. ನಟಯಾಗಿ ಮತ್ತು ವ್ಯಕ್ತಿಯಾಗಿ ನನಗೆ ಡಿಯರ್ ಕಾಮ್ರೇಡ್ ಸಿನಿಮಾದಿಂದ ಬಹಳಷ್ಟು ಸಿಕ್ಕಿದೆ. ಈ ಸಿನಿಮಾ ನನ್ನ ಪಾಲಿಗೆ ನಿಜಕ್ಕೂ ಸ್ಪೆಷಲ್. ತಂಡದ ಸದಸ್ಯರು, ಅವರ ತಯಾರಿ, ಶೂಟಿಂಗ್ ಅನುಭವ ಇದನ್ನೆಲ್ಲ ನಾನು ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ' ಎಂದು ರಶ್ಮಿಕಾ ಹೇಳಿದ್ದಾರೆ.
ಡಿಯರ್ ಕಾಮ್ರೇಡ್ ಚಿತ್ರದ ಹಿಂದಿ ವರ್ಷನ್ ಅನ್ನು ಜನರು ಈ ಪರಿ ಮುಗಿಬಿದ್ದು ನೋಡಿದ್ದಾರೆ ಎಂದರೆ ಅವರಿಗೆ ರಶ್ಮಿಕಾ ಬಗ್ಗೆ ಇರುವ ಕ್ರೇಜ್ ಎಂಥದ್ದು ಎಂಬುದು ಗೊತ್ತಾಗುತ್ತದೆ. ಈಗ ನೇರವಾಗಿ ರಶ್ಮಿಕಾ ಬಾಲಿವುಡ್ಗೆ ಕಾಲಿಡುತ್ತಿದ್ದಾರೆ. 'ಮಿಷನ್ ಮಜ್ನು' ಸಿನಿಮಾದಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ ಜೊತೆ ಅವರು ತೆರೆಹಂಚಿಕೊಳ್ಳುತ್ತಿದ್ದಾರೆ. ಅದು ಅವರ ಮೊದಲ ಹಿಂದಿ ಚಿತ್ರ. ಇದಲ್ಲದೆ, 'ಗುಡ್ ಬೈ' ಚಿತ್ರದಲ್ಲಿ ನಟಿಸುತ್ತಿದ್ದ, ಅದರಲ್ಲಿ ಅಮಿತಾಭ್ ಬಚ್ಚನ್ಗೆ ಮಗಳಾಗಿ ಅಭಿನಯಿಸುವ ಅವಕಾಶ ರಶ್ಮಿಕಾಗೆ ಸಿಕ್ಕಿದೆ.