ಪಂಜಾಬ್ ಚುನಾವಣಾಪೂರ್ವ ಸಮೀಕ್ಷೆ: ಮತ್ತೊಂದು ರಾಜ್ಯ ಕಳೆದುಕೊಳ್ಳುವತ್ತ ಕಾಂಗ್ರೆಸ್
ನವದೆಹಲಿ, ನ 13: ಪಂಜಾಬ್‌ನಲ್ಲಿ ಪಕ್ಷದ ಆಂತರಿಕ ಬಿಕ್ಕಟ್ಟಿನಿಂದ ಹೈರಾಣವಾಗಿರುವ ಕಾಂಗ್ರೆಸ್, ಮುಂದಿನ ಚುನಾವಣೆಯ ನಂತರ ಆ ರಾಜ್ಯದ ಅಧಿಕಾರವನ್ನೂ ಕಳೆದುಕೊಳ್ಳಲಿದೆಯೇ? ಹೌದು ಎನ್ನುತ್ತದೆ ತಾಜಾ ಸಮೀಕ್ಷೆಯೊಂದು. ಮುಂದಿನ ವರ್ಷದ ಮಾರ್ಚ್ ತಿಂಗಳಿನ ಒಳಗೆ ಅಲ್ಲಿ ಚುನಾವಣೆ ನಡೆಯಬೇಕಿದೆ.
ಹಲವು ವರ್ಷಗಳಿಂದ ಮುಖ್ಯಮಂತ್ರಿಯಾಗಿದ್ದ ಕ್ಯಾ.ಅಮರೀಂದರ್ ಸಿಂಗ್ ಮತ್ತು ನವಜೋತ್ ಸಿಧು ನಡುವಿನ ಭಿನ್ನಮತ ಸ್ಫೋಟಗೊಂಡು ಮುಖ್ಯಮಂತ್ರಿ ಸ್ಥಾನಕ್ಕೆ ಮಾತ್ರವಲ್ಲ, ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವಕ್ಕೂ ಅಮರೀಂದರ್ ಸಿಂಗ್ ರಾಜೀನಾಮೆ ಒಗೆದು ಹೋಗಿದ್ದರು.
ಇದಾದ ನಂತರ ಸಿಧು ಆಪ್ತವಲಯದ ಚರಣ್ ಜಿತ್ ಸಿಂಗ್ ಚನ್ನಿ ಮುಖ್ಯಮಂತ್ರಿಯಾದರೂ, ಪಕ್ಷದ ಗೊಂದಲ ಕಮ್ಮಿಯಾಗಿರಲಿಲ್ಲ. ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಸಿಧು, ಮತ್ತೆ ವಾಪಸ್ ಪಡೆದುಕೊಂಡಿದ್ದರು. ದಿನದಿಂದ ದಿನಕ್ಕೆ ಮುಖಂಡರ ನಡುವೆ ಹೊಂದಾಣಿಕೆಯೇ ಇಲ್ಲದಂತಾಗಿರುವುದು ಹೈಕಮಾಂಡಿಗೆ ನುಂಗಲಾರದ ತುತ್ತಾಗುತ್ತಿದೆ.
ಇವೆಲ್ಲದರ ನಡುವೆ, ಮಾಜಿ ಸಿಎಂ ಕ್ಯಾ.ಅಮರೀಂದರ್ ಸಿಂಗ್ ಹೊಸ ಪಕ್ಷದ ಘೋಷಣೆಯನ್ನು ಮಾಡಿದ್ದಾರೆ. ಸಮೀಕ್ಷೆಯೊಂದರ ಪ್ರಕಾರ, ಕ್ಯಾಪ್ಟನ್ ಅವರ ಹೊಸ ಪಕ್ಷ ಅಕ್ಷರಸಃ ಕಾಂಗ್ರೆಸ್ ಮತಬ್ಯಾಂಕ್ ಅನ್ನು ನುಂಗಿ ನೀರು ಕುಡಿಯಲಿದೆ.
ಅಮರೀಂದರ್ ಸಿಂಗ್ ಅವರ ಹೊಸ ಪಕ್ಷ ಪಂಜಾಬ್ ಲೋಕ್ ಕಾಂಗ್ರೆಸ್ ಪಾರ್ಟಎಬಿಪಿ-ಸಿವೋಟರ್ ಜಂಟಿಯಾಗಿ ಪಂಜಾಬ್ ಚುನಾವಣಾಪೂರ್ವ ಸಮೀಕ್ಷೆಯನ್ನು ನಡೆಸಿದೆ. ಈ ಸಮೀಕ್ಷೆಯ ಪ್ರಕಾರ ಅಮರೀಂದರ್ ಸಿಂಗ್ ಅವರ ಹೊಸ ಪಕ್ಷ ಪಂಜಾಬ್ ಲೋಕ್ ಕಾಂಗ್ರೆಸ್ ಪಾರ್ಟಿ ಮತ ಸೆಳೆದುಕೊಳ್ಳುವಲ್ಲಿ ತಕ್ಕಮಟ್ಟಿನ ಯಶಸ್ಸನ್ನು ಕಾಣಲಿದೆ. ಸಮೀಕ್ಷೆಯಲ್ಲಿ ಭಾಗವಹಿಸಿದವರ ಪೈಕಿ ಶೇ. 52.1ರಷ್ಟು ಜನ ಅಮರೀಂದರ್ ಸಿಂಗ್ ಅವರ ಹೊಸ ಪಕ್ಷದಿಂದ ಕಾಂಗ್ರೆಸ್ಸಿಗೆ ಭಾರೀ ಹೊಡೆತ ಬೀಳಲಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಕೇಂದ್ರ ಸರಕಾರದ ನೂತನ ಕೃಷಿ ಬಿಲ್ ಕೂಡಾ ಚುನಾವಣೆಯಲ್ಲಿ ಮಹತ್ವದ ಪಾತ್ರ
ಕೇಂದ್ರ ಸರಕಾರದ ನೂತನ ಕೃಷಿ ಬಿಲ್ ಕೂಡಾ ಚುನಾವಣೆಯಲ್ಲಿ ಮಹತ್ವದ ಪಾತ್ರವನ್ನು ವಹಿಸಲಿದೆ. ರೈತರ ಆಕ್ರೋಶದ ರಾಜಕೀಯ ಲಾಭ ಆಮ್ ಆದ್ಮಿ ಪಕ್ಷಕ್ಕೆ ಸಿಗಲಿದೆ ಎನ್ನುವ ಅಭಿಪ್ರಾಯ ಸಮೀಕ್ಷೆಯಲ್ಲಿ ವ್ಯಕ್ತವಾಗಿದೆ. ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮುವ ಸಾಧ್ಯತೆಯಿದೆ ಎಂದು ಸಮೀಕ್ಷೆಯಲ್ಲಿ ಹೇಳಲಾಗಿದೆ. 2017ರ ಅಸೆಂಬ್ಲಿ ಚುನಾವಣೆಗೆ ಹೋಲಿಸಿದರೆ, ಕೇಜ್ರಿವಾಲ್ ಪಕ್ಷದ ವೋಟ್ ಶೇರ್ ಮತ್ತು ಗೆಲ್ಲುವ ಸೀಟಿನ ಸಂಖ್ಯೆಯೂ ಹೆಚ್ಚಾಗಲಿದೆ.
ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ಅತಿದೊಡ್ಡ ಪಕ್ಷ
ನವೆಂಬರ್ ಆರಂಭದ ವಾರದಲ್ಲಿ ಈ ಸಮೀಕ್ಷೆಗಾಗಿ ಜನಾಭಿಪ್ರಾಯ ಪಡೆದುಕೊಳ್ಳಲಾಗಿತ್ತು. ಹಾಲೀ ಮುಖ್ಯಮಂತ್ರಿ ಚರಣ್ ಜಿತ್ ಚನ್ನಿ ಮತ್ತು ಸಿಧು ನಡುವಿನ ಮನಸ್ತಾಪದಿಂದಾಗಿ ಕಾಂಗ್ರೆಸ್ ಪಕ್ಷಕ್ಕೆ ಹಾನಿಯಾಗಲಿದೆ ಎಂದು ಅಭಿಪ್ರಾಯ ಪಟ್ಟವರು ಶೇ. 62.2. ಇನ್ನು, ಅಮರೀಂದರ್ ಸಿಂಗ್ ಅವರ ನೂತನ ಪಕ್ಷದಿಂದ ಬಿಜೆಪಿಗೆ ಲಾಭವಾಗಲಿದೆಯೇ ಹೊರತು, ಆಮ್ ಆದ್ಮಿ ಪಕ್ಷಕ್ಕಲ್ಲ. ಆದರೆ, ಕ್ಯಾಪ್ಟನ್ ಹೊಸ ಪಕ್ಷದಿಂದ ಕಾಂಗ್ರೆಸ್ಸಿಗೆ ಭಾರೀ ಹೊಡೆತ ಬೀಳಲಿದೆ ಎಂದು ಸಮೀಕ್ಷೆಯಲ್ಲಿ ಹೇಳಲಾಗಿದೆ.
ಪಂಜಾಬ್ ಚುನಾವಣೆಯಲ್ಲಿ ಬಿಜೆಪಿಗೆ ಭಾರೀ ಹಿನ್ನಡೆ
ಶಿರೋಮಣಿ ಅಕಾಲಿದಳದ ಜೊತೆಗೆ ಮೈತ್ರಿ ಮುಗಿದ ನಂತರ ಮತ್ತು ರೈತರ ಕೃಷಿ ಕಾಯಿದೆ ವಿಚಾರದಿಂದಾಗಿ, ಮುಂದಿನ ಪಂಜಾಬ್ ಚುನಾವಣೆಯಲ್ಲಿ ಬಿಜೆಪಿಗೆ ಭಾರೀ ಹಿನ್ನಡೆಯಾಗಲಿದೆ. ಸಮೀಕ್ಷೆಯ ಪ್ರಕಾರ, ಆಮ್ ಆದ್ಮಿ ಪಕ್ಷ ದೇಶದಲ್ಲಿ ತಮ್ಮ ಅಧಿಕಾರವನ್ನು ಪಂಜಾಬ್ ಮೂಲಕ ಎರಡನೇ ರಾಜ್ಯದಲ್ಲಿ ವಿಸ್ತರಿಸಿಕೊಳ್ಳಲಿದೆ. ಯಾರಿಗೆ ಎಷ್ಟು ಸ್ಥಾನ ಸಿಗಬಹುದು?
ಆಮ್ ಆದ್ಮಿ ಪಕ್ಷ: 47 - 53
ಕಾಂಗ್ರೆಸ್: 42 - 50
ಶಿರೋಮಣಿ ಅಕಾಲಿದಳ: 16 -24
ಬಿಜೆಪಿ ಮತ್ತು ಇತರರು: 0 - 5