ಮೂರು ಕಾರ್ಯಕ್ರಮಗಳಲ್ಲಿ ಪ್ರಧಾನಿ ಮೋದಿ ಭಾಗಿ: ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ

ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನ.11ರಂದು ಬೆಂಗಳೂರಿಗೆ ಆಗಮಿಸಲಿದ್ದು, ಮೂರು ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಆರ್ ಟಿ ನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರಿಗೆ ಭಾನುವಾರ ಪ್ರತಿಕ್ರಿಯಿಸಿದ ಅವರು, ಮೈಸೂರು-ಬೆಂಗಳೂರು-ಚೆನ್ನೈ ವಂದೇ ಭಾರತ್ ಹೈಸ್ಪೀಡ್ ರೈಲಿಗೆ ಹಸಿರು ನಿಶಾನೆ, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಎರಡನೇ ಟರ್ಮಿನಲ್ ಲೋಕಾರ್ಪಣೆ ಹಾಗೂ ನಾಡಪ್ರಭು ಕೆಂಪೇಗೌಡರ ಪ್ರತಿಮೆ ಅನಾವರಣ ಕಾರ್ಯಕ್ರಮಗಳಲ್ಲಿ ಭಾಗಿಯಾಗುವರು ಎಂದು ವಿವರಿಸಿದರು.
ಕರ್ನಾಟಕದ ಜನರ ಬಹು ದಿನದ ಬೇಡಿಕೆಯಂತೆ ಮೊದಲ ಹಂತದಲ್ಲಿ ಮೈಸೂರು ಬೆಂಗಳೂರು-ಚೆನ್ನೈ ಅತಿ ವೇಗದ ರೈಲು ಸಂಚಾರ ಆರಂಭವಾಗಲಿದೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಎರಡನೇ ಟರ್ಮಿನಲ್ 100 ಕೌಟರ್ ಗಳು, ಅತ್ಯಾಧುನಿಕ ತಂತ್ರಜ್ಞಾನ ಬಳಸಿದ ಸೃಜಿಸಿದ ಸೌಲಭ್ಯ, ಪ್ರತಿದಿನ 25 ಲಕ್ಷ ಪ್ರಯಾಣಿಕರನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಿದೆ.
ಎರಡೂ ಟರ್ಮಿನಲ್ ಸೇರಿದರೆ ದೆಹಲಿ ನಂತರ ಅತಿದೊಡ್ಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಲಿದೆ. ಜಗತ್ತಿನ ಬಹುತೇಕ ದೇಶಗಳ ಸಂಪರ್ಕ ಸಾಧಿಸಲಿದ್ದು, ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರ, ನವೋದ್ಯಮ, ಯೂನಿಕಾರ್ನ್, ಡೆಕಾಕಾರ್ನ್ ಸಹಿತ ಹಲವು ಕ್ಷೇತ್ರಗಳು ಬೆಳವಣಿಗೆ ಸಾಧಿಸಲಿದೆ. ವಿದೇಶಗಳ ಇಂಜಿನಿಯರ್ ಗಳು, ತಾಂತ್ರಿಕ, ಆರ್ಥಿಕ ನಿಪುಣರು, ಉದ್ಯೋಗ- ವ್ಯಾಸಂಗ ಬಯಸುವವರು ಬೆಂಗಳೂರಿಗೆ ಬಂದು ಹೋಗಲು ಅನುಕೂಲವಾಗಲಿದೆ.
ವಿಶ್ವದ ಮಾದರಿ ನಗರವಾಗಿ ಬೆಳೆಯಲು ನಾಡಪ್ರಭು ಕೆಂಪೇಗೌಡರ ದೂರದರ್ಶಿತ್ವ, ನಿರ್ಧಾರಗಳು ಭದ್ರ ಬುನಾದಿ ಹಾಕಿದ್ದು, ಅಂತಹ ಮಹಾನ್ ವ್ಯಕ್ತಿ 108 ಅಡಿ ಎತ್ತರದ ಕಂಚಿನ ಪ್ರತಿಮೆ ಜತೆಗೆ ಥೀಮ್ ಪಾರ್ಕ್ ನಿರ್ಮಾಣವಾಗಿದ್ದು, ಉದ್ಘಾಟನೆ, ಅನಾವರಣದ ನಂತರ ಸಾರ್ವಜನಿಕ ಸಮಾರಂಭವನ್ನು ಉದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಲಿದ್ದಾರೆ ಎಂದು ಸಿಎಂ ಬೊಮ್ಮಾಯಿ ವಿವರಿಸಿದರು.
ನಾಳೆಯಿಂದ ಪುನಾರಂಭ
ಮುಂಬರುವ ಚುನಾವಣೆ ದೃಷ್ಟಿಯಿಂದ ಸರ್ಕಾರದ ಸಾಧನೆ ಜನರು ಮುಂದಿಡಲು, ಪಕ್ಷದ ಕಾರ್ಯಕರ್ತರನ್ನು ಸಜ್ಜುಗೊಳಿಸಲು ಉದ್ದೇಶಿತ ಜನಸಂಕಲ್ಪ ಯಾತ್ರೆ ಸೋಮವಾರದಿಂದ ಪುನಾರಂಭವಾಗಲಿದೆ. ಉಡುಪಿ, ಬೆಳಗಾವಿ, ಗದಗ ಜಿಲ್ಲೆಗಳಲ್ಲಿ ಮೂರು ದಿನಗಳ ಕಾಲ ಈ ಯಾತ್ರೆ ನಡೆಯಲಿದೆ. ನ.20ಕ್ಕೆ ಬಳ್ಳಾರಿಯಲ್ಲಿ ಎಸ್ಟಿ ಮೋರ್ಚಾ, ಬಹುತೇಕ ನ.30ಕ್ಕೆ ಮೈಸೂರಿನಲ್ಲಿ ಎಸ್ ಸಿ ಮೋರ್ಚಾ ಸಮಾವೇಶ ನಡೆಯಲಿವೆ.
ಕಷ್ಟ ಸಾಧ್ಯ
ವರಿಷ್ಠರು ಗುಜರಾತ್ ಚುನಾವಣೆಯಲ್ಲಿ ಬ್ಯುಸಿ ಇರುವ ಕಾರಣ ಭೇಟಿಗೆ ಕಾಲಾವಕಾಶ ಸಿಗುವುದು ಕಷ್ಟ ಸಾಧ್ಯವಾಗಿದೆ. ಅವರಿಂದ ಕರೆ ಬಂದಾಗ ದೆಹಲಿ ಹೋಗುವೆ. ಸೋಲಾರ್ ಘಟಕಕ್ಕೆ ಖಾಸಗಿಯವರಿಗೆ ಲೈಸೆನ್ಸ್ ಅವ್ಯವಹಾರದ ತನಿಖೆ ನಡೆಯಲಿದ್ದು, ಈ ವಿಷಯದಲ್ಲಿ ಗೊಂದಲ ಬೇಡವೆಂದು ಸಿಎಂ ಬೊಮ್ಮಾಯಿ ಸ್ಪಷ್ಟಪಡಿಸಿದರು.