ಶಿವಮೊಗ್ಗ: ವಿವೇಕಾನಂದರು ಯುವಜನತೆಯ ದಾರಿದೀಪ - ಡಿಸಿ ಡಾ.ಆರ್ ಸೆಲ್ವಮಣಿ
ಶಿವಮೊಗ್ಗ : ಯುವಜನತೆಗೆ ದಾರಿದೀಪವಾಗಿರುವ, ದೇಶದ ಹೆಮ್ಮಯಾಗಿರುವ ಸ್ವಾಮಿ ವಿವೇಕಾನಂದರ ಚಿಂತನೆಗಳನ್ನು ನಾವೆಲ್ಲ ಅಳವಡಿಸಿಕೊಂಡು ಅವರ ಮಾರ್ಗದರ್ಶನದಲ್ಲಿ ನಡೆಯಬೇಕೆಂದು ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ವಿದ್ಯಾರ್ಥಿಗಳಿಗೆ ಕರೆ ಕೊಟ್ಟರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ನೆಹರೂ ಯುವ ಕೇಂದ್ರ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆ ಅಂಗವಾಗಿ ಇಂದು ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಲಾಗಿದ್ದ ರಾಷ್ಟ್ರೀಯ ಯುವ ದಿನ ಹಾಗೂ ಯುವ ಸಪ್ತಾಹ ಕಾಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿವೇಕಾನಂದರು ಅಮೆರಿಕಾದ ಚಿಕಾಗೋ ನಲ್ಲಿ ನಡೆದ ವಿಶ್ವ ಧಾರ್ಮಿಕ ಸಭೆಯಲ್ಲಿ ಮಾಡಿದ ಭಾಷಣವನ್ನು ಎಲ್ಲ ವಿದ್ಯಾರ್ಥಿಗಳು ಕೇಳಬೇಕು. ಅದ್ಭುತವಾದ ಭಾಷಣ ಅದಾಗಿದ್ದು ಎಲ್ಲರೂ ಕೇಳಬೇಕು. ವಿವೇಕಾನಂದರ ಚಿಂತನೆಗಳು, ಮೌಲ್ಯಗಳ ಅಧ್ಯಯನ ಮಾಡಿ ಅವುಗಳನ್ನು ಅಳವಡಿಸಿಕೊಳ್ಳಬೇಕು. ವಿದ್ಯಾರ್ಥಿಗಳು ಯಾವುದೇ ದುಶ್ಚಟಗಳು, ಬೇಡದ ಅಭ್ಯಾಸಗಳಿಗೆ ಬಲಿಯಾಗದೇ ಗುರುಗಳು, ಪೋಷಕರ ಮಾತನ್ನು ಕೇಳಿ, ಅವರ ಮಾರ್ಗದರ್ಶನದಲ್ಲಿ ಮುಂದೆ ಸಾಗಬೇಕು ಹಾಗೂ ಸಮಾಜಕ್ಕೆ, ದೇಶಕ್ಕೆ ಒಳ್ಳೆಯ ಹೆಸರು ತರುತ್ತೇನೆಂದು ಇಂದೇ ಸಂಕಲ್ಪ ಮಾಡಬೇಕು ಎಂದರು.