ಶಿವಮೊಗ್ಗದಲ್ಲಿ ಪೆಟ್ರೋಲ್ ಕಳ್ಳರ ಹಾವಳಿ: ಒಂದೇ ದಿನ 30 ಬೈಕ್ ಗಳ ಪೆಟ್ರೋಲ್ ಕದ್ದ ಕಳ್ಳರು!

ಶಿವಮೊಗ್ಗ: ಪೆಟ್ರೋಲ್ ಈಗ ಬಂಗಾರದಂತೆ ದುಬಾರಿಯಾಗುತ್ತಿದೆ. ಇದರಿಂದ ಪೆಟ್ರೋಲ್ ಕದಿಯುವವರ ಸಂಖ್ಯೆ ಸಹ ಜಾಸ್ತಿ ಆಗುತ್ತಿದೆ. ಮನೆ ಮುಂದೆ ನಿಲ್ಲಿಸಿದ್ದ ಬೈಕ್ ಗಳಲ್ಲಿನ ಪೆಟ್ರೋಲ್ ಗಳನ್ನು ಕದಿಯುವವರ ಸಂಖ್ಯೆ ಹೆಚ್ಚಾಗಿದೆ. ನಗರದ ಅಲ್ಲಲ್ಲಿ ಬೈಕ್ ಗಳಲ್ಲಿನ ಪೆಟ್ರೋಲ್ ಕದಿಯುತ್ತಿರುತ್ತಾರೆ. ಆದರೆ ಶಿವಮೊಗ್ಗ ಹೊರವಲಯ ಪುರಲೆ ಬಡಾವಣೆಯಲ್ಲಿ ಶುಕ್ರವಾರ ರಾತ್ರಿ ಇಲ್ಲಿನ ಒಕ್ಕಲಿಗರ ಬೀದಿ ಸೇರಿದಂತೆ ಒಟ್ಟು ಮೂರು ಬೀದಿಯಿಂದ ಸುಮಾರು 30 ಕ್ಕೂ ಅಧಿಕ ಬೈಕ್ ಗಳಲ್ಲಿನ ಪೆಟ್ರೋಲ್ ಕದಿಯಲಾಗಿದೆ.
ಬೆಳಗ್ಗೆ ಕೆಲಸಕ್ಕೆಂದು ಬೈಕ್ ತೆಗೆಯಲು ಹೋದಾಗ ಪೆಟ್ರೋಲ್ ಕಳ್ಳತನವಾಗಿರುವುದು ತಿಳಿದು ಬಂದಿದೆ. ಕೇವಲ ಪೆಟ್ರೋಲ್ ಕದ್ದುಕೊಂಡು ಹೋಗದೆ ಕಳ್ಳರು ಪೆಟ್ರೋಲ್ ಪೈಪ್ ಗಳನ್ನು ಕಟ್ ಮಾಡಿಟ್ಟಿದ್ದಾರೆ. ಇದರಿಂದ ಪೆಟ್ರೋಲ್ ಜೊತೆಗೆ ಪೈಪ್ ಹಾಕಿಸಿಕೊಳ್ಳಬೇಕಾಗಿದೆ.
ಒಂದೇ ಸಲ ಇಷ್ಟೊಂದು ಬೈಕ್ ಗಳ ಪೆಟ್ರೋಲ್ ಕಳ್ಳತನಕ್ಕೆ ಪೊಲೀಸರ ವೈಫಲ್ಯ ಕಾರಣ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ. ರಾತ್ರಿ ವೇಳೆ ಬೀಟ್ ಗೆ ಬರುವ ಪೊಲೀಸರು ಮುಖ್ಯ ರಸ್ತೆಗಷ್ಟೆ ತಮ್ಮನ್ನು ಸಿಮಿತಗೊಳಿಸಿಕೊಂಡಿದ್ದಾರೆ. ಇದರಿಂದಲೇ ಈ ರೀತಿಯ ಕೃತ್ಯ ಹೆಚ್ಚಾಗಲು ಕಾರಣವಾಗಿದೆ ಎನ್ನುತ್ತಾರೆ ಸ್ಥಳೀಯರಾದ ಶ್ರೀಧರ್.